ಹೊಸದಿಲ್ಲಿ : ಅತ್ಯಂತ ಮಹತ್ತರ ಬೆಳವಣಿಗೆಯಲ್ಲಿ ಅಮೆರಿಕವು ಪಠಾಣ್‌ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಮೇಲೆ ನಿಷೇಧ ಹೇರುವಂತೆ ಕಳೆದ ತಿಂಗಳ ದ್ವಿತೀಯಾರ್ಧದಲ್ಲಿ ವಿಶ್ವ ಸಂಸ್ಥೆಯನ್ನು ಕೇಳಿಕೊಂಡಿದೆ.
ಅಮೆರಿಕದ ಈ ಕ್ರಮದಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಗ್ರ ನಿಗ್ರಹವನ್ನು ಆಗ್ರಹಿಸುತ್ತಿರುವ ಭಾರತವನ್ನು ಬೆಂಬಲಿಸಿದಂತಾಗಿರುವುದು ಸ್ಪಷ್ಟವಾಗಿದೆ.
ಅಮೆರಿಕದ ಕೋರಿಕೆಯನ್ನು ಬ್ರಿಟನ್ ಮತ್ತು ಫ್ರಾನ್ಸ್ ಬೆಂಬಿಲಿಸಿ ವಿಶ್ವಸಂಸ್ಥೆಯ ನಿಷೇಧ ಹೇರಿಕೆ ಸಮಿತಿಯ ಮುಂದೆ ಅಜರ್ ಮೇಲೆ ನಿಷೇಧ ಹೇರುವ ಪ್ರಸ್ತಾವವನ್ನು ಮಂಡಿಸಿವೆ.
ಹಾಗಿದ್ದರೂ ಪಾಕಿಸ್ಥಾನದ ಸರ್ವ ಋತು ಮಿತ್ರನಾಗಿರುವ ಚೀನವು ಅಮೆರಿಕದ ಈ ಪ್ರಸ್ತಾವವನ್ನು ವಿರೋಧಿಸಿದೆ.
ನಿಷೇಧ ಹೇರಿಕೆ ಕುರಿತಾದ ಯಾವುದೇ ಪ್ರಸ್ತಾವವನ್ನು ಅಂಗೀಕರಿಸುವುದಕ್ಕೆ ಅಥವಾ ತಡೆಯುವುದಕ್ಕೆ ಅಥವಾ ತಡೆ ಮುಂದುವರಿಕೆಗೆ ಇರುವ ಗಡುವು ಮುಗಿಯುವುದಕ್ಕೆ ಹತ್ತು ದಿನಗಳು ಇರುವಂತೆಯೇ ಚೀನ ಈ ಅಮೆರಿಕ ಪ್ರಸ್ತಾವ ವಿರೋಧಿ ಕ್ರಮವನ್ನು ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಮಸೂದ್ ಅಜರ್ ಮೇಲೆ ವಿಶ್ವಸಂಸ್ಥೆ ಸಮಿತಿಯು ನಿಷೇಧ ಹೇರಿದಲ್ಲಿ ಆತನ ಆಸ್ತಿಪಾಸ್ತಿಗಳನ್ನು ಸ್ತಂಭನಗೊಳಿಸಿ ಆತ ಕೈಗೊಳ್ಳುವ ವಿದೇಶ ಪ್ರಯಾಣದ ಮೇಲೆ ನಿರ್ಬಂಧ ಹೇರಬಹುದಾಗಿದೆ.