ಅಮಾಯಕ ಹುಡುಗನೊಬ್ಬ ಚಿಕ್ಕ ವಯಸ್ಸಿನಲ್ಲೇ ತನ್ನ ಕಣ್ಣೆದುರು ನಡೆಯುವ ಅನ್ಯಾಯಗಳನ್ನು ಪ್ರಶ್ನಿಸಲು ಮುಂದಾದಾಗ ಇಡೀ ವ್ಯವಸ್ಥೆ ಒಟ್ಟಾಗಿ ಸೇರಿ ಅವನ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತದೆ. ದೊಡ್ಡವನಾಗಿ ಅದೆಲ್ಲವನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸಿದಾಗ ರೌಡಿ ಎಂಬ ಪಟ್ಟ ಆತನನ್ನು ಅನಾಯಾಸವಾಗಿ ಹಿಂಬಾಲಿಸಿ ಕೊಂಡು ಬರುತ್ತಿದೆ. ಒಮ್ಮೆ ರೌಡಿ ಎನಿಸಿಕೊಂಡ ನಂತರ ವಿನಾಕಾರಣ ಒಂದಷ್ಟು ವಿರೋಧಿಗಳು, ಅವನ ಹಿಂದೆ-ಮುಂದೆ ಹುಟ್ಟಿಕೊಳ್ಳುತ್ತಾರೆ. ಬೇಕೋ, ಬೇಡವೋ ತನ್ನ ಮೇಲೆ ಮಚ್ಚು ಬೀಸಲು ಬರುವವರ ಹೆಡೆಮುರಿ ಕಟ್ಟುವಷ್ಟರಲ್ಲಿ ಕಾಲೇಜ್ ಕುಮಾರ “ಡಾನ್ ಕುಮಾರ’ನಾಗಿ ಅಂಡರ್ ವರ್ಲ್ಡ್ನಲ್ಲಿ ಕುಖ್ಯಾತಿ ಪಡೆಯುತ್ತಾನೆ. ಇದು ಈ ವಾರ ತೆರೆಗೆ ಬಂದಿರುವ “ಡಾನ್ ಕುಮಾರ’ನ ಕಥಾಹಂದರ.
ಸಿನಿಮಾದ ಟೈಟಲ್ಲೇ ಹೇಳುವಂತೆ “ಡಾನ್ ಕುಮಾರ’ ಔಟ್ ಆ್ಯಂಡ್ ಔಟ್ ಅಂಡರ್‌ವರ್ಲ್ಡ್ ಆ್ಯಕ್ಷನ್ ಸಬ್ಜೆಕ್ಟ್ ಸಿನಿಮಾ. ಇದರ ಜೊತೆಗೆ ಕಾಲೇಜ್, ಲವ್, ಫ್ಯಾಮಿಲಿ ಸೆಂಟಿಮೆಂಟ್, ಐಟಂ ಸಾಂಗ್ ಹೀಗೆ ಒಂದಷ್ಟು ಮಾಸ್ ಮಸಾಲೆ ಅಂಶಗಳನ್ನು ಸೇರಿಸಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಇನ್ನು ಬಹುತೇಕ ಹೊಸಪ್ರತಿಭೆಗಳಾದ ಚಂದ್ರಶೇಖರ್, ಸಹನಾ, ಪ್ರಕೃತಿ ಮೊದಲಾದ ಕಲಾವಿದರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಸಿನಿಮಾದ ಒಂದೆರಡು ಹಾಡುಗಳು ಗುನುಗುವಂತಿದ್ದು, ಉಳಿದಂತೆ ಛಾಯಾಗ್ರಹಣ, ಸಂಕಲನ ಸೇರಿದಂತೆ ಕೆಲ ತಾಂತ್ರಿಕ ಅಂಶಗಳ ಕಡೆಗೆ ಚಿತ್ರತಂಡ ಹೆಚ್ಚಿನ ಗಮನ ನೀಡಿದ್ದರೆ, “ಡಾನ್ ಕುಮಾರ’ ತೆರೆಮೇಲೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾಣುವ ಸಾಧ್ಯತೆಗಳಿದ್ದವು. ಮಾಸ್ ಸಿನಿಮಾ ಇಷ್ಟಪಡುವವರು, ಹೊಸ ಪ್ರತಿಭೆಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎನ್ನುವವರು ಒಮ್ಮೆ “ರೌಡಿ ಕುಮಾರ’ನನ್ನು ನೋಡಿ ಬರಲು ಅಡ್ಡಿಯಿಲ್ಲ.
ಕಾರ್ತಿಕ್