Advertisement

ಸೇನೆಗೆ ಸ್ವದೇಶಿ ನಿರ್ಮಿತ ಪ್ಯಾರಚೂಟ್‌ ಬೆಲ್ಟ್

06:23 AM Feb 23, 2019 | Team Udayavani |

ಬೆಂಗಳೂರು: ರಕ್ಷಣಾ ಇಲಾಖೆಯ ದೆಹಲಿಯ ನೋಡಲ್‌ ತಂತ್ರಜ್ಞಾನ ಕೇಂದ್ರವು ಹರ್ನೆಸ್‌ ಅಸೆಂಬಲ್‌ ಎಸ್‌ಯು 30 ಎಂಕೆಐ ಬೆಲ್ಟ್ ಸಿದ್ಧಪಡಿಸುವ ಮೂಲಕ ಸೇನಾ ಪ್ಯಾರಚೂಟ್‌ ತಯಾರಿಕೆಯಲ್ಲಿ ದೇಶಕ್ಕೆ ಕೋಟ್ಯಾಂತರ ರೂ. ಉಳಿತಾಯ ಮಾಡುತ್ತಿದೆ.

Advertisement

ಈ ಹಿಂದೆ ಭಾರತೀಯ ಸೈನಿಕರಿಗೆ ಅಗತ್ಯವಿರುವ ಪ್ಯಾರಚೂಟ್‌ಗಳನ್ನು ಸಿದ್ಧಪಡಿಸಲು ವಿದೇಶಗಳಿಂದ ದುಬಾರಿ ಹಣ ನೀಡಿ, ಹರ್ನೆಸ್‌ ಅಸೆಂಬಲ್‌ ಎಸ್‌ಯು 30 ಎಂಕೆಐ ಬೆಲ್ಟ್‌ಗಳನ್ನು ಆಮದು ಮಾಡಿಕೊಂಡು, ನಂತರ ಅಸೆಂಬಲ್‌ ಮಾಡಬೇಕಿತ್ತು.

ಅದು ಕೂಡ ವಿಶ್ವಾಸಾರ್ಹ ದೇಶಗಳಿಂದ ಮಾತ್ರ ಖರೀದಿಸಲು ಸಾಧ್ಯ. ಬೆಲ್ಟ್‌ಗಳು ಬಲಿಷ್ಠವಾಗಿಲ್ಲದೇ ಇದ್ದರೆ ಪ್ಯಾರಚೂಟ್‌ನಲ್ಲಿ ಹೋಗುವ ಸಂದರ್ಭದಲ್ಲೇ ಆಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಪ್ಯಾರಚೂಟಗಳನ್ನು ದೇಶದಲ್ಲೇ ನಿರ್ಮಿಸಲಾಗುತ್ತಿದೆಯಾದರೂ, ಅದಕ್ಕೆ ಅಗತ್ಯವಿರುವ ಹರ್ನೆಸ್‌ ಅಸೆಂಬಲ್‌ ಎಸ್‌ಯು 30 ಎಂಕೆಐ ಬೆಲ್ಟ್  ವಿದೇಶದಿಂದ ಆಮದು ಮಾಡಿಕೊಳ್ಳಲಾಗುತಿತ್ತು.

ಈಗ ದೆಹಲಿಯ ನೋಡಲ್‌ ತಂತ್ರಜ್ಞಾನ ಕೇಂದ್ರದಲ್ಲೇ ಸಿದ್ಧಪಡಿಸುತ್ತಿದ್ದೇವೆ ಎಂದು ಕೇಂದ್ರದ ಹಿರಿಯ ಎಂಜಿನಿಯರ್‌ ಮಾಹಿತಿ ನೀಡಿದರು. ಒಂದು ಹರ್ನೆಸ್‌ ಅಸೆಂಬಲ್‌ ಎಸ್‌ಯು 30 ಎಂಕೆಐ ಬೆಲ್ಟ್ಗೆ ವಿದೇಶದಿಂದ 2.10 ಲಕ್ಷ ರೂ. ನೀಡಿ ಖರೀದಿ ಮಾಡಬೇಕಿತ್ತು. ಈಗ ನಾವೇ ಇದನ್ನು 19,464 ರೂ.ಗಳಿಗೆ ಸಿದ್ಧಪಡಿಸುತ್ತಿದ್ದೇವೆ.

ಇದರಿಂದ ಒಂದು ಪ್ಯಾರಚೂಟ್‌ ಬೆಲ್ಟ್ ತಯಾರಿಕೆಯಲ್ಲಿ 1,90,536 ರೂ.ಗಳನ್ನು ಉಳಿಸುತ್ತಿದ್ದೇವೆ. ಅಷ್ಟು ಮಾತ್ರವಲ್ಲದೇ ಉತ್ಕೃಷ್ಟ ತಂತ್ರಜ್ಞಾನ ಬಳಸಿ ಅತ್ಯಂತ ಬಲಿಷ್ಠ ಬೆಲ್ಟ್ ತಯಾರಿಸುತ್ತಿದ್ದೇವೆ. ವಾಯುಸೇನೆ, ಭೂ ಸೇನೆ ಹಾಗೂ ನೌಕ ಸೇನೆಯ ಬೇಡಿಕೆಯಂತೆ ಇದನ್ನು ಉತ್ಪಾದನೆ ಮಾಡುತ್ತಿದ್ದೇವೆ ಎಂದು ವಿವರ ನೀಡಿದರು.

Advertisement

ಯುದ್ಧ ವಿಮಾನ ಅಥವಾ ಸೇನಾ ವಿಮಾನ ಆಕಸ್ಮಿಕವಾಗಿ ಅಪಘಾತ ಸಂಭವಿಸಿದಲ್ಲಿ ಪೈಲೆಟ್‌ ವಿಮಾನದ ಸೀಟು ಸೇಮತವಾಗಿ ಹೊರಗಡೆ ಬರಬಹುದಾದ ವ್ಯವಸ್ಥೆಯಿದೆ. ಪ್ಯಾರಚೂಟ್‌ ಮತ್ತು ಪೈಲೆಟ್‌ಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಅಪಘಾತದ ಸಂದರ್ಭದಲ್ಲಿ ಪ್ಯಾರಚೂಟ್‌ ನೇರವಾಗಿ ಹೊರಗೆ ಬರುವ ಸಾಮರ್ಥ್ಯ ಹೊಂದಿದೆ.

ಇದು 44 ಎಂ.ಎಂ. ಅಗಲ ಇದೆ. ನೈಲಾನ್‌ ಮೆಟಿರಿಯಲ್‌ ಬಳಸಿ ತಯಾರಿಸುತ್ತಿದ್ದೇವೆ. ಸ್ಟೀಲ್‌ ಗ್ರೇ ಬಣ್ಣ ಹೊಂದಿದೆ. ಐದು ವರ್ಷ ಬಾಳಿಕೆಗೆ ಬರುತ್ತದೆ ಎಂದು ಹೇಳಿದರು. ರಕ್ಷಣಾ ಇಲಾಖೆಯ ಭಾಗವಾಗಿ ನಾವೇ ಇದನ್ನು ಸಿದ್ಧಪಡಿಸುವುದರಿಂದ ವಾರ್ಷಿಕವಾಗಿ ಕೋಟ್ಯಾಂತರ ರೂ. ಉಳಿತಾಯವಾಗಲಿದೆ.

ಉತ್ಪಾದನ ಕಾರ್ಯವನ್ನು ಈಗಾಗಲೇ ಆರಂಭಿಸಿದ್ದೇವೆ. ವಾಯುಸೇನೆಗೆ ಹೆಚ್ಚಿನ ಪ್ಯಾರಚೂಟ್‌ ಅಗತ್ಯವಿದೆ. ಹಾಗೆಯೇ ಭೂ ಸೇನೆಯ ಕೆಲವು ರೆಜಮೆಂಟ್‌ಗಳಿಗೂ ಇದರ ಅವಶ್ಯಕತೆ ಇದೆ. ತುರ್ತು ಅಪಘಾತದ ಸಂದರ್ಭದಲ್ಲಿ ಆಧುನಿಕ ಪ್ಯಾರಚೂಟ್‌ ಪೈಲೆಟ್‌ಗಳ ಜೀವ ಉಳಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next