Advertisement

ದೇಶೀಯ ಈರುಳ್ಳಿ ಪೂರೈಕೆ: ಬೆಲೆ ಇಳಿಕೆ ನಿರೀಕ್ಷೆ

12:52 AM Dec 10, 2019 | Team Udayavani |

ಮಂಗಳೂರು: ಇಲ್ಲಿನ ಸಗಟು ಮಾರುಕಟ್ಟೆಗೆ ದೇಶೀಯ ಈರುಳ್ಳಿ ಸೋಮವಾರ ಆವಕವಾಗಿದ್ದು, ಬೆಲೆ ತುಸು ಇಳಿದಿದೆ. ಈಜಿಪ್ಟ್ ಈರುಳ್ಳಿಯೂ ಬಂದಿದ್ದು, ಬೆಲೆಯೂ ಕಡಿಮೆಯಿದೆ. ದೇಶೀಯ ಹಳೆಯ ಮತ್ತು ಹೊಸ ಈರುಳ್ಳಿಗೆ ಸೋಮವಾರ ತಲಾ 10 ರೂ. ಕಡಿಮೆಯಾಗಿದೆ. ಈಜಿಪ್ಟ್ ಈರುಳ್ಳಿ 115ರಿಂದ 130 ರೂ.ಗೆ ಮಾರಾಟವಾಗಿದೆ. ಸೋಮವಾರ ಮಂಗಳೂರಿನಲ್ಲಿ ಈರುಳ್ಳಿಯ ಸರಾಸರಿ ಬೆಲೆ 70 ರೂ.ಗಳಿಂದ 150 ರೂ. ವರೆಗೆ ಇತ್ತು ಎಂದು ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಜನಾರ್ದನ ಸಾಲಿಯಾನ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಗುಜರಾತ್‌ ಮತ್ತು ಇಂದೋರ್‌ನಿಂದ 5 ಲೋಡ್‌ ಈರುಳ್ಳಿ ಮಂಗಳೂರಿನ ಹಳೆ ಬಂದರು ಪ್ರದೇಶಕ್ಕೆ ಬಂದಿದ್ದು, ಸಗಟು ಮಾರುಕಟ್ಟೆಯಲ್ಲಿ 95 ರೂ.ಗಳಿಂದ 115 ರೂ.ಗೆ ಮಾರಾಟವಾಗಿದೆ. ಇದೇ ಈರುಳ್ಳಿಗೆ ಚಿಲ್ಲರೆ ಮಾರುಕಟ್ಟೆಯಲ್ಲಿ 130- 140 ರೂ. ಇತ್ತು. ಇದು ಹೊಸ ಈರುಳ್ಳಿ ಆಗಿದ್ದರೂ ಗುಣಮಟ್ಟ ಚೆನ್ನಾಗಿದೆ. ಬಂದರಿನ ತಲೆಹೊರೆ ಕಾರ್ಮಿಕರಿಗೆ ಇಂದು ಕೆಲಸ ಸಿಕ್ಕಿದ್ದು, ಖುಷಿಯಿಂದಿದ್ದರು ಎಂದು ತಲೆಹೊರೆ ಕಾರ್ಮಿಕರ ಸಂಘದ ಮುಖಂಡ ಬಿ.ಕೆ. ಇಮಿ¤ಯಾಜ್‌ ತಿಳಿಸಿದ್ದಾರೆ.

ಹಾಪ್‌ಕಾಮ್ಸ್‌ಗೆ ನಷ್ಟ
ಈರುಳ್ಳಿ ಬೆಲೆ ಏರಿಕೆಯು ಹಾಪ್‌ಕಾಮ್ಸ್‌ನ ದ.ಕ. ಜಿಲ್ಲಾ ಘಟಕಕ್ಕೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಅವಿಭಜಿತ ದ.ಕ. ಜಿಲ್ಲೆಯ 104 ಹಾಸ್ಟೆಲ್‌ಗ‌ಳಿಗೆ 22ರಿಂದ 28 ರೂ. ಬೆಲೆಗೆ ಈರುಳ್ಳಿ ಪೂರೈಕೆ ಮಾಡುವ ಬಗ್ಗೆ ಹಾಪ್‌ಕಾಮ್ಸ್‌ ಗುತ್ತಿಗೆ ವಹಿಸಿಕೊಂಡಿದ್ದು, ಗುತ್ತಿಗೆಯ ಕರಾರನ್ನು ಪಾಲಿಸಲೇ ಬೇಕಿರುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತಿದೆ. ನವೆಂಬರ್‌ ಮೊದಲ ವಾರ 60 ರೂ.ಗಳಷ್ಟಿದ್ದ ಈರುಳ್ಳಿ ಬೆಲೆ ಈಗ 118 ರೂ.ಗಳಿಂದ 130 ರೂ. ತನಕ ಇದೆ. ಇಷ್ಟೊಂದು ಬೆಲೆಗೆ ಈರುಳ್ಳಿ ಖರೀದಿಸಿ 22/ 28 ರೂ.ಗೆ ಸರಬರಾಜು ಮಾಡುತ್ತಿದೆ ಹಾಪ್‌ಕಾಮ್ಸ್‌. 104 ಹಾಸ್ಟೆಲ್‌ಗ‌ಳಿಗೆ ಪೂರೈಕೆ ಮಾಡಲು ದಿನಕ್ಕೆ 2 ಕ್ವಿಂಟಾಲ್‌ ಈರುಳ್ಳಿಯ ಆವಶ್ಯಕತೆ ಇದೆ. ಉತ್ತರ ಭಾರತದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿರುವ ಎನ್‌ಐಟಿಕೆ ಹಾಸ್ಟೆಲ್‌ಗೆ ದಿನಕ್ಕೆ ಸರಾಸರಿ 100 ಕೆ.ಜಿ. ಈರುಳ್ಳಿ ಪೂರೈಸಲಾಗುತ್ತಿದೆ.

ಹಾಸನ, ಚಿಕ್ಕಮಗಳೂರು ಮತ್ತು ಬೆಂಗಳೂರಿ ನಿಂದ ಈರುಳ್ಳಿ ಸರಬರಾಜು ಆಗುತ್ತದೆ. ಮಂಗಳವಾರ ಒಂದು ಟನ್‌ ಈರುಳ್ಳಿ ಬರುವ ಸಾಧ್ಯತೆ ಇದೆ ಎಂದು ಹಾಪ್‌ಕಾಮ್ಸ್‌ನ ಜಿಲ್ಲಾ ವ್ಯವಸ್ಥಾಪಕ ರವಿಚಂದ್ರ ಶೆಟ್ಟಿ ತಿಳಿಸಿದ್ದಾರೆ.

ಕುಂದಾಪುರ: ಸದ್ಯದಲ್ಲೇ ಹೊಸ ಈರುಳ್ಳಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು, ಆಗ ದರ ಇಳಿಕೆ
ಯಾಗುವ ಸಾಧ್ಯತೆ ಇರುವುದರಿಂದ ಮಾರುಕಟ್ಟೆ, ಅಂಗಡಿಗಳಲ್ಲಿ ಈರುಳ್ಳಿ ದಾಸ್ತಾನು ಇರಿಸಿಕೊಳ್ಳಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಇದು ಕೃತಕ ಅಭಾವಕ್ಕೆ ಕಾರಣವಾಗಿದೆ. ಕುಂದಾಪುರದಲ್ಲಿ ಕೆಲವೇ ಕೆಲವು ಅಂಡಿಗಳಲ್ಲಿ ಇದ್ದ ಈರುಳ್ಳಿ ಕೆಜಿಗೆ 140 ರೂ. ಗಳಿಂದ 160 ರೂ.ವರೆಗೆ ಮಾರಾಟವಾಗಿದೆ.

Advertisement

ಉಡುಪಿಯಲ್ಲಿ ಗರಿಷ್ಠ 140 ರೂ.
ಉಡುಪಿ: ನಗರದ ಮಾರುಕಟ್ಟೆಯಲ್ಲಿ ಸೋಮವಾರ ಈರುಳ್ಳಿ ಬೆಲೆ ಏರಿಕೆಯಾಗಿದೆ. ಈರುಳ್ಳಿ ದರ ಕೆ.ಜಿ.ಗೆ 140 ರೂ., ಹೊಸತು 110 ರೂ., ಸಣ್ಣ ಗಾತ್ರದ್ದು, 90ರಿಂದ100 ರೂ., ಈಜಿಪ್ಟ್ ಈರುಳ್ಳಿ 125 ರೂ.ನಂತೆ ಮಾರಾಟವಾಗಿದೆ.

ಚಿಕ್ಕಮಗಳೂರು ನಾಟಿ ಈರುಳ್ಳಿಗೆ ಬೇಡಿಕೆ
ಬೆಳ್ತಂಗಡಿ: ಈರುಳ್ಳಿ ಗಗನ ಕುಸುಮ ವಾಗುತ್ತಿರುವ ನಡುವೆಯೇ ಈ ಭಾಗದ ಹೆಚ್ಚಿನ ಸಂತೆ ಮಾರುಕಟ್ಟೆಗಳಲ್ಲಿ ಚಿಕ್ಕಮಗಳೂರಿನ ನಾಟಿ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಚಿಕ್ಕಮಗಳೂರಿಂದ ಬರುವ ಗಾತ್ರದಲ್ಲಿ ಕಿರಿದಾದ ನಾಟಿ ಈರುಳ್ಳಿ ಕೆ.ಜಿ.ಗೆ 80ರಿಂದ 100 ರೂ.ಗೆ ಮಾರಾಟವಾಗುತ್ತಿದೆ.
ಹೊಟೇಲ್‌, ಗಾಡಿ ಅಂಗಡಿಗಳಿಗೆ ಸಂಕಷ್ಟ ಹೊಟೇಲ್‌, ತಳ್ಳುಗಾಡಿ ಅಂಗಡಿಗಳಲ್ಲಿ ಈರುಳ್ಳಿ ಬಜೆ, ಆಮ್ಲೆಟ್‌ ಸೇರಿದಂತೆ ಅಗತ್ಯ ಆಹಾರಗಳಿಗೆ ಈರುಳ್ಳಿ ಬಳಸದಂತಾಗಿದೆ. ಇದರಿಂದ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೊಟೇಲ್‌ ಮಾಲಕರಲ್ಲಿ ವಿಚಾರಿಸಿದರೆ 50 ರೂ.ಗೆ ದರ ಇಳಿಕೆಯಾಗದ ವಿನಾ ಖರೀದಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತರಕಾರಿ ದರ ಏರಿಕೆ
ಹೆಚ್ಚಿನೆಲ್ಲ ತರಕಾರಿಗಳ ಬೆಲೆಯೂ ಏರಿದೆ. ಬೀನ್ಸ್‌ ಕೆಜಿಗೆ 25-30 ರೂ. ಇದ್ದುದು ಈಗ 50 ರೂ., ಅಲಸಂಡೆ 30 ರೂ.ನಿಂದ 60 ರೂ., ಬೆಂಡೆಕಾಯಿ 30 ರೂ. ಇದ್ದುದು 60 ರೂ., ಬಿಟ್ರೂಟ್‌ 30 ರೂ.ನಿಂದ 60 ರೂ.ಗೆ ಏರಿಕೆಯಾಗಿದೆ. 3-4 ದಿನಗಳ ಹಿಂದೆ 1 ಕೆಜಿ ಕೊತ್ತಂಬರಿ ಸೊಪ್ಪಿಗೆ 80 ರೂ. ಇದ್ದುದು ಈಗ 200 ರೂ.ವರೆಗೆ ಏರಿದೆ. ನುಗ್ಗೆಕಾಯಿ 280ರಿಂದ 300 ರೂ. ಇದೆಯಾದರೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಚಳಿಯಲ್ಲಿ ಬೆಳೆಯ ಪ್ರಮಾಣ ಕಡಿಮೆ ಇರುವುದರಿಂದ ತರಕಾರಿ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಕುಂದಾಪುರದ ತರಕಾರಿ ವ್ಯಾಪಾರಿ ಗಣೇಶ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next