Advertisement

ಮನೆಯಲ್ಲಿನ ನೈಸರ್ಗಿಕ ತೇವಾಂಶಕಾರಕಗಳು

03:45 AM Mar 03, 2017 | |

ಪುಟ್ಟ ಮಕ್ಕಳ ಚರ್ಮವೇ ಇರಲಿ, ವಯಸ್ಕರ ಚರ್ಮವೇ ಇರಲಿ ಚರ್ಮ ಒಣಗುವುದನ್ನು ನಿವಾರಿಸಲು, ಮುಖದ ಕಾಂತಿ ವರ್ಧಿಸಲು, ಕಲೆ ಹಾಗೂ ನೆರಿಗೆಗಳನ್ನು ನಿವಾರಿಸಲು ಹಾಗೂ ತೇವಾಂಶದಿಂದ ಕೂಡಿ ಚರ್ಮ ಮೃದು, ಸ್ನಿಗ್ಧವಾಗಿರಲು ತೇವಾಂಶಕಾರಕ ಅಥವಾ ಮಾಯಿಶ್ಚರೈಸರ್‌ಗಳ ಬಳಕೆ ಅವಶ್ಯ.ಮನೆಯಲ್ಲೇ ತಯಾರಿಸಬಹುದಾದ ಸುಲಭ ಸರಳ ನೈಸರ್ಗಿಕ ಮಾಯಿಶ್ಚರೈಸರ್‌ಗಳು ಇಲ್ಲಿವೆ.

Advertisement

ಜೇನುತುಪ್ಪ
ಶುದ್ಧ ಜೇನುತುಪ್ಪದಲ್ಲಿ ಅಧಿಕ ಆ್ಯಂಟಿ ಆಕ್ಸಿಡೆಂಟ್‌ಗಳಿವೆ. ಅದು ಬ್ಯಾಕ್ಟೀರಿಯಾ ನಿರೋಧಕವೂ ಹೌದು. ಉತ್ತಮ ಕ್ಲೆನ್ಸರ್‌ ಕೂಡ ಹೌದು. ಇದನ್ನು ಈ ಕೆಳಗಿನ ವಿಧಾನದಲ್ಲಿ ಮಾಯಿಶ್ಚರೈಸರ್‌ ರೂಪದಲ್ಲಿ ಬಳಸಬಹುದು.

ವಿಧಾನ: 10 ಚಮಚ ಶುದ್ಧ ಜೇನಿಗೆ 8 ಚಮಚ ನೀರು ಬೆರೆಸಿ ಚೆನ್ನಾಗಿ ಕಲಕಬೇಕು. ತದನಂತರ ಈ ಪೇಸ್ಟನ್ನು ಮುಖಕ್ಕೆ ಮೃದುವಾಗಿ ಲೇಪಿಸಿ ತುದಿಬೆರಳುಗಳಿಂದ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆದರೆ ತೇವಾಂಶದಿಂದ ಕೂಡಿ ಮೊಗದ ಚರ್ಮ ಕಾಂತಿಯುತವಾಗುತ್ತದೆ.

ಮಜ್ಜಿಗೆ
ಮಜ್ಜಿಗೆಯಲ್ಲಿ ಲ್ಯಾಕ್ಟಿಕ್‌ ಆಮ್ಲ ಅಧಿಕವಾಗಿದೆ. ಹಾಂ! ದುಬಾರಿ ಬೆಲೆಯ ಮೊಗದ ಕ್ರೀಮ್‌ಗಳಲ್ಲಿ ಲ್ಯಾಕ್ಟಿಕ್‌ ಆಮ್ಲ ಮುಖ್ಯವಾಗಿ ಇದ್ದೇ ಇರುತ್ತದೆ. ಯಾಕೆ ಗೊತ್ತೆ? ಲ್ಯಾಕ್ಟಿಕ್‌ ಆಮ್ಲವು ಮೃತ ಚರ್ಮದ ಕೋಶಗಳನ್ನು ನಿವಾರಣೆ ಮಾಡಿ ತಾಜಾ ನವಜೀವ ಕೋಶಗಳ ಉತ್ಪತ್ತಿಗೆ ಸಹಕಾರಿ.

ಹಾಂ! ಮನೆಯಲ್ಲಿಯೇ ನಿತ್ಯ ಮಜ್ಜಿಗೆಯನ್ನು ಬಳಸಿ ಈ ಕೆಳಗಿನಂತೆ ಮಾಯಿಶ್ಚರೈಸರ್‌ ಪರಿಣಾಮವನ್ನು ತಾಜಾ ಶುಭ್ರಮುಖವನ್ನು ಪಡೆಯಲು ಸಾಧ್ಯ.

Advertisement

ಅತಿ ಹುಳಿಯಿಲ್ಲದ ತಾಜಾ ಮಜ್ಜಿಗೆಯನ್ನು ತೆಗೆದುಕೊಂಡು, ಹತ್ತಿಯ ಉಂಡೆಯನ್ನು ಅದರಲ್ಲಿ ಅದ್ದಿ ವರ್ತುಲಾಕಾರದಲ್ಲಿ ಮುಖಕ್ಕೆ ಮೃದುವಾಗಿ ಮಾಲೀಶು ಮಾಡಬೇಕು. ಹೀಗೆ 10 ನಿಮಿಷ ಮಾಲೀಶು ಮಾಡಿದ ಬಳಿಕ ಮಜ್ಜಿಗೆಯ ಲೇಪವನ್ನು 20 ನಿಮಿಷಗಳ ಕಾಲ ಹಾಗೇ ಬಿಟ್ಟು ತದನಂತರ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ನಿತ್ಯ ಅಥವಾ ಎರಡು ದಿನಗಳಿಗೊಮ್ಮೆ ಬಳಸಿದರೆ ಒಣಚರ್ಮ ತೇವಾಂಶದಿಂದ ಕೂಡಿ ತಾಜಾ ಹಾಗೂ ಶುಭ್ರವಾಗಿ ಹೊಳೆಯುತ್ತದೆ.

ಹರಳೆಣ್ಣೆ
ಹರಳೆಣ್ಣೆಯು ಉತ್ತಮ ಫ್ಯಾಟಿ ಆಮ್ಲಗಳಿಂದ ಕೂಡಿದ್ದು ಇದರಲ್ಲಿರುವ ಲಿನೋಲಿಕ್‌ ಆಮ್ಲವು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಕರಿಸುತ್ತದೆ.

ಅತೀ ರೂಕ್ಷ ಹಾಗೂ ಒಣಚರ್ಮವಿರುವವರಿಗೆ ಹರಳೆಣ್ಣೆಯ ಈ ವಿಧದ ಮಾಯಿಶ್ಚರೈಸರ್‌ ಪರಿಣಾಮಕಾರಿ.

ಹರಳೆಣ್ಣೆ 4 ಚಮಚಕ್ಕೆ 2 ಚಮಚ ಹಾಲು ಬೆರೆಸಿ ಚೆನ್ನಾಗಿ ಕಲಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ತುದಿಬೆರಳುಗಳಿಂದ ಮುಖದ ಚರ್ಮಕ್ಕೆ ಮೃದುವಾಗಿ ಲೇಪಿಸಿ ಮಾಲೀಶು ಮಾಡಬೇಕು. ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದರೆ ಒಣಗಿದ ಒರಟು ಚರ್ಮ ಕಾಂತಿಯುತ ಹಾಗೂ ಮೃದುವಾಗಿರುವುದು ಕಂಡುಬರುತ್ತದೆ. ಇದನ್ನು ನಿತ್ಯ ಅಥವಾ ಎರಡು ದಿನಗಳಿಗೊಮ್ಮೆ ಬಳಸಿದರೆ ಒಣ ಚರ್ಮದವರಲ್ಲಿ ಬಲು ಉಪಯುಕ್ತ ತೇವಾಂಶಕಾರಕವಾಗಿದೆ.

ಸೌತೆಕಾಯಿ
ಎಳೆ ಮುಳ್ಳು ಸೌತೆಕಾಯಿಯಲ್ಲಿ ಅಧಿಕ ನೀರಿನ ಅಂಶವಿದ್ದು ಮ್ಯಾಗ್ನಿàಶಿಯಂ, ಪೊಟಾಶಿಯಂ, ವಿಟಮಿನ್‌ “ಎ’ ಹಾಗೂ ವಿಟಮಿನ್‌ “ಈ’ ಅಧಿಕವಾಗಿದೆ. ಇದರ ಲೇಪನ ತೇವಾಂಶ ವರ್ಧಿಸುವುದರ ಜೊತೆಗೆ ನೆರಿಗೆಗಳನ್ನು ನಿವಾರಿಸುತ್ತದೆ.

ವಿಧಾನ: ಸೌತೆಕಾಯಿಯ ದುಂಡು ಬಿಲ್ಲೆಗಳನ್ನು ಕತ್ತರಿಸಿ ಅದಕ್ಕೆ ಸ್ವಲ್ಪ ಜೇನು ಲೇಪಿಸಿ ಮುಖದ ಚರ್ಮವನ್ನು ಮಾಲೀಶು·ಮಾಡಬೇಕು. 20 ನಿಮಿಷಗಳ ಬಳಿಕ ತೊಳೆಯಬೇಕು.ಇನ್ನೊಂದು ಪರಿಣಾಮಕಾರಿ ವಿಧಾನವೆಂದರೆ ಸೌತೆಕಾಯಿ ಅರೆದು ಪೇಸ್ಟ್‌ ತಯಾರಿಸಿ ನಾಲ್ಕು ಚಮಚ ಪೇಸ್ಟ್‌ಗೆ ಒಂದು ಚಮಚ ಜೇನು ಬೆರೆಸಿ ಮುಖಕ್ಕೆ ಫೇಸ್‌ಪ್ಯಾಕ್‌ ಮಾಡಬೇಕು. ಅರ್ಧ ಗಂಟೆಯ ಬಳಿಕ ತೊಳೆದರೆ ಮೃದು, ತಾಜಾ, ಕಾಂತಿಯುತ ಸ್ನಿಗ್ಧ ಚರ್ಮ ಪಡೆಯಬಹುದು.

– ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next