Advertisement

ಡೊಂಬಿವಲಿ ಪಶ್ಚಿಮ ಶ್ರೀ ಜಗದಂಬಾ ಮಂದಿರ: ನವರಾತ್ರಿ ಉತ್ಸವ 

03:39 PM Sep 22, 2017 | |

ಡೊಂಬಿವಲಿ: ಡೊಂಬಿವಲಿ ಪಶ್ಚಿಮದ ಯಕ್ಷಕಲಾ ಸಂಸ್ಥೆಯ ಸಂಚಾಲಕತ್ವದ ಪ್ರತಿಷ್ಠಿತ ಶ್ರೀ ಜಗದಂಬಾ ಮಂದಿರದ ತೃತೀಯ ವಾರ್ಷಿಕ ಶರನ್ನವರಾತ್ರಿ ಮಹೋತ್ಸವವು ಸೆ. 21 ರಂದು ಪ್ರಾರಂಭಗೊಂಡಿತು.

Advertisement

ವೇದಮೂರ್ತಿ ಪಂಡಿತ ಶಂಕರ ನಾರಾಯಣ ತಂತ್ರಿ ಹಾಗೂ ವೇದಮೂರ್ತಿ ಪಂಡಿತ್‌ ಗುರುಪ್ರಸಾದ್‌ ಭಟ್‌ ಅವರ ಪೌರೋಹಿತ್ಯದಲ್ಲಿ  ಸಹ ಅರ್ಚಕರಾದ ಶ್ರೀ ಗಣೇಶ್‌ ಭಟ್‌ ಅವರ ಸಾರಥ್ಯದಲ್ಲಿ, ಗುರುವಾರ ಮುಂಜಾನೆಯಿಂದ ನೈರ್ಮಲ್ಯ ವಿಸರ್ಜನೆ, ಮಹಾಗಣಪತಿ ಹೋಮ, ಸ್ವಸ್ತಿ ಪುಣ್ಯಾಹ ವಾಚನ, ಪ್ರಸನ್ನ ಪೂಜೆ, ಪಂಚಾಮೃತ ಅಭಿಷೇಕ, ಶ್ರೀ ದೇವಿ ಸಹಸ್ರ ನಾಮಾರ್ಚನೆ, ಉಗ್ರಾಣ ಮುಹೂರ್ತದೊಂದಿಗೆ ನವರಾತ್ರಿ ಉತ್ಸವವು ಪ್ರಾರಂಭಗೊಂಡಿತು.

ಮಂದಿರದ ಗೌರವಾಧ್ಯಕ್ಷ ದಿವಾಕರ್‌ ರೈ ಮತ್ತು ಶರ್ಮಿಳಾ ರೈ ದಂಪತಿ ವಿವಿಧ ಪೂಜೆಗಳ ಯಜಮಾನತ್ವ ವಹಿಸಿದ್ದರು. ಮಂದಿರದ ಅಧ್ಯಕ್ಷ ಹರೀಶ್‌ ಶೆಟ್ಟಿ, ಗೌರವಾಧ್ಯಕ್ಷ ದಿವಾಕರ್‌ ರೈ, ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಕೋಟ್ಯಾನ್‌, ಕೋಶಾಧಿಕಾರಿ ನಾಗರಾಜ ಮೊಗವೀರ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್‌ ಶೆಟ್ಟಿ ಶೃಂಗೇರಿ, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ನವರಾತ್ರಿ ಉತ್ಸವದ ವಿವಿಧ ಪೂಜೆಗಳು ನಡೆಯಿತು.

ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಡೊಂಬಿವಲಿ ವಿವಿಧ ತುಳು-ಕನ್ನಡ ಹಾಗೂ ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಉದ್ಯಮಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.

ಉತ್ಸವವು ಸೆ. 30ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.  ಪ್ರತಿನಿತ್ಯ ಬೆಳಗ್ಗೆ 10ರಿಂದ ಮತ್ತು ಸಂಜೆ 4ರಿಂದ ಆಮಂತ್ರಿತ ಭಜನ ಮಂಡಳಿ ಗಳಿಂದ ಭಜನಾಮೃತ ಸೇವೆ ನಡೆಯಲಿದೆ.  ಶ್ರೀಕ್ಷೇತ್ರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಮಲ್ಲಿಗೆ ಸೇವೆ, ಹೂವಿನ ಪೂಜೆ, ದೀಪಾರಾಧನೆ, ಕುಂಕುಮಾರ್ಚನೆ, ಕರ್ಪೂರಾರತಿ ಇತ್ಯಾದಿ ಸೇವೆಗಳು ನಡೆಯಲಿದ್ದು, ಅನ್ನಸಂತರ್ಪಣೆಗಾಗಿ ಹಸಿರು ಹೊರೆಕಾಣಿಕೆಗಳನ್ನು ಹಾಗೂ ಎಲ್ಲಾ ತರಹದ ಹರಕೆ ಹಾಗೂ ಸಹಾಯವನ್ನು ನೀಡಲಿಚ್ಛಿಸುವ ಭಕ್ತಾದಿಗಳು ಮಂದಿರದ ಪದಾಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next