ಡೊಂಬಿವಲಿ: ಇಂದಿನ ಯಾಂತ್ರಿಕ ಜೀವನ ಕ್ರಮದಿಂದ ಮನುಷ್ಯನಲ್ಲಿ ಮಾನಸಿಕ ಒತ್ತಡ, ಭಯ, ದುಗುಡ, ದುಮ್ಮಾನ ಹೆಚ್ಚಾಗುತ್ತಿದೆ. ಅವುಗಳನ್ನು ಕಡಿಮೆ ಮಾಡುವಲ್ಲಿ ಸಂಗೀತ, ಚಿತ್ರಕಲೆ ಇತ್ಯಾದಿ ಹವ್ಯಾಸಗಳು ಪ್ರಭಾವ
ಶಾಲಿಯಾಗಿವೆ. ಆದ್ದರಿಂದ ಪ್ರತಿಯೊಬ್ಬರು ಇಂತಹ ಒಂದೆರಡು ಹವ್ಯಾಸಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಇಂತಹ ಒಂದು ಅಪೂರ್ವ ಅವಕಾಶಗಳನ್ನು ಒದಗಿಸಿಕೊಡುತ್ತಿರುವ ಡೊಂಬಿವಲಿಯ ಗೆಳೆಯರ ಸ್ವಾವಲಂಬನ ಕೇಂದ್ರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಈ ಸಂಸ್ಥೆಗಾಗಿ ತನ್ನಿಂದಾಗುವ ಎಲ್ಲಾ ರೀತಿಯ ಸಹಾಯ, ಪ್ರೋತ್ಸಾಹ ಲಭಿಸಲಿದೆ ಎಂದು ಗಾಯಕಿ ಆಶಾ ನಾಯಕ್ ನುಡಿದರು.
ಮಾ. 17ರಂದು ಡೊಂಬಿವಲಿಯ ಗೆಳೆಯರ ಸ್ವಾವಲಂಬನ ಕೇಂದ್ರವು ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಿದ್ದ ಸಂಗೀತ, ಚಿತ್ರಕಲಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾವಲಂಬನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಈ ಎಲ್ಲಾ ಶಿಬಿರಗಳ ಪ್ರಯೋಜನವನ್ನು ತುಳು -ಕನ್ನಡಿಗರು ಪಡೆದುಕೊಳ್ಳಬೇಕು ಎಂದರು.
ಸ್ವಾವಲಂಬನಾ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಚಿತ್ರಕಲೆ ಕಲಿಕಾ ಶಿಬಿರದ ನೇತೃತ್ವ ವಹಿಸಿರುವ ಚಿತ್ರಕಲಾತಜ್ಞೆ ಲತಾ ಪೂಜಾರಿ ಅವರು ಮಾತನಾಡಿ, ಈ ವರ್ಷದಲ್ಲಿ ಪ್ರಾಥಮಿಕ ಹಾಗೂ ಪೋಸ್ಟರ್ ಡ್ರಾಯಿಂಗ್‌ನ್ನು ಕಲಿಸಿಕೊಡಲಾಗುವುದು. ಇದರ ಪ್ರಯೋಜನವನ್ನು ಎಲ್ಲರು ಪಡೆದುಕೊಳ್ಳುವಂತೆ ವಿನಂತಿಸಿದರು.
ಪ್ರಬಂಧಕಿ ಜ್ಯೋತಿ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರವು ಪ್ರಾರಂಭಿಸಿರುವ ಕನ್ನಡ ಕಲಿಕಾ ವರ್ಗ, ಭಜನೆ, ಸಂಗೀತ, ಚಿತ್ರಕಲೆ, ಹೊಲಿಗೆ, ಮೆಹೆಂದಿ ಇತ್ಯಾದಿ ಕಲಿಕಾ ವರ್ಗಗಳ ಲಾಭ° ಪಡೆಯುವಂತೆ ತಿಳಿಸಿದರು. ಆಶಾ ನಾಯಕ್, ಉಮಾ ಶೆಟ್ಟಿ, ಸ್ಮಿತಾ ಪಾಟ್ಕರ್ ಅವರು ಭಾವಗೀತೆ, ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಸಂಚಾಲಕ ಪ್ರೊ| ವೆಂಕಟೇಶ್ ಪೈ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಮಾತನಾಡಿ, ಸಂಗೀತ ವರ್ಗವು ಪ್ರತಿ ರವಿವಾರ ಸಂಜೆ 4.30 ರಿಂದ 6.30ರವರೆಗೆ, ಚಿತ್ರಕಲಾ ವರ್ಗವು ಬೆಳಗ್ಗೆ 11ರಿಂದ ಮಧ್ಯಾಹ್ನ 1ರಿಂದ ನಡೆಯಲಿದ್ದು, ಡೊಂಬಿ ವಲಿಯ ತುಳು- ಕನ್ನಡಿಗರು, ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆ ಆಯೋಜಿಸಲಾಗಿತ್ತು.