Advertisement

ಡೊಂಬಿವಲಿ ಪಲಾವಾ ಕನ್ನಡಿಗರ ಸಂಘ:ಕರ್ನಾಟಕ ರಾಜ್ಯೋತ್ಸವ

02:45 PM Nov 10, 2017 | |

ಡೊಂಬಿವಲಿ: ಡೊಂಬಿವಲಿ ಪೂರ್ವದಲ್ಲಿರುವ ಪಲಾವಾ ಕನ್ನಡಿಗರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವು ನ. 5ರಂದು  ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ಅದ್ದೂರಿಯಾಗಿ ನಡೆಯಿತು.

Advertisement

ಸಂಸ್ಥೆಯ ಸದಸ್ಯೆ ಮೇಘಾ ಮತ್ತು ಅವರ ತಂಡದಿಂದ ಸಭಾಂಗಣದ ಎದುರಿಗೆ ಬಿಡಿಸಿದ ಸುಂದರವಾದ ರಂಗೋಲಿಯ ಚಿತ್ರ, ಅದರ ಸುತ್ತಲೂ ಇಟ್ಟ ಚಿಕ್ಕ ಚಿಕ್ಕ ಹಣತೆಗಳು ಗಗನದಲ್ಲಿ ಮಿನುಗುತ್ತಿದ್ದ ತಾರೆಗಳಿಗಿಂತ ತಾವೇನು ಕಮ್ಮಿ ಇಲ್ಲ ಎನ್ನುವಂತೆ ಹೊಳೆಯುತ್ತಿದ್ದವು. ಪಕ್ಕದಲ್ಲೇ ಅದೇ ತಂಡದಿಂದ ಹೂವಿನಲ್ಲಿ ಬಿಡಿಸಿದ ಕರ್ನಾಟಕದ ನಕ್ಷೆ ಕನ್ನಡದ ಶ್ರೀಗಂಧದ ಪರಿಮಳವನ್ನು ಸೂಸುತ್ತಿತ್ತು.

ಸಭಾಂಗಣದ ಬಾಗಿಲಲ್ಲಿ ಮುತ್ತೈದೆಯರಿಗೆ ಇಡುತ್ತಿದ್ದ ಕುಂಕುಮ, ಮುಡಿಯಲು ಪುಟ್ಟ ಮಕ್ಕಳು ಕೊಡುತ್ತಿದ್ದ ಹೂಗಳು ಕನ್ನಡದ ಸಂಸ್ಕೃತಿಯನ್ನು ಸಾರುತ್ತಿದ್ದವು. ಎದುರಿನ ಮಂಟಪದ ಹಿಂದೆ ಹಾಕಿದ್ದ ಕನ್ನಡದ ಫಲಕಗಳು, ನೆರೆದ ಅಲ್ಲಿ ಕನ್ನಡಿಗರು ಒಬ್ಬರನ್ನೊಬ್ಬರು ಪರಿಚಯಿಸಿಕೊಂಡು, ಆತ್ಮೀಯತೆಯಿಂದ ಮಾತನಾಡುತ್ತಿದ್ದ ರೀತಿ ಒಂದು ರೀತಿಯ ಮಿನಿ ಕರ್ನಾಟಕವನ್ನೇ ಸೃಷ್ಟಿಸಿತ್ತು.

ಹಿರಿಯ ಲೇಖಕಿ, ಸಂಶೋಧಕಿ ಡಾ| ಸುಮಾದ್ವಾರಕಾನಾಥ್‌ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅನಂತರ ಸಂಸ್ಥೆಯ ಸದಸ್ಯೆಯರಿಂದ, ಮಕ್ಕಳಿಂದ ಸ್ವಾಗತ ಗೀತೆ, ಸ್ವಾಗತ ನೃತ್ಯ, ಸಂಗೊಳ್ಳಿ ರಾಯಣ್ಣನ ಕಿರು ನಾಟಕ, ಘಲ್ಲು ಘಲ್ಲು ಕುಣಿಸಿದ ಗೆಜ್ಜೆಗಳು,  ಬಳೆಗಾರ ಮಂಟಪಕ್ಕೆ ಬಂದು ಬಳೆ ತೊಡಿಸಿ ಹೋದ ಸಂದರ್ಭ, ಭಾವಗೀತೆಗಳು, ಚಿಕ್ಕ ಮಕ್ಕಳ ನೃತ್ಯಗಳು, ಛದ್ಮವೇಷ, ನಾಡಗೀತೆ ಇತ್ಯಾದಿಗಳು ನೋಡುಗರನ್ನು ಆಕರ್ಷಿಸಿತು.
ರಾಹುಲ್‌ ಮತ್ತು ವರುಣ್‌ ಅವರಿಂದ ರಸಪ್ರಶ್ನೆ ಕಾರ್ಯಕ್ರಮ, ಅಂತಾಕ್ಷರಿ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಒಂದು ಕಾಲದಲ್ಲಿ ಪುಟ್ಟ ಸಸಿಯಾಗಿ ನೆಟ್ಟ ಪಲಾವ್‌ ಕನ್ನಡ ಸಂಘವು ಇಂದು ಗಿಡವಾಗಿ  ಬೆಳೆದಿದೆ. ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ವಾರಗಟ್ಟಲೆ ತಯಾರಿ, ಪೂರ್ವ ಸಿದ್ಧತೆ, ಯೋಜನೆಗಳು, ರಂಗೋಲಿ ತಂಡದಿಂದ ರಂಗೋಲಿಯ ಸಿದ್ಧತೆ, ಸಾಂಸ್ಕೃತಿಕ ತಂಡದಿಂದ ಹಾಡು ನೃತ್ಯಗಳ ಸಿದ್ಧತೆ, ತಂಡದಿಂದ ಸಮಾರಂಭವನ್ನು ನಡೆಸಿಕೊಡಲು ಬೇಕಾದ ಸಿದ್ಧತೆಗೆ ಸಂಸ್ಥೆಯ ಸದಸ್ಯ ಬಾಂಧವರು ಸಹಕರಿಸಿ ಸಮಾರಂಭವು ಯಶಸ್ವಿಯಾಗಿ ನೆರವೇರಿಸಿ ಅತಿಥಿ-ಗಣ್ಯರ ಪ್ರಶಂಸೆಗೆ ಪಾತ್ರರಾದರು. ಅವಿನಾಶ್‌ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next