ಸದ್ಯ ಚಿತ್ರರಂಗದಲ್ಲಿ ನಿರ್ಮಾಣದ ಹೊಸ ಟ್ರೆಂಡ್ ಶುರುವಾಗಿದೆ. ಹೆಸರಾಂತ ನಟ-ನಟಿಯರು, ನಿರ್ದೇ ಶಕರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆಯಾಗುತ್ತಿದ್ದಾರೆ. ಈ ಸಾಲಿಗೆ ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಕೂಡಾ ಸೇರಿದ್ದಾರೆ.
ಪವನ್ ಒಡೆಯರ್ ಇದೀಗ ನಿರ್ಮಾಣದತ್ತ ಹೆಜ್ಜೆ ಹಾಕಿದ್ದು, ತಮ್ಮದೇ “ಒಡೆಯರ್ ಮೂವೀಸ್’ ಸಂಸ್ಥೆಯ ಮೂಲಕ ಅಪೇಕ್ಷಾ ಹಾಗೂ ಪವನ್ ಒಡೆಯರ್ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಒಡೆಯರ್ ಮೂವೀಸ್ ಮೂಲಕ ಡೊಳ್ಳು ಚಿತ್ರವನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. “ಮಹಾ ಹುತಾತ್ಮ’ ಕಿರು ಚಿತ್ರ ಖ್ಯಾತಿಯ ಸಾಗರ್ ಪುರಾಣಿಕ್ “ಡೊಳ್ಳು’ ಚಿತ್ರದ ನಿರ್ದೇಶನದ ಮೂಲಕ ಹಿರಿತೆರೆಗೆ ಕಾಲಿಡುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಪವನ್ ಒಡೆಯರ್, “ಕರ್ಮಷಿಯಲ್ ಚಿತ್ರಗಳಿಗಿಂತ ಭಿನ್ನವಾಗಿ ಕಂಟೆಂಟ್ ಚಿತ್ರವನ್ನು ಮಾಡುವ ಆಸೆ ಇತ್ತು. ಆ ಥರಹದ ಕಥೆಗಳನ್ನು ನಾನು ಬರೆಯಲು ಕಷ್ಟಪಟ್ಟೆ. ಆದರೆ ಸಾಗರ್ ಅವರ ಕಥೆ ತುಂಬಾ ಹಿಡಿಸಿತು. ನಮ್ಮ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ ಒಳ್ಳೆಯ ಕಂಟೆಂಟ್ ಸಿನಿಮಾ ಆಗಿರಬೇಕು ಆಸೆ ಇತ್ತು. ಹಾಗೆ ಅಂದು ಚಿತ್ರರಂಗದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು ಚಿತ್ರ ನಿರ್ಮಿಸಿದ್ದರು ನಿರ್ಮಾಪಕರು. ಈಗ ನಾನು ಚಿತ್ರ ನಿರ್ಮಿಸುವ ಹಂತಕ್ಕೆ ಬಂದಿದ್ದೇನೆ. ಅದಕ್ಕೆ ಅವರ ನಂಬಿಕೆ ಕಾರಣ. ಹಾಗೇ ನಾವು ಚಿತ್ರರಂಗದಲ್ಲಿ ಮತ್ತಷ್ಟು ಹೊಸ ಪ್ರತಿಭೆಗಳಿಗೆ ವೇದಿಕೆ ನೀಡಬೇಕು ಎಂಬ ಕಾರಣಕ್ಕೆ ನಮ್ಮ ನಿರ್ಮಾಣದ ಮೊದಲ ಚಿತ್ರವಾಗಿ “ಡೊಳ್ಳು’ ನಿರ್ಮಾಣ ಮಾಡಿದ್ದೇವೆ’ ಎಂದರು.
ಇದನ್ನೂ ಓದಿ: ಏಳು ಭಾಷೆಗಳಲ್ಲಿ ಡಬ್ಬಿಂಗ್ ಶುರು: ಅಖಾಡಕ್ಕೆ ಕಬ್ಜ
ಚಿತ್ರ ನಿರ್ದೇಶಕ ಸಾಗರ್, “ನಾನು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಡೊಳ್ಳು ಕುಣಿತ ನೋಡಿದ್ದೆ. ಅದರ ಸೌಂಡ್, ರಿಧಮ್ ಬಹಳ ಇಷ್ಟವಾಗಿತ್ತು. ಇದನ್ನೇ ಒಂದು ಸಂಪೂರ್ಣ ಸಿನಿಮಾವಾಗಿ ಮಾಡಬೇಕು ಎಂಬ ಯೋಚನೆಯೊಂದಿಗೆ ಈ ಚಿತ್ರ ಆರಂಭಿಸಿದೆವು. ಚಿತ್ರಕ್ಕೆ ತಯಾರಿ ಸಾಕಷ್ಟು ಬೇಕಿತ್ತು. ಹಲವಾರು ವೃತ್ತಿ ಪರ ಡೊಳ್ಳು ಕುಣಿತಗಾರರು, ಹಾಗೂ ದಶಕಗಳಿಂದ ಇಂದಿಗೂ ಡೊಳ್ಳು ಕುಣಿತವನ್ನು ಕುಲ ಕಸುಬಾಗಿಸಿರುವವರ ಬಳಿ ಹೋಗಿ ಮಾತನಾಡಿ ಕಥೆ ತಯಾರಿಸಿದ್ದೇವೆ’ ಎಂದರು.
ಚಿತ್ರ ಕಥೆ, ಸಂಭಾಷಣೆಗಾರ ಶ್ರೀನಿಧಿ ಡಿ.ಎಸ್ “ಚಿತ್ರದಲ್ಲಿ ಡೊಳ್ಳು ಕುಣಿತದ ಜೊತೆಯಲ್ಲಿ ಆ ಕಲಾವಿದನ ಬದುಕು ಹಾಗೂ ಅವನ ಸುತ್ತಲಿನ ಸಂಘರ್ಷ, ಹಳ್ಳಿ, ನಗರೀಕರಣ ಈ ಸಮಸ್ಯೆಗಳೇನು ಎನ್ನುವು ದನ್ನು ತೋರಿಸಿದ್ದೇವೆ’ ಎಂದು ಚಿತ್ರದ ಕುರಿತು ಮಾತನಾಡಿದರು. ಚಿತ್ರವನ್ನು ಶಿವಮೊಗ್ಗ, ಸೊರಬ, ಶಿಕಾರಿಪುರ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವಾಗಿ ಚಿತ್ರಕ್ಕಾಗಿ ವೃತ್ತಿಪರ ಡೊಳ್ಳು ಕುಣಿತಗಾರ ರಿಂದಲೇ ಹೆಜ್ಜೆ ಹಾಕಿಸಲಾಗಿದೆ.
ಚಿತ್ರದಲ್ಲಿ ಕಾರ್ತಿಕ್ ಮಹೇಶ್ ನಾಯಕ ನಟನಾಗಿದ್ದು, ನಿಧಿ ಹೆಗ್ಡೆ ನಾಯಕ ನಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಮುಂತಾದ ತಾರಾಬಳಗವಿದೆ.