ಹುಬ್ಬಳ್ಳಿ: ಹಜ್ ಯಾತ್ರೆಗೆಂದು ಸುಮಾರು 58 ಯಾತ್ರಾರ್ಥಿಗಳಿಂದ ಅಂದಾಜು 1.5 ಕೋಟಿ ರೂ. ಸಂಗ್ರಹಿಸಿದ್ದ ಟ್ರಾವೆಲ್ಸ್ ಏಜೆನ್ಸಿ ಏಜೆಂಟ್ ತಲೆಮರೆಸಿಕೊಂಡಿದ್ದು, ಹಣ ಕೊಟ್ಟವರು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ರವಿವಾರ ನಡೆದಿದೆ.
ಇಲ್ಲಿನ ಹಳೇಹುಬ್ಬಳ್ಳಿ ಆನಂದನಗರ ರಸ್ತೆ ಫತೇಶಾನಗರದ ಹಶಮತ್‌ರಜಾ ಖಾದ್ರಿ ಪರಾರಿಯಾದ ವ್ಯಕ್ತಿ. ಈತ ಇಲ್ಲಿನ ಕಾರವಾರ ರಸ್ತೆ ಚಾಟ್ನಿ ಕಾಂಪ್ಲೆಕ್ಸ್‌ನಲ್ಲಿ ಹಬೀಬಾ ಹರಮೇನ್ ಎಂಬ ಟ್ರಾವೆಲ್ಸ್ ಏಜೆನ್ಸಿ ಕಚೇರಿ ಹೊಂದಿದ್ದು, ಹಜ್ ಯಾತ್ರೆಗೆ ತೆರಳುವವರಿಗೆ ಊಟ, ವಸತಿ ಸೇರಿ 25, 35 ಹಾಗೂ 40 ದಿನಗಳ ಟೂರ್ ಪ್ಯಾಕೇಜ್ ವ್ಯವಸ್ಥೆ ಮಾಡಿಕೊಡುತ್ತಿದ್ದ.
ಯಾತ್ರೆಗಾಗಿ ಈತನಲ್ಲಿ ಮುಂಗಡ ಹಣ ಕೊಟ್ಟವರು ಆ. 23ರಂದು ನಗರದಿಂದ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಹಶಮತ್‌ರಜಾ ಯಾತ್ರೆಗೆ ವ್ಯವಸ್ಥೆಯನ್ನೂ ಮಾಡದೆ, ಹಣವನ್ನೂ ಮರಳಿಸದೆ ಶನಿವಾರ ಮಧ್ಯಾಹ್ನವೇ ಕಚೇರಿ ಬಂದ್ ಮಾಡಿ ನಾಪತ್ತೆಯಾಗಿದ್ದಾನೆ.
ಎಲ್ಲೆಲ್ಲಿಯವರು: ಹಶಮತ್‌ರಜಾನ ಬಳಿ ವಿಜಯಪುರದ 30, ಹುಬ್ಬಳ್ಳಿಯ 20, ಬೆಂಗಳೂರು ಮೂಲದ ನಾಲ್ಕು, ಬೆಳಗಾವಿಯ ಇಬ್ಬರು ಸೇರಿದಂತೆ ಒಟ್ಟು 58 ಜನರು ಹಣ ಜಮಾ ಮಾಡಿದ್ದರು. ಪ್ರತಿ ಯಾತ್ರಾರ್ಥಿಯಿಂದ 2.5 ಲಕ್ಷ ದಿಂದ 3.5 ಲಕ್ಷ ರೂ. ಮುಂಗಡ ಹಣ ಹಾಗೂ ಪಾಸ್‌ಪೋರ್ಟ್, ಆಧಾರ ಕಾರ್ಡ್, ಮತದಾರರ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನೆಲ್ಲ ಪಡೆಯುತ್ತಿದ್ದ. ಜಿಎಸ್‌ಟಿ ಜಾರಿ ಬಳಿಕ ಹೆಚ್ಚುವರಿಯಾಗಿ 30 ಸಾವಿರ ರೂ. ಕೂಡ ಪಡೆದಿದ್ದ.
23ರಂದು ತೆರಳಬೇಕಿತ್ತು: 58 ಯಾತ್ರಾರ್ಥಿಗಳು ಆ. 23ರಂದು ಬೆಳಗ್ಗೆ 10:00 ಗಂಟೆಗೆ ಇಲ್ಲಿನ ಹಳೇಹುಬ್ಬಳ್ಳಿ ಇಂಡಿ ಪಂಪ್ ಬಳಿಯ ಫತೇಶಾವಲಿ ದರ್ಗಾದಿಂದ ಮುಂಬಯಿಗೆ ಪ್ರಯಾಣ ಳೆಸಬೇಕಿತ್ತು. 24ರಂದು ಬೆಳಗಿನ ಜಾವ 6:00 ಗಂಟೆಗೆ ಕುವೈತ್ ಏರ್‌ವೆಸ್ ಮೂಲಕ ಮುಂಬಯಿಂದ ಜೆದ್ದಾಹಕ್ಕೆ ತೆರಳಬೇಕಿತ್ತು. ಇವರೆಲ್ಲ ಮೆಕ್ಕಾದಲ್ಲಿ 14 ದಿನ ಹಾಗೂ ಮದೀನಾದಲ್ಲಿ 11 ದಿನ ಉಳಿದುಕೊಳ್ಳಬೇಕಿತ್ತು. ಸೆ. 28ರಂದು ಮದೀನಾದಿಂದ ಮುಂಬಯಿಗೆ ಮರಳಿ ಬರುವುದಿತ್ತು.
ತನಿಖೆ ಆರಂಭ: ರೊಚ್ಚಿಗೆದ್ದ ಜನರು ಹಶಮತ್ ರಜಾನ ಮನೆಗೆ ಹೊಕ್ಕು ಹುಡುಕಾಡಿದರೂ ಸಿಗದಿದ್ದಾಗ, ಆತನ ತಂದೆಯನ್ನೇ ಠಾಣೆಗೆ ಕರೆದುಕೊಂಡು ಬಂದು ಪೊಲೀಸರೆದುರು ಹಾಜರುಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.ಸ್ಥಳಕ್ಕೆ ಡಿಸಿಪಿ ರೇಣುಕಾ ಸುಕುಮಾರ ಆಗಮಿಸಿ ಮಾಹಿತಿ ಪಡೆದುಕೊಂಡರು. ಹಶಮತ್‌ರಜಾನಿಂದ ವಂಚನೆಗೊಳಗಾದವರು ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.