ಮಾಗಡಿ: ಮಾಗಡಿ ಪಟ್ಟಣದ ವ್ಯಾಪ್ತಿ ಯಲ್ಲಿ ನಾಯಿ ಕೋತಿಗಳ ಕಾಟ ಜಾಸ್ತಿಯಾಗಿದೆ. ರಸ್ತೆ ಮಧ್ಯೆಯೇ ಬಹುತೇಕ ನಾಯಿಗಳು ನಿಂತಿರುತ್ತವೆ. ಶಾಲಾ ಕಾಲೇಜಿಗೆ ಬಸ್ಸಿಗೆ ಹೋಗುವವರು ನಾಯಿಗಳ ಗುಂಪುಗಳನ್ನು ಕಂಡು ಭಯಬೀತರಾಗಿ ದಾರಿಯನ್ನೇ ಬದಲಾಯಿಸಿ ಹೋಗುವಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಬಹುತೇಕ ನಾಯಿಗಳು ಗುಂಪು ಗುಂಪಾಗಿ ಸಂಚರಿಸುವುದರಿಂದ ಶಾಲೆಗೆ ಹೋಗುವ ಮಕ್ಕಳ ಮೇಲೆ ಎರಗಲು ನೋಡುತ್ತಿರುತ್ತವೆ. ಇತ್ತ ಹೊಸಪೇಟೆಯ ಗ್ರಾಮದಲ್ಲಿ ಕೋತಿಗಳು ಮನೆಗಳಿಗೆ ಲಗ್ಗೆ ಇಟ್ಟು ಅಡುಗೆ ಮನೆಗೆ ನೇರವಾಗಿ ಪ್ರವೇಶಿಸಿ ಆಹಾರವನ್ನೆಲ್ಲ ತಿಂದು ಜೊತೆಗೆ ಪಾತ್ರೆಗಳನ್ನು ಮರದ ಮೇಲೆ ಹೊತ್ತೂಯ್ಯುತ್ತವೆ. ಅಲ್ಲದೆ ದೇವರ ಮನೆಗೂ ಪ್ರವೇಶಿ ತೆಂಗಿನ ಕಾಯಿ,ಬಾಳೆಹಣ್ಣುಗಳನ್ನು ತಿಂದು, ಉಳಿದಿದ್ದನ್ನು ಕೊಂಡೊಯ್ಯುತ್ತವೆ.
ಮನೆಯಲ್ಲಿ ಮಕ್ಕಳು ಸಹ ಭಯಗೊಂಡಿದ್ದು, ರಾತ್ರಿ ವೇಳೆಯೂ ಕೋತಿ, ನಾಯಿ ಎಂದು ಕನವರಿಸುವ ನೋವಿನಿಂದ ಹೊಸಪೇಟೆ ಮನೆಯ ಮಹಿಳೆಯರು ರೋಸಿ ಹೋಗಿದ್ದಾರೆ ಎಂದು ರೈತ ರೇವಣ್ಣ ತಿಳಿಸಿದ್ದಾರೆ. ಈ ಸಂಬಂಧ ವಾರ್ಡ್ ಸದಸ್ಯರ ಹಾಗೂ ಪುರಸಭೆ ಅದಿಕಾರಿಗಳ ಗಮನಕ್ಕೆ ತಂದರೂ ಯಾರು ಇತ್ತ ಗಮನ ಹರಿಸಿಲ್ಲ. ಪುರಸಭೆ ಇನ್ನಾದರೂ ಎಚ್ಚೆತ್ತು ಕೋತಿ, ನಾಯಿಗಳನ್ನು ಹಿಡಿದು ದೂರದ ಕಾಡಿಗೆ ಬಿಡುವ ಮೂಲಕ ನಾಗರಿಕರನ್ನು ನಾಯಿ ಕೋತಿ ಕಾಟದಿಂದ ಮುಕ್ತಿಗೊಳಿಸುವಂತೆ ವೆಂಕಟೇಶ್, ವಿಶ್ವನಾಥ್,ಶಿವಣ್ಣ ಸೇರಿದಂತೆ ನೂರಾರು ಮಂದಿ ಪುರನಾಗರಿಕರು ಒತ್ತಾಯಿಸಿದ್ದಾರೆ.
ಬಿಡದಿಯಲ್ಲಿ ಬೀದಿ ನಾಯಿಗಳ ಕಾಟ :
ರಾಮನಗರ: ಇಲ್ಲಿನ ಬಿಡದಿ ಪೇಟೆಯಲ್ಲಿ ಬೀದಿ ನಾಯಿಗಳ ಕಾಟ ಅಧಿಕವಾಗಿದ್ದು, ರಸ್ತೆಯಲ್ಲಿ ಓಡಾಡಲು ಜನರು ಭಯ ಪಡುವಂತಾಗಿದೆ. ರಸ್ತೆಯಲ್ಲಿ ಗುಂಪು ಗುಂಪಾಗಿ ಅಡ್ಡಾಡುವ ನಾಯಿಗಳು ಮಕ್ಕಳು ಸೇರಿದಂತೆ ನಾಗರಿಕರ ಮೇಲೆ ಎರಗಿ ಬೀಳುತ್ತವೆ. ಕೆಲವು ಮಂದಿ ನಾಯಿಗಳಿಗೆ ಆಹಾರ ನೀಡುವುದರಿಂದ ಅವುಗಳ ಓಡಾಟ ಅಧಿಕವಾಗಿದೆ.