Advertisement

ಕಾಯಲು ಇರುವವಳು: ಮೂಕ ಭಾಷೆ… ಮೌನ ಸಂದೇಶ

03:17 PM Jun 16, 2024 | Team Udayavani |

“ಊಟಕ್ಕೆ ಬಾ ಮಗನೇ….’ ಅಮ್ಮ ಕರೆದಳು. “ನಿಲ್ಲಮ್ಮಾ… ಅವಳಲ್ಲಿ ಮಾತಾಡ್ತಾ ಇದ್ದೀನಿ’ ಮಗ ಉತ್ತರಿಸಿದ. ಅಮ್ಮ ಕಾದಳು. ಅವನು ಫೋನಿನಲ್ಲಿದ್ದ ಮುಗಿಯದ ಅವಳ ಮಾತಿಗಾಗಿ ಕಾದನು. ಕಾದನು.. ಕಾದನು… ಅನ್ನ ತಣ್ಣಗಾಯಿತು. ಅಮ್ಮ ಮಗ ಕಾದು ಕಾದು ಕಡೆಗೆ ತಣ್ಣಗಿನ ಊಟ ಉಂಡರು

Advertisement

ಮದುವೆ ಮುಗಿಯಿತು. ಅವಳು ಸೊಸೆಯಾಗಿ ಬಂದಳು. “ಊಟಕ್ಕೆ ಬಾ…’ -ಅವನು ಕರೆದನು. “ಜೂಮ್‌ ಮೀಟಿಂಗ್‌ನಲ್ಲಿ ಇದ್ದೀನಿ. ಬಂದೆ…’ ಕೆಲಸದಲ್ಲಿದ್ದ ಮಡದಿ ಅಂದಳು. ಅಮ್ಮ, ಮಗ ಕಾದರು. ಅವಳು ಬರಲಿಲ್ಲ. ಮಗ ಎದ್ದು ಹೋಗಿ ಕೆಲಸಕ್ಕೆ ಕುಳಿತನು. ಗಂಡ-ಹೆಂಡತಿ ಇಬ್ಬರದೂ ವರ್ಕ್‌ ಫ್ರಂ ಹೋಮ್‌ ಆಗಿತ್ತು. ಅಮ್ಮ ವರ್ಕ್‌ ಅಟ್‌ ಹೋಮ್‌. ಅವಳು ಬಂದಳು- “ಬನ್ನಿ… ಊಟಕ್ಕೆ’ “ಆಗ ಕರೆದಾಗ ನೀನು ಬರಲಿಲ್ಲ. ನೀನೇ ಊಟ ಮಾಡು’ ಒರಟಿನಿಂದ ಅಂದನು. ಕಡೆಗೊಮ್ಮೆ ಅಮ್ಮನು ಮಗ ಹಾಗೂ ಸೊಸೆಗೆ ಕೂಗಿ ಕರೆದಳು: “ಊಟಕ್ಕೆ ಬನ್ನಿ, ಅನ್ನ ತಣಿದು ಐಸ್‌ ಕ್ಯಾಂಡಿ ಆಗೋದು ಬಾಕಿ…’

ವರ್ಕ್‌ ಫ್ರಮ್‌ ಹೋಂ ಪೀರಿಯಡ್‌ ಮುಗೀತು. ಇನ್ಮುಂದೆ ಆಫೀಸ್‌ನಲ್ಲಿ ಕೆಲಸ ಅಂತ ಮಗ-ಸೊಸೆ ಹೋದ್ರು. ಅಂದಿನಿಂದ ಮನೆಯಲ್ಲಿ ಅಮ್ಮ ಒಬ್ಬಳಾದಳು. ಈಗ ಊಟ ಮಾಡಲು ಬನ್ನಿ ಅಂತ ಕರೆದು, ಯಾರಿಗೂ ಕಾಯಬೇಕೆಂದಿಲ್ಲ. ಆದರೆ. ಒಬ್ಬಳೇ ಊಟ ಮಾಡಲು ಮನಸ್ಸು ಒಪ್ಪುತ್ತಿಲ್ಲ… ಏನೋ ಖಾಲಿ ಖಾಲಿ! ಒಂಟಿತನ!

“ಬೌ ಬೌ…’ ಗೇಟಿನಾಚೆಗೆ ವಠಾರದ ನಾಯಿಯು ಮನೆಯೊಳಗೆ ನೋಡಿ ಬೊಗಳುವುದು, ಆಕೆಗೆ “ಊಟ ಮಾಡು’ ಎಂದು ಹೇಳಿದಂತೆ ಅನಿಸಿತು. “ಅಮ್ಮಾ, ನನ್ನ ಮಕ್ಕಳ ಊಟ ಆಯ್ತು.. ನೀನು ಊಟ ಮಾಡಿ ನನಗೆ ಇಕ್ಕಮ್ಮ’- ಮತ್ತೂಮ್ಮೆ ಬೌಬೌಅಂದುದರಲ್ಲಿ ಹಾಗೆ ಕೇಳಿಸಿದಂತಾಯಿತು. ತಾನು ಊಟ ಮಾಡದೆ ನಾಯಿಗಾಗಿ ಮೊಸರು- ಹಾಲು ಕಲಸಿದ ಅನ್ನವನ್ನು ಇಕ್ಕಿ ಒಳ ಬಂದು ತನ್ನ ತಟ್ಟೆಗೆ ಅನ್ನ ಬಡಿಸಿಕೊಂಡಳು. ಒಂದು ಹಿಡಿ ಹೆಚ್ಚೇ ಉಂಡಳು. ಹೊರಗಿನಿಂದ ಹೊಟ್ಟೆ ತುಂಬ ಉಂಡ ನಾಯಿ ಬೌ\ ಬೌ ಅಂದು ಅದರ ಮಕ್ಕಳ ಬಳಿ ಓಡಿತು.

ಅಮ್ಮ ಈಗ ದಿನವೂ ನಾಯಿಗಾಗಿ ಕಾಯ್ತಾಳೆ. ನಾಯಿ ಓಡಿ ಬಂದು ಅಮ್ಮನನ್ನು ಕಾಯ್ತದೆ. ಅದರ ಮಕ್ಕಳನ್ನು ಯಾರೋ ತಗೊಂಡು ಹೋಗಿದ್ದಾರೆ. ಬಂದಾಗಲೆಲ್ಲ “ಅಮ್ಮನ ಊಟ ಆಯ್ತಾ’ ಎಂದು ತನ್ನ ಭಾಷೆಯಲ್ಲೇ ಕೇಳಿ ತನ್ನ ಊಟಕ್ಕಾಗಿ ಕಾಯ್ತದೆ. ಇಬ್ಬರಿಗೂ ಗೊತ್ತಿಲ್ಲ …ಅವರವರು ಒಬ್ಬರಿಗೊಬ್ಬರು ಕಾಯೋದು! ಅಮ್ಮ… ಅವಳು ಯಾವಾಗಲೂ ಕಾಯಲು ಇರುವವಳು.

Advertisement

ರಜನಿ ಭಟ್‌, ದುಬೈ

Advertisement

Udayavani is now on Telegram. Click here to join our channel and stay updated with the latest news.

Next