ಸೂರತ್: ಮೃಗ ರಾಜ ಸಿಂಹವನ್ನು ಕೆಣಕಲು ಯಾವ ಪ್ರಾಣಿಯೂ ಧೈರ್ಯ ತೋರುವುದಿಲ್ಲ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಸಿಂಹಗಳೊಂದಿಗೆ ನಾಯಿಗಳೆರಡು ಹೋರಾಟಕ್ಕಿಳಿದ ವಿಡಿಯೋ ಸಧ್ಯ ವೈರಲ್ ಆಗುತ್ತಿದೆ.
2 ನಾಯಿಗಳು ಮತ್ತು 2 ಸಿಂಹಗಳು ಪರಸ್ಪರ ಜಗಳವಾಡುತ್ತಿರುವ ವಿಡಿಯೋ ಗುಜರಾತ್‌ನಲ್ಲಿ ಏಷ್ಯಾಟಿಕ್ ಲಯನ್ಸ್ ಪ್ರದೇಶವೆಂದೆ ಖ್ಯಾತಿ ಹೊಂದಿದ ಗಿರ್ ನ್ಯಾಶನಲ್ ಪಾರ್ಕ್‌ನ ಸುಮಾರು 70 ಕಿಲೋ ಮೀಟರ್ ದೂರದಲ್ಲಿನ ಸಾವರ್‌ಕುಂಡ್ಲ ಎಂಬಲ್ಲಿನ ಗೋಶಾಲೆಯೊಂದರಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಆದಿತ್ಯವಾರ (ಆ.10) ಮಧ್ಯರಾತ್ರಿ 4 ಪ್ರಾಣಿಗಳು ಮುಖಾಮುಖಿಯಾಗಿದ್ದು, ಅತ್ಯಪರೂಪದ ದೃಶ್ಯವು ಗೇಟ್‌ಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಎರಡು ಸಿಂಹಗಳು ಗೇಟಿನ ಮೂಲಕ ಗೋಶಾಲೆಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಒಳಗಿದ್ದ ಎರಡು ನಾಯಿಗಳು ನೀಯತ್ತು ತೋರಿ ಸಿಂಹಗಳು ಒಳಬರದಂತೆ ಬಲವಾದ ಪ್ರತಿರೋಧ ತೋರಿ ಕಾಳಗಕ್ಕೆ ಮುಂದಾಗಿದೆ. ಸಿಂಹಗಳು ಗೇಟನ್ನು ಬಲವಾಗಿ ಗುದ್ದಿದಾಗ ಚಿಲಕ ಕಳಚಿಕೊಂಡಿತಾದರೂ ಅವುಗಳಿಗೆ ಒಳಗೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಒಳಗಿದ್ದ ನಾಯಿಗಳಿಗಾಗಲೀ, ಗೋವುಗಳಿಗಾಗಲೀ ಯಾವುದೇ ರೀತಿಯ ಹಾನಿ ಉಂಟಾಗಲಿಲ್ಲ.
ಆ ಬಳಿಕ ಸಿಂಹಗಳು ಸಮೀಪದ ಪೊದೆಯೊಳಗೆ ಓಡಿದ್ದು, ಸೆಕೆಂಡುಗಳ ಅಂತರದಲ್ಲಿ ಗೇಟಿನ ಬಳಿ ಭಾರೀ ಶಬ್ದ ಉಂಟಾದ ಕಾರಣ ಒಳಗಿದ್ದ ವ್ಯಕ್ತಿಯು ಹೊರಗೋಡಿ ಬಂದಿದ್ದಾನೆ. ವ್ಯಕ್ತಿಯು ತನ್ನ ಬಳಿ ಇದ್ದ ಟಾರ್ಚ್ ಉಪಯೋಗಿಸಿಕೊಂಡು ಪೊದೆಯನ್ನು ಪರೀಕ್ಷಿಸಿದನಾದರೂ ಏನೂ ಕಾಣದ ಕಾರಣ ಗೇಟಿನ ಚಿಲಕ ಹಾಕಿ ಮರಳಿ ಗೋಶಾಲೆಯೊಳಗೆ ಹೋಗಿದ್ದಾನೆ.
ಮೀಸಲು ಅರಣ್ಯದ ಪ್ರದೇಶದಿಂದ ಸಿಂಹಗಳು ಹೊರಬಂದಿದ್ದು ಈ ವಿಡಿಯೋದಿಂದಾಗಿ ತಿಳಿದುಬಂದಿದೆ. ಆದರೂ ಈ ಘಟನೆಯ ಕುರಿತು ಅಧಿಕಾರಿಗಳ ವಲಯದಿಂದ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.
ಸಿಂಹಗಳ ಸಂರಕ್ಷಣೆ ಮತ್ತು ರಕ್ಷಣೆಯ ಸಲುವಾಗಿ ಗುಜರಾತ್ ನಲ್ಲಿ ವಿಶ್ವ ಸಿಂಹ ದಿನವನ್ನು ಆಚರಿಸಿದ ಮರುದಿನವೇ ಈ ಘಟನೆ ನಡೆದಿದೆ.ರಾಜ್ಯ ಅರಣ್ಯ ಇಲಾಖೆಯು ಎಸ್‌ಎಂಎಸ್ ಹಾಗೂ ಈಮೇಲ್‌ಗಳ ಮೂಲಕ ವಿಶ್ವ ಸಿಂಹ ದಿನದ ಜಾಗೃತಿಯನ್ನು ಮೂಡಿಸಿದೆ. ಜತೆಗೆ ರಾಜ್ಯಾದ್ಯಂತ 11 ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದು, ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.2020 ರ ಗಣತಿಯ ಪ್ರಕಾರ ಗುಜರಾತ್‌ನಲ್ಲಿ ಸಿಂಹಗಳ ಸಂಖ್ಯೆಯು 674 ರಷ್ಟಿರುವುದು ತಿಳಿದು ಬಂದಿದೆ.