Advertisement

ಮುಖ್ಯಪ್ರಾಣ ಕಿನ್ನಿಗೋಳಿಗೆ ದೋಗ್ರ ಪೂಜಾರಿ ಪ್ರಶಸ್ತಿ

07:55 PM Jul 11, 2019 | mahesh |

ಪ್ರಸಿದ್ಧ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ಅವರಿಗೆ ಈ ವರ್ಷದ ದೋಗ್ರ ಪೂಜಾರಿ ಪ್ರಶಸ್ತಿ ಪ್ರಕಟವಾಗಿದೆ.ಜುಲೈ 17ರಂದು ಕಂಕನಾಡಿಯ ಗರಡಿಯ ಸಭಾ ಭವನದಲ್ಲಿ ಸಂಸ್ಮರಣಾ ಪ್ರಶಸ್ತಿ ಪ್ರದಾನವಾಗಲಿದೆ.ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ “ಸುಧನ್ವ ಮೋಕ್ಷ’ ತಾಳಮದ್ದಲೆ ಜರುಗಲಿದೆ.

Advertisement

ತೆಂಕು-ಬಡಗು ಮೇಳಗಳಲ್ಲಿ ಕಲಾ ವ್ಯವಸಾಯ ಮಾಡಿದ ಅನುಭವಿ ವಿದೂಷಕ ಮುಖ್ಯಪ್ರಾಣ ಕಿನ್ನಿಗೋಳಿ. ಕಿನ್ನಿಗೋಳಿಯ ಶಿಮಂತೂರು ಉದಯಗಿರಿಯ ನಿವಾಸಿ ಇವರು. ಯಕ್ಷಗಾನ ಪರಿಸರದಲ್ಲಿಯೇ ಬೆಳೆದ ಇವರು ಬಾಲ್ಯದಲ್ಲಿಯೇ ಕಲಾಸಕ್ತಿ ಹೊಂದಿದ್ದರು.

ಕಿನ್ನಿಗೋಳಿಯ ಗೋಳಿಜೋರದ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘದಲ್ಲಿ ಹವ್ಯಾಸಿ ವೇಷಧಾರಿಯಾಗಿ ತೊಡಗಿಕೊಂಡರು. ಯಕ್ಷಗಾನ ಕಲಾಧ್ಯಯನವನ್ನು ಗುರು ಮುಖೇನ ಕಲಿತ ಇವರಿಗೆ ಕವಿ ವಿದ್ವಾಂಸ, ಶಿಮಂತೂರು ನಾರಾಯಣ ಶೆಟ್ಟಿ ಗುರುಗಳು. ಮಿಜಾರು ಅಣ್ಣಪ್ಪ ಅವರಿಂದಲೂ ಮಾರ್ಗದರ್ಶನ ಪಡೆದ ಮುಖ್ಯಪ್ರಾಣ ಅವರು ಉಭಯ ತಿಟ್ಟುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸೀತಾರಾಮ ಶೆಟ್ಟಿಗಾರ್‌, ಸೂರಪ್ಪ ಶೆಟ್ಟಿಗಾರ್‌ ಅವರುಗಳಿಂದ ಅರ್ಥಗಾರಿಕೆ ಹಾಗೂ ನಾಟ್ಯಾಭ್ಯಾಸ ಮಾಡಿದ ಇವರು ಬ್ರಹ್ಮಾವರ ರಾಮನಾಯಿರಿ ಅವರಿಂದ ಬಡಗು ತಿಟ್ಟಿನ ನಾಟ್ಯವನ್ನು ಅಭ್ಯಾಸ ಮಾಡಿದರು. ಕಟೀಲು, ಇರಾ ಸೋಮನಾಥೇಶ್ವರ, ಸುಬ್ರಹ್ಮಣ್ಯ, ಮಂತ್ರಾಲಯ ಮೇಳ, ಸಾಲಿಗ್ರಾಮ, ಪೆರ್ಡೂರು, ಕುಮಟ, ಕದ್ರಿ, ಮಂದಾರ್ತಿ ಮೇಳಗಳಲ್ಲಿ 56 ವರ್ಷಗಳ ತಿರುಗಾಟ ನಡೆಸಿದ್ದಾರೆ.

ಈಗ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಂಗ ಸನ್ನಿವೇಶವನ್ನು ಸಾಕ್ಷಾತ್ಕರಿಸಿ ಪಾತ್ರಕ್ಕೆ ಒಪ್ಪುವ ಉತ್ತಮ ನಾಟ್ಯ ಹಾಗೂ ಅಭಿನಯವನ್ನು ಮಾಡಿ ಪಾತ್ರ ಪೋಷಣೆ ನೀಡುವ ಇವರು ಪೌರಾಣಿಕ ಮತ್ತು ಕಾಲ್ಪನಿಕ ಪ್ರಸಂಗಗಳೆರಡರಲ್ಲೂ ಉತ್ತಮವಾಗಿ ಪಾತ್ರ ನಿರ್ವಹಿಸಿ ಪ್ರಸಿದ್ಧರಾಗಿದ್ದಾರೆ.

Advertisement

ಚೆಲುವೆ ಚಿತ್ರಾವತಿಯ ಅಡುಗೂಲಜ್ಜಿ, ಶೂದ್ರ ತಪಸ್ವಿನಿಯ ರಂಗಾಚಾರಿ, ಕಾಂಚನಶ್ರೀಯ ಪ್ರೇತ, ಸ್ವಪ್ನ ಸಾಮ್ರಾಜ್ಯದ ಶೂರಸೇನ, ಕಲಿ ಕ್ರೋಧನದ ಮಡಿವಾಳ ಮೊದಲಾದ ವೇಷಗಳು ಮುಖ್ಯಪ್ರಾಣರಿಗೆ ಖ್ಯಾತಿ ತಂದುಕೊಟ್ಟ ಪಾತ್ರಗಳು.

ಶ್ರೀಕೃಷ್ಣ ಲೀಲೆಯ ನಾರದ, ವಿಜಯ, ರಜಕ, ಭೀಷ್ಮ ವಿಜಯದ ವೃದ್ಧ ಬ್ರಾಹ್ಮಣ, ಭೀಷ್ಮೋತ್ಪತ್ತಿಯ ಕಂದರ, ಪಟ್ಟಾಭಿಷೇಕದ ಮಂಥರೆ, ಶೂರ್ಪನಖಾ ವಿವಾಹದ ವಿದ್ಯುಜ್ಜಿಹ, ಶನೀಶ್ವರ ಮಹಾತ್ಮೆಯ ಶನಿಪೀಡಿತ ರಾಜಾ ವಿಕ್ರಮ ಮೊದಲಾದ ಪೌರಾಣಿಕ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿ ಪ್ರಸಿದ್ಧರಾದವರಿವರು.ದಮಯಂತಿ ಪುನಃ ಸ್ವಯಂವರದ ಬಾಹುಕ, ದೇವಿ ಮಹಾತ್ಮೆಯಲ್ಲಿ ಚಾರಕ ಮತ್ತು ಸುಗ್ರೀವ ಮೊದಲಾದ ಪಾತ್ರಗಳಲ್ಲಿಯೂ ಖ್ಯಾತಿ ಗಳಿಸಿದ್ದಾರೆ.

– ಎಲ್‌.ಎನ್‌.ಭಟ್‌ ಮಳಿ

Advertisement

Udayavani is now on Telegram. Click here to join our channel and stay updated with the latest news.

Next