ತೆಕ್ಕಟ್ಟೆ: ಶ್ವಾನದ ತಲೆಗೆ ಆಕಸ್ಮಿಕವಾಗಿ ಪ್ಲಾಸ್ಟಿಕ್ ಬಾಟಲಿ ಸಿಲುಕಿ ಕಳೆದ ಮೂರು ದಿನಗಳಿಂದ ಪರದಾಡುತ್ತಿದ್ದು, ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿ ರಕ್ಷಿಸಿದ ಘಟನೆ ಅ. 2 ರಂದು ಸಂಭವಿಸಿದೆ.
ಹಿರಿಯ ಪರಿಸರವಾದಿ ಕೊರ್ಗಿ ವಿಠಲ್ ಶೆಟ್ಟಿ ಅವರು ಅ. 2ರಂದು ತಮ್ಮ 76ನೇ ಹುಟ್ಟು ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಹಣ್ಣು ಹಂಪಲು ವಿತರಣೆಗೆಂದು ತೆರಳಿದ ಸಂದರ್ಭ ಅಲ್ಲಿಯೇ ಸಮೀಪ ಶ್ವಾನವೊಂದರ ತಲೆಗೆ ಪ್ಲಾಸ್ಟಿಕ್ ಬಾಟಲಿ ಸಿಲುಕಿಕೊಂಡು ಪರಿತಪಿಸುತ್ತಿರುವುದನ್ನು ಕಂಡರು. ತತ್‌ಕ್ಷಣವೇ ಅವರು ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿಗಳ ಗಮನಕ್ಕೆ ತಂದರು.
ಇದನ್ನೂ ಓದಿ:ನಮಾಮಿ ಗಂಗೆ ಯೋಜನೆಗೆ ಚಾಚಾ ಚೌಧರಿ ಲಾಂಛನ
ಅಗ್ನಿಶಾಮಕ ದಳದ ಸಿಬಂದಿ ಗಳಾದ ನಾಗರಾಜ್ ಪೂಜಾರಿ, ರವೀಂದ್ರ ದೇವಾಡಿಗ, ಚಂದ್ರಕಾಂತ್ ನಾಯ್ಕ, ಬಸವರಾಜ್ ತಂಡ ಶ್ವಾನದ ಪ್ರಾಣ ರಕ್ಷಣೆಗಾಗಿ ಮುಂದಾದರು. ಮೊದಲು ಶ್ವಾನದ ರಕ್ಷಣೆಗಾಗಿ ಬಲೆ ಬೀಸಿ ಸುತ್ತುವರಿದರಾದರೂ ಶ್ವಾನ ಜೀವ ಭಯದಿಂದ ಓಡಲು ಆರಂಭಿಸಿತು. ಕೊನೆಗೂ ಸಿಬಂದಿ ಬಾಟಲಿ ತೆಗೆಯಲು ಯಶಸ್ವಿಯಾಗಿ ಶ್ವಾನದ ಪ್ರಾಣವನ್ನು ರಕ್ಷಿಸಿದರು. ಸಿಬಂದಿಯ ಈ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.