ಲಂಡನ್: ಸಾಕು ಶ್ವಾನಗಳು ಹಾಗೂ ಅವುಗಳ ಮಾಲೀಕರ ನಡುವಿನ ಸಂಬಂಧ ತಾಯಿ ಮತ್ತು ಮಕ್ಕಳಷ್ಟೇ ಗಾಢ ಎನ್ನುವಂಥ ಅನೇಕ ಘಟನೆಗಳಿವೆ. ಈಗ ಅಂಥದ್ದೇ ನಿದರ್ಶನಕ್ಕೆ ಸಾಮಾಜಿಕ ಜಾಲತಾಣ ಸಾಕ್ಷಿಯಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶ್ವಾನವನ್ನು ಉಳಿಸಿಕೊಳ್ಳಲು ಮನೆಯನ್ನೇ ಮಾರಾಟ ಮಾಡಲು ಸಿದ್ಧನಾಗಿದ್ದ ವ್ಯಕ್ತಿಯ ಪ್ರೀತಿಗೆ ನೆಟ್ಟಿಗರು ಮಿಡಿದಿದ್ದಾರೆ.
ಬ್ರಿಟಿಷ್ ಜೈಲು ಅಧಿಕಾರಿ ಜಾಕ್ಸನ್ ಫೀಲಿ ಎನ್ನುವವರು ರ್‍ಯಾಂಬೋ ಎನ್ನುವ 2 ವರ್ಷದ ಶ್ವಾನವೊಂದನ್ನು ಸಾಕಿದ್ದಾರೆ.
ಹೈಪೋವೊಲೆಮಿಕ್ ಶಾಕ್ ಎನ್ನುವ ಕಾಯಿಲೆಯಿಂದ ಶ್ವಾನ ಬಳಲುತ್ತಿತ್ತು. ಕಾಯಿಲೆಯ ತೀವ್ರತೆಯಿಂದ ಬದುಕುವುದೇ ಕಷ್ಟವೆಂದುಕೊಂಡಿದ್ದ ಅದರ ಚಿಕಿತ್ಸೆಗೆ ಫೀಲಿ ಖರ್ಚು ಮಾಡಿದ್ದು ಬರೋಬರಿ 19.59 ಲಕ್ಷ ರೂ.!
ಮನೆಯ ಮಗುವಿನಂತೆ ಸಾಕಿದ್ದ ಶ್ವಾನದ ಪ್ರಾಣ ರಕ್ಷಣೆಗಾಗಿ ಇಷ್ಟೇ ಅಲ್ಲ, ನನ್ನ ಮನೆಯನ್ನೂ ಮಾರಿ ಚಿಕಿತ್ಸೆ ಕೊಡಿಸುತ್ತೇನೆ ಎಂದಿದ್ದ ಫೀಲಿ, ಈ ವಿಚಾರವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಬಳಿಕ ನೆಟ್ಟಿಗರು ಕೂಡ ಫೀಲಿ ಮತ್ತು ರ್‍ಯಾಂಬೋ ನಡುವಿನ ಬಾಂಧವ್ಯ ಮೆಚ್ಚಿ, ಚಿಕಿತ್ಸೆಗಾಗಿ ಹಣದ ನೆರವು ನೀಡಿ, ಶ್ವಾನದ ಉಳಿವಿಗೆ ಪ್ರಾರ್ಥಿಸಿದ್ದರು. ಆ ಬಳಿಕ ಅಂತೂ ವಾರಗಟ್ಟಲೆ ಸಾವಿನೊಂದಿಗೆ ಸೆಣಸಾಡಿದ ರ್‍ಯಾಂಬೋ, ಜೀವಂತವಾಗಿ ಮನಗೆ ಹಿಂದಿರುಗಿದ್ದು, ಫೀಲಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.