ಚೀನಾ, ಅಬುದಾಬಿಗಳಲ್ಲೂ ಗ್ರಾಹಕರು
ಸರ್ಕಾರವೇ ನಿಗದಿ ಪಡಿಸಿರುವ ಬೆಲೆ- 10,000 ರೂ.
ವಾರ್ಷಿಕ ಔಷಧೋಪಚಾರ ಖರ್ಚು- 1,000 ರೂ.
ಸಸ್ಯಾಹಾರಿಗಿಂತ, ಮಾಂಸಾಹಾರಿಗೆ 2- 3 ವರ್ಷ ಹೆಚ್ಚಿಗೆ ಆಯಸ್ಸು
Advertisement
ಸಪೂರ ದೇಹ, ಗಟ್ಟಿಯಾದ ಸ್ನಾಯು, ಓಡಲು ನಿಂತರೆ ವಾಹನಗಳನ್ನೂ ಹಿಮ್ಮೆಟ್ಟಿಸುವ ಶಕ್ತಿ. 3 ಕಿ.ಮೀ. ದೂರದಿಂದಲೇ ವಾಸನೆ ಗ್ರಹಿಕೆ. ವಿಶೇಷ ಆಹಾರ ಬೇಕಿಲ್ಲ, ಕಡಿಮೆ ವೈದ್ಯಕೀಯ ನಿರ್ವಹಣಾ ಖರ್ಚು… ಇವು ದೇಶೀಯ ಶ್ವಾನ ತಳಿ ಮುಧೋಳದ ವೈಶಿಷ್ಟ್ಯ. ಇಂಥ ಅನೇಕ ಕಾರಣಗಳಿಂದಾಗಿ ಈ ಪ್ರಾದೇಶಿಕ ತಳಿಗೆ ಬೇಡಿಕೆ ಹೆಚ್ಚುತ್ತಿದೆ.
Related Articles
ಮುಧೋಳ ಶ್ವಾನ ಯಾವಾಗಲೂ ಲವಲವಿಕೆ ಹಾಗೂ ಚುರುಕಾಗಿರುತ್ತದೆ. ಪ್ರತಿದಿನ ವ್ಯಾಯಾಮ ಅಗತ್ಯ. ದಿನಕ್ಕೆ 2ರಿಂದ 3 ಕಿ.ಮೀ ವಾಕಿಂಗ್ ಮಾಡಿಸಿದರೆ ಸಾಕು. ಉತ್ತರ ಕರ್ನಾಟಕದ ಜನರು ಕುರಿ ಕಾಯಲು, ಆಸ್ತಿ-ಪಾಸ್ತಿ ರಕ್ಷಣೆ ಮಾಡಿಕೊಳ್ಳಲು, ಮನೆಗಳನ್ನು ಕಾಯಲು ಮುಧೋಳ ನಾಯಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದು ತನ್ನ ದೈನಂದಿನ ಆಹಾರವಾಗಿ, ಮನೆಯವರು ನೀಡುವ ತಿಂಡಿ- ತಿನಿಸು ಸೇವಿಸುತ್ತದೆ. ಯಾರೇ ಅಪರಿಚಿತರು ಆಹಾರ ಎಸೆದರೆ, ಅಷ್ಟು ಸುಲಭವಾಗಿ ತಿನ್ನುವುದಿಲ್ಲ. ಶ್ವಾನಗಳಲ್ಲೇ ಅತೀ ಎತ್ತರ, ಕಡಿಮೆ ಭಾರ ಹಾಗೂ ಓಟದಲ್ಲಿ ಅತೀ ವೇಗ ಹೊಂದಿರುವ ಶ್ವಾನಗಳೆಂಬ ಖ್ಯಾತಿ ಇವುಗಳದ್ದು.
Advertisement
ದೇಶ ಕಾಯುವ ಕೆಲಸದಲ್ಲಿ…ಮುಧೋಳ ನಾಯಿ, ಗಡಿ-ವಿದೇಶಕ್ಕೂ ಲಗ್ಗೆ ಇಟ್ಟಿದೆ. ದೇಶದ ಮಿಲಿಟರಿ ಸೇವೆಗೆ ಆಯ್ಕೆಯಾಗಿದೆ. 2018ರಿಂದ ಮುಧೋಳ ತಳಿಯ 9 ನಾಯಿಗಳು ಮಿಲಿಟರಿ ಭದ್ರತಾ ಪಡೆಯಲ್ಲಿ ತರಬೇತಿ ಹೊಂದಿ ಅಪರಾಧ ಪತ್ತೆ ದಳದಲ್ಲಿ ಕೆಲಸ ಮಾಡುತ್ತಿವೆ. ಅಲ್ಲದೇ ರಾಜಸ್ತಾನದ ಎಸ್‌ಎಸ್‌ಬಿ (ಅಲ್ಲಿನ ಭದ್ರತಾ ಪಡೆ)ಗೆ 2, ರಾಜ್ಯದ ಸಿಆರ್‌ಪಿಎಫ್‌ಗೆ 2 ಶ್ವಾನ ಆಯ್ಕೆಗೊಂಡು, ಈಗಾಗಲೇ ಅತ್ಯುತ್ತಮವಾಗಿ (ಎಲ್ಲ ತಳಿಗಿಂತಲೂ ಉತ್ತಮವಾಗಿ) ಕೆಲಸ ಮಾಡುತ್ತಿವೆ. ಈಚೆಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಗೂ ಆಯ್ಕೆಗೊಂಡಿದ್ದು, ನಾಲ್ಕು ಮರಿಗಳು ತೆರಳಲು ಸಿದ್ಧಗೊಂಡಿವೆ. ಮನೆ, ಕಾಫಿ ಎಸ್ಟೇಟ್, ಕುರಿ ಹಿಂಡುಗಳನ್ನು ಕಾಯಲು, ಒಟ್ಟಿನಲ್ಲಿ ಭದ್ರತೆ ಒದಗಿಸಲು ಮುಧೋಳ ನಾಯಿ ಹೇಳಿ ಮಾಡಿಸಿದ ತಳಿ. ಶ್ವಾನ ಸಾಕಣಿಕೆಯೇ ಜೀವನ
ಮುಧೋಳ ತಳಿಯ ಶ್ವಾನಗಳ ಮಾರಾಟದಿಂದ ಜಿಲ್ಲೆಯ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ. ಲೋಕಾಪುರದ ವೆಂಕಣ್ಣ ದುಂಡಪ್ಪ ನಾವದಗಿ ಅವರು ಅವರ ಮುತ್ತಜ್ಜನ ಕಾಲದಿಂದಲೂ ಮುಧೋಳ ಶ್ವಾನ ಸಾಕಾಣಿಕೆ ಮಾಡುತ್ತಿದ್ದಾರೆ. ದೇಶದ ಹಲವು ಭಾಗದಲ್ಲಿ ಶ್ವಾನ ಪ್ರದರ್ಶನ ಮಾಡಿ, ದ್ವಿತೀಯ ಬಹುಮಾನ ಕೂಡ ಪಡೆದಿದ್ದಾರೆ. ಅವರ ಮನೆತುಂಬ ಮುಧೋಳ ನಾಯಿಗಳು ಮತ್ತು ಅವುಗಳಿಗೆ ಬಂದ ಪ್ರಶಸ್ತಿಗಳು ಕಾಣಸಿಗುತ್ತವೆ. ಐದು ಗಂಡು, ಐದು ಹೆಣ್ಣು ನಾಯಿ ಸಾಕಿರುವ ಅವರು, ಅವುಗಳನ್ನು ಕ್ರಾಸಿಂಗ್ ಮಾಡಿ, ಮರಿಗಳ ಮಾರಾಟ ಮಾಡುತ್ತಾರೆ. ಬೆಂಗಳೂರು, ಮಂಗಳೂರು, ಮುಂಬೈ, ಮದುರೈ, ತಮಿಳುನಾಡು, ಮಂಗಳೂರು ಮಾತ್ರವಲ್ಲದೆ ಚೀನಾ, ಅಬುದಾಬಿ, ಬಾಂಗ್ಲಾದೇಶ… ಮುಂತಾದ ಹೊರದೇಶಗಳಿಗೂ ಇಲ್ಲಿನ ಮುಧೋಳ ನಾಯಿಗಳು ಪ್ರಯಾಣ ಬೆಳೆಸಿವೆ.
ಮುಧೋಳ ನಾಯಿ ಸಾಕುವುದು ಸುಲಭ. ಆದರೆ, ಮರಿ ಕೊಳ್ಳುವಾಗ ಒಂದಷ್ಟು ಹಣ ಖರ್ಚು ಮಾಡಲೇಬೇಕು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಿಮ್ಮಾಪುರದ ಮುಧೋಳ ಶ್ವಾನ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ಮುಧೋಳ ಶ್ವಾನದ ಮರಿ ಸಿಗುತ್ತವೆ. ಇದರ ಜತೆಗೆ ಬಾಗಲಕೋಟೆ ನಗರ, ಲೋಕಾಪುರ, ಹಲಗಲಿ, ಮುಧೋಳದಲ್ಲೂ ಇದನ್ನು ಸಾಕುವವರಿದ್ದಾರೆ. ಸದ್ಯ, 40 ದಿನಗಳ ಮೇಲ್ಪಟ್ಟ ಮರಿಗಳ ಬೆಲೆಯನ್ನು ಸರ್ಕಾರವೇ ರೂ. 10,000 ರೂ. ಎಂದು ನಿಗದಿ ಮಾಡಿದೆ. ಈ ಹಣ ನೀಡಿ, ಮುಧೋಳ ನಾಯಿ ಖರೀದಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. 40 ದಿನಗಳ ಒಳಗೆ ಒಂದು “ಪಪ್ಪಿ ಡಿಪಿ’ ಎಂಬ ಇಂಜೆಕ್ಷನ್ ಹಾಗೂ 40 ದಿನಗಳ ಬಳಿಕ ಒಂದು ರೇಬಿಸ್ ಇಂಜೆಕ್ಷನ್ ಹಾಕಿದರೆ ಆಯ್ತು. ಬಳಿಕ ಪ್ರತಿವರ್ಷ ರೇಬಿಸ್ ಚುಚ್ಚುಮದ್ದು ಹಾಕಿಸುತ್ತಿದ್ದರೆ ಅದರ ನಿರ್ವಹಣೆ ಮುಗಿಯಿತು. ವರ್ಷಕ್ಕೆ ಗರಿಷ್ಠವೆಂದರೂ 1 ಸಾವಿರ ಖರ್ಚು ಮಾತ್ರ ಬರುತ್ತದೆ. ಇನ್ನು ಆಹಾರ ಪದ್ಧತಿಯಲ್ಲಿ ವಿಶೇಷತೆಗಳಿಲ್ಲ. ನಾವು ನಿತ್ಯ ಮನೆಯಲ್ಲಿ ಯಾವ ಅಡುಗೆ ಮಾಡಿ ತಿನ್ನುತ್ತೇವೆಯೋ ಅದೇ ಅಡುಗೆ ಹಾಕಿದರೂ ಅದು ತಿನ್ನುತ್ತದೆ. ಬಹುತೇಕ ಶ್ವಾನ ಸಾಕಣಿಕೆದಾರರು, ನಿತ್ಯ 250 ಎಂ.ಎಲ್. ಹಾಲು, ಒಂದು ಮೊಟ್ಟೆ ಕೊಡುತ್ತಾರೆ. ಜತೆಗೆ, ರವೆ ಗಂಜಿ ಹಾಕುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಮಾಂಸಾಹಾರ ತಿನ್ನುವವರಿದ್ದರೆ ಅದನ್ನೂ ಹಾಕುತ್ತಾರೆ. ಒಟ್ಟಾರೆ, ಮುಧೋಳ ನಾಯಿಗೆ ಇಂಥದ್ದೇ ಆಹಾರ ಬೇಕೆಂದಿಲ್ಲ. ಸಸ್ಯಹಾರಿ ನಾಯಿ 12- 13 ವರ್ಷ, ಮಾಂಸಾಹಾರಿ ನಾಯಿ 15- 16 ವರ್ಷಗಳ ಕಾಲ ಬದುಕುತ್ತವೆ. ಬೇಟೆಗಾಗಿಯೇ ಹುಟ್ಟಿಕೊಂಡ ತಳಿ ಇದಾಗಿದ್ದರಿಂದ, ಮಾಂಸಾಹಾರ ತಿಂದಷ್ಟೂ ಗಟ್ಟಿಮುಟ್ಟಾಗಿರುತ್ತದೆ.
ಮುಧೋಳ ಶ್ವಾನ ಸಂಶೋಧನೆ ಕೇಂದ್ರ ಹಾಗೂ ಸುಮಾರು 20ಕ್ಕೂ ಹೆಚ್ಚು ಜನ ಸಾಕಣಿಕೆದಾರರು, ನಾಯಿಗೆ ಮೈಕ್ರೋ ಚಿಪ್ ಅಳವಡಿಸುತ್ತಾರೆ. ಒಬ್ಬ ಮನುಷ್ಯನಿಗೆ ಹೇಗೆ ವೈಯಕ್ತಿಕ ದಾಖಲೆ ನಿರ್ವಹಣೆ ಮಾಡಲಾಗುತ್ತದೆಯೋ, ಅದೇ ರೀತಿ ಮುಧೋಳ ನಾಯಿಗೂ ಅದರ ದಾಖಲೆ ನಿರ್ವಹಣೆ ಮಾಡಲಾಗುತ್ತದೆ. ಒಂದು ನಾಯಿಯ ಕ್ರಾಸಿಂಗ್‌ನಿಂದ ಹುಟ್ಟಿದ ಮರಿಗಳು ದೊಡ್ಡದಾದ ಬಳಿಕ, ಅದರ ಅಕ್ಕ, ತಂಗಿ ಇದ್ದಲ್ಲಿ ಅದರೊಂದಿಗೆ ಕ್ರಾಸಿಂಗ್ ಮಾಡಲಾಗುವುದಿಲ್ಲ. ಹಾಗೇನಾದರೂ ಮಾಡಿದರೆ, ಮರಿ ಆರೋಗ್ಯವಂತವಾಗಿ ಇರುವುದಿಲ್ಲ. ಹೀಗಾಗಿ, ಮುಧೋಳ ಶ್ವಾನಗಳನ್ನು ಕ್ರಾಸಿಂಗ್ ಮಾಡಿಸುವ ವೇಳೆ ಅದರ ಸಂಬಂಧವನ್ನು ಕಡ್ಡಾಯವಾಗಿ ತಿಳಿದುಕೊಳ್ಳಲಾಗುತ್ತದೆ. ಎರಡು ವರ್ಷಗಳ ಹಿಂದೆ ಮಿಲಿಟರಿಗೆ ಸೇರಿದ್ದ ಈ ಶ್ವಾನ, ಜರ್ಮನ್ ಶೆಫರ್ಡ್ ಮತ್ತು ಲ್ಯಾಬ್ರಡಾರ್ ತಳಿಗಳಿಗಿಂತಲೂ ಬೇಗ ತರಬೇತಿ ಪಡೆದಿವೆ. ಪ್ರಾಚೀನ ಕಾಲದ ಈ ದೇಸಿ ತಳಿ, “ಮೇಕ್ ಇನ್ ಇಂಡಿಯಾ’ ಅಡಿ ಮಿಲಿಟರಿ ಸೇವೆಗೆ ಸೇರಿದೆ. ಇದೀಗ ಎನ್.ಎಸ್.ಜಿ ಪಡೆಗೂ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆ.
-ಡಾ. ಮಹೇಶ ದೊಡಮನಿ, ಮುಖ್ಯಸ್ಥರು, ಮುಧೋಳ ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರ, ತಿಮ್ಮಾಪುರ, ಮುಧೋಳ ಮುಧೋಳ ನಾಯಿ ಸಾಕುವುದು ಸುಲಭ. ಉಳಿದ ಶ್ವಾನಗಳಿಗೆ ಹೋಲಿಸಿದರೆ ಔಷಧೋಪಚಾರ ಕಡಿಮೆ. ಅಲ್ಲದೆ ಇವುಗಳಿಗೆ ವಿಶೇಷ ಆಹಾರವೂ ಬೇಕಿಲ್ಲ. ಮನೆಯವರು ತಾವು ತಿನ್ನುವುದನ್ನೇ ಇವಕ್ಕೂ ನೀಡಬಹುದು.
-ವೆಂಕಣ್ಣ ದುಂಡಪ್ಪ ನಾವಲಗಿ, ಮುಧೋಳ ನಾಯಿ ಸಾಕಣಿಕೆದಾರ, ಲೋಕಾಪುರ
ಸಂಪರ್ಕ: 9008658897 ಲೇಖನ: ಶ್ರೀಶೈಲ ಕೆ. ಬಿರಾದಾರ
ಚಿತ್ರಗಳು: ವಿಠ್ಠಲ ಮೂಲಿಮನಿ