ಬೆಂಗಳೂರು: ಅಸಮರ್ಪಕ ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ನಾಯಿ ಮೃತಪಟ್ಟಿದೆ ಎಂಬ ಆರೋಪ ಸಂಬಂಧ ಗುತ್ತಿಗೆ ಪಡೆದುಕೊಂಡಿದ್ದ ಎನ್‌ಜಿಒ ಹಾಗೂ ವೈದ್ಯರ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಗ್ಗದಾಸಪುರದ ಅಬ್ಬಯ್ಯ ರೆಡ್ಡಿ ಲೇಔಟ್‌ನ ಅಪಾರ್ಟ್‌ಮೆಂಟ್‌ಗಳ ಬಳಿ ಓಡಾಡಿಕೊಂಡಿದ್ದ ಆರು ತಿಂಗಳ ಜೂಲಿ ಹೆಸರಿನ ನಾಯಿಯನ್ನು ತೆಗೆದುಕೊಂಡು ಹೋದ ಸುಶ್ಮಾ ಎಂಟರ್‌ಪ್ರೈಸಸ್ ಎನ್‌ಜಿಒ ಪ್ರತಿನಿಧಿಗಳು, ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿ, ಏ.9ರಂದು ವಾಪಸ್ ತಂದು ಬಿಟ್ಟಿದ್ದರು. ಅಂದಿನಿಂದ ನಾಯಿ ಏನನ್ನೂ ತಿನ್ನುತ್ತಿರಲಿಲ್ಲ. ತೀವ್ರ ನಿತ್ರಾಣವಾಗಿತ್ತು. ಚಿಕಿತ್ಸೆ ಕೊಡಿಸಿದರೂ ಫಲಿಸದೆ ನಾಯಿ ಮೃತಪಟ್ಟಿದೆ. ಎನ್‌ಜಿಒ ಅಮರ್ಪಕ ಚಿಕಿತ್ಸೆಯಿಂದಲೇ ನಾಯಿ ಮೃತಪಟ್ಟಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರಕರಣ ಸಂಬಂಧ ‘ಉದಯವಾಣಿ’ ಜತೆ ಮಾತನಾಡಿದ ದೂರುದಾರೆ ನಿವೆನಾ ಕಾಮತ್ ‘ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸದೆ ಅಸಮರ್ಪಕ ರೀತಿಯಲ್ಲಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಎನ್‌ಜಿಒ ಹಾಗೂ ಬಿಬಿಎಂಪಿ ಆರೋಗ್ಯ ವಿಭಾಗದ ಲೋಪವೇ ಇದಕ್ಕೆ ಕಾರಣ. ಈ ಹಿಂದೆಯೂ ಹಲವು ನಾಯಿಗಳು ಇದೇ ಕಾರಣದಿಂದ ಮೃತಪಟ್ಟಿವೆ,’ ಎಂದು ಆರೋಪಿಸಿದರು.
Advertisement
ಅನಿಮಲ್ ಜಸ್ಟೀಸ್ ಸಂಸ್ಥೆಯ ಸಾಮಾಜಿಕ ಕಾರ್ಯಕರ್ತೆ ನೆವಿನಾ ಕಾಮತ್ ನೀಡಿರುವ ದೂರಿನ ಅನ್ವಯ ಸುಶ್ಮಾ ಎಂಟರ್‌ಪ್ರೈಸಸ್ ಹೆಸರಿನ ಎನ್‌ಜಿಒದ ಅರುಣಾ ರೆಡ್ಡಿ ಹಾಗೂ ವೈದ್ಯರ ವಿರುದ್ಧ ಪ್ರಾಣಿ ಹಿಂಸೆ ತಡೆಕಾಯಿದೆ, ಐಪಿಸಿ 428 ಅನ್ವಯ ಎಫ್ಐಆರ್ ದಾಖಲಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.