ಬೆಂಗಳೂರು: ಬೀದಿನಾಯಿಗಳ ಗಣತಿಗೆ ಮುಂದಾ ಗಿ ರುವ ಬಿಬಿಎಂಪಿಗೆ ಇದೀಗ ಇಂಡಿ ಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಕೈ ಜೋಡಿಸಿದೆ. ಈಗಾಗಲೇ ಪಾಲಿಕೆಯ ಪಶುಪಾಲನಾ ವಿಭಾಗವು ಬಿಬಿಎಂಪಿ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ನಾಯಿಗಣತಿ ಪ್ರಾರಂಭಿಸಿದೆ. ಇದಕ್ಕೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ ಟೆಕ್ನಾಲಜಿ ಪಾರ್ಕ್ ವಿಭಾಗ ನೆರವಾಗಿದೆ.
ಡ್ರೋನ್ ತಂತ್ರಜ್ಞಾನ ಬಳಸಿಕೊಂಡು ಬೀದಿ ನಾಯಿಗಳ ಎಣಿಕೆ ಕಾರ್ಯದ ಪ್ರಾಯೋಗಿಕ ಕಾರ್ಯ ಪ್ರಾರಂಭಿಸಲಾಗಿದೆ. ಬೀದಿ ನಾಯಿಗಳ ಸಮೀಕ್ಷೆಗೆ ಡ್ರೋನ್ ಬಳಸುತ್ತಿರುವುದು ಭಾರತದಲ್ಲಿ ಇದೇ ಮೊದಲನೆಯ ಯೋಜನೆಯಾಗಿದೆ.
ಮೊದಲ ಹಂತದಲ್ಲಿ ಹುಳಿಮಾವು, ಸಾರಕ್ಕಿ, ಸೀಗೆನಹಳ್ಳಿ ಮತ್ತು ಎಲೆ ಮಲ್ಲಪ್ಪ ಶೆಟ್ಟಿ ಕೆರೆಗಳನ್ನು ಪರಿಕಲ್ಪನೆಯ ಪುರಾವೆಯಾಗಿ ಆಯ್ಕೆ ಮಾಡಲಾಗಿ ರುತ್ತದೆ. ಡ್ರೋನ್‌ಗಳು ನಾಯಿಗಳ ಚಿತ್ರಗಳನ್ನು ಸೆರೆಹಿಡಿಯಲು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಬೀದಿ ನಾಯಿಗಳನ್ನು ಗುರುತಿಸಲು ಯಶಸ್ವಿಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದತ್ತಾಂಶ ತಾಳೆ ಮಾಡಲಾಗುತ್ತಿದೆ: ಡ್ರೋನ್ ಸಮೀಕ್ಷೆಯ ದತ್ತಾಂಶವನ್ನು ಮುಂಬರುವ ದಿನಗಳಲ್ಲಿ ವಿಶ್ಲೇಷಿಸಲಾಗುವುದು ಮತ್ತು ಸಾಂಪ್ರದಾಯಿಕ ಕ್ಷೇತ್ರ ಸಮೀಕ್ಷೆ ತಂಡವು ಸಂಗ್ರಹಿಸಿದ ದತ್ತಾಂಶದೊಂದಿಗೆ(ಡೇಟಾ) ತಾಳೆ ಮಾಡಲಾಗುತ್ತದೆ. ದತ್ತಾಂಶವು ಪರಸ್ಪರ ಸಮಾನತೆ ಹೊಂದಿದ್ದರೆ, ಮುಂಬರುವ ವರ್ಷಗಳಲ್ಲಿ ಸಿಲಿಕಾನ್ ಸಿಟಿಯ ಎಲ್ಲಾ ಸುರಕ್ಷಿತ ಮತ್ತು ಮುಕ್ತ ಹಾರಾಟದ ಸ್ಥಳಗಳನ್ನು ಡ್ರೋನ್ ಗಳೊಂದಿಗೆ ಸಮೀಕ್ಷೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಪಶುಪಲನಾ ವಿಭಾಗ ಜಂಟಿ ನಿರ್ದೇಶಕ ಡಾ.ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಹಗಲು ರಾತ್ರಿ ಕೂಡ ಸಮೀಕ್ಷೆಯನ್ನು ಕೈಗೊಳ್ಳಬಹುದಾಗಿದ್ದು, ಪೈಲಟ್ ಯೋಜನೆಯ ಸಮಯದಲ್ಲಿ, ತಂಡವು ವಾಯುಪ್ರದೇಶದ ನಿಯಮಗಳು ಮತ್ತು ಸುರಕ್ಷತೆಯ ಕಾಳಜಿಗಳೊಂದಿಗೆ ನಗರ ವಾಯುಪ್ರದೇಶಗಳಲ್ಲಿ ಡ್ರೋನ್ ಗಳನ್ನು ನಿರ್ವಹಿಸುವಲ್ಲಿ ಕೆಲವು ಸವಾಲುಗಳನ್ನು ಗುರುತಿಸಿಲಾಗಿದೆ ಎಂದು ತಿಳಿಸಿದ್ದಾರೆ.