Advertisement

ನಾಯಿ, ಬೆಕ್ಕು ನಾಪತ್ತೆ; ಮನೆ ಮಾಲಕರಿಂದ ದೂರು

10:34 AM Jun 03, 2018 | |

ಮಹಾನಗರ: ಮಂಗಳವಾರ ಸುರಿದ ಭಾರೀ ಮಳೆಯಿಂದ ಮನೆಯ ಒಳಗೆ ನೀರು ನುಗ್ಗಿ ವಸ್ತುಗಳು ಹಾಳಾಗಿವೆ. ಟಿವಿ, ಫ್ರಿಜ್ಜ್, ವಾಶಿಂಗ್‌ ಮಿಷಿನ್‌ ಕೈ ಕೊಟ್ಟಿದೆ. ಬಟ್ಟೆ, ಮನೆಯ ಕೀ ಕಳೆದು ಹೋಗಿದೆ.. ಹೀಗೆ ನೂರಾರು ಸಮಸ್ಯೆಯ ಬಗ್ಗೆ ಪತ್ರಿಕೆಗಳಲ್ಲಿ ಇತರ ಮಾಧ್ಯಮಗಳ ಮೂಲಕ ಕೇಳಿದ್ದೇವೆ. ಆದರೆ ಯಾರಿಗೂ ಅರಿಯದ ಭಾವನಾತ್ಮಕವಾಗಿ ಬೆಸೆದಿರುವ ದೂರುಗಳು ಮಾತ್ರ ದಾಖಲಾಗುತ್ತಿರುವುದು ನಗರದ ಎನಿಮಲ್‌ ಕೇರ್‌ ಟ್ರಸ್ಟ್‌ನಲ್ಲಿ…!

Advertisement

ಮಳೆಯ ಅವಾಂತರದಿಂದ ಮನೆಯ ಸದಸ್ಯರಂತಿದ್ದ ನಾಯಿ, ಬೆಕ್ಕುಗಳು ನಾಪತ್ತೆ ಯಾಗಿವೆ. ಅವನ್ನು ಹುಡುಕಿ ಕೊಡಿ ಎಂದು ಮನೆ ಮಾಲಕರು ತಮ್ಮ ಸ್ನೇಹಿತರು, ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಮನವಿ ಮಾಡಿ ಕೊಳ್ಳುತ್ತಿದ್ದಾರೆ. ಅದಕ್ಕಿಂತಲೂ ಮಿಗಿಲಾಗಿ ಶಕ್ತಿನಗರದ ಎನಿಮಲ್‌ ಕೇರ್‌ ಟ್ರಸ್ಟ್‌ ನಲ್ಲಿ ತಮ್ಮ ಸಾಕುಪ್ರಾಣಿಗಳನ್ನು ಹುಡುಕಿ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಅದರ ಹುಡುಕಾಟದಲ್ಲಿ ಟ್ರಸ್ಟ್‌ನ ಸಿಬಂದಿ ತೊಡಗಿದ್ದಾರೆ.

ಮಳೆಯಿಂದ ನಗರದಲ್ಲಿ ಉಂಟಾದ ಹಾನಿ ಸಮಯದಲ್ಲಿ ಮನೆ ಮಂದಿ ಮನೆ ಸದಸ್ಯರ ಕ್ಷೇಮದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಾರೆ. ಈ ಭಯದ ವಾತಾವರಣದ ಮಧ್ಯೆ ಮನೆಯಲ್ಲಿದ್ದ ನಾಯಿ, ಬೆಕ್ಕು ಹಾಗೂ ಇತರ ಸಾಕುಪ್ರಾಣಿಗಳು ಭಯಗೊಂಡು ಓಡಿಹೋಗಿರುವುದು ಅಥವಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದನ್ನು ಯಾರೂ ಗಮನಿಸಿರುವುದಿಲ್ಲ. ವರುಣನ ಆರ್ಭಟ ಶಾಂತಗೊಂಡ ಬಳಿಕ ಮನೆಯ ಸಾಕುಪ್ರಾಣಿಗಳ ಕಡೆ ಗಮನಹರಿಸುತ್ತಾರೆ. ಅದು ನಾಪತ್ತೆಯಾಗಿರುವುದನ್ನು ಗಮನಿಸಿ ಮರುಗುತ್ತಾರೆ. ಅದರಲ್ಲೂ ಸಾಕುಪ್ರಾಣಿಗಳನ್ನು ಮನೆಮಂದಿಯಂತೆ ಪ್ರೀತಿಸುತ್ತಿರುವವರು ಸಾಮಾಜಿಕ ಜಾಲ ತಾಣಗಳಲ್ಲಿ ನಾಯಿಯ ಫೋಟೋ ಜತೆಗೆ ಮಾಹಿತಿಯನ್ನು ನೀಡಿ ಕಾಣಸಿಕ್ಕರೆ ಸಂಪರ್ಕಿಸಿ ಎಂಬ ಸಂದೇಶವನ್ನು ರವಾನಿಸುತ್ತಿದ್ದಾರೆ.

ಟ್ರಸ್ಟ್‌ಗೆ ಒಂಬತ್ತು ದೂರು
ಭಾರೀ ಮಳೆಯ ಬಳಿಕ ನಾಪತ್ತೆಯಾದ ಸಾಕುಪ್ರಾಣಿಗಳನ್ನು ಹುಡುಕಿಕೊಡುವಂತೆ ಟ್ರಸ್ಟ್‌ಗೆ ಒಂಬತ್ತು ದೂರುಗಳು ಬಂದಿವೆ. ಅದರಲ್ಲಿ ಆರು ನಾಯಿ ಹಾಗೂ ಮೂರು ಬೆಕ್ಕಗಳು ಸೇರಿಕೊಂಡಿವೆ. ಟ್ರಸ್ಟ್‌ ನ ಸಿಬಂದಿ ಹುಡುಕಾಟದ ಬಳಿಕ ಐದು ನಾಯಿ ಹಾಗೂ 2 ಬೆಕ್ಕು ಸಿಕ್ಕಿವೆ.ಅದನ್ನು ಮಾಲಕರಿಗೆ ನೀಡಲಾಗಿದೆ . ಬಾಕಿ ಇರುವ ಪ್ರಾಣಿಗಳನ್ನು ಆದಷ್ಟು ಬೇಗ ಹುಡುಕಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಟ್ರಸ್ಟ್‌ನ ಸಿಬಂದಿ ಉದಯವಾಣಿಗೆ ತಿಳಿಸಿದ್ದಾರೆ.

ಅಪಘಾತಗಳ ಪ್ರಮಾಣ ಹೆಚ್ಚಾಗಿದೆ
ನೆರೆಯ ಕಾರಣದಿಂದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದ ಪ್ರಾಣಿಗಳಿಗೆ ಅಲ್ಲಿನ ರಸ್ತೆಯ ಬಗ್ಗೆ ತಿಳಿಯದೆ ಇರುವುದರಿಂದ ಅದು ವಾಹನಗಳ ಅಡಿಗೆ ಬಿದ್ದು ಸಾವನ್ನಪ್ಪುವುದು ಹಾಗೂ ಗಾಯಗಳಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಇಂತಹ ಘಟನೆಗಳಿಗೆ ಸಂಬಂಧಿಸಿ ಟ್ರಸ್ಟ್‌ಗೆ 20 ಪ್ರಕರಣಗಳು ಬಂದಿವೆ. ಅದರಲ್ಲಿ 10 ನಾಯಿಗಳು ಸಾವನ್ನಪ್ಪಿದ್ದು, ಇನ್ನೂ 10 ಪ್ರಾಣಿಗಳು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿವೆ.

Advertisement

ವಾಹನ ಸವಾರರು ಎಚ್ಚರ ವಹಿಸಿ
ನೆರೆಗೆ ದಾರಿ ತಪ್ಪಿ ರಸ್ತೆಗಳಲ್ಲಿ ಅಡ್ಡಾಡುತ್ತಿರುವ ಪ್ರಾಣಿಗಳ ಬಗ್ಗೆ ವಾಹನ ಸವಾರರು ಎಚ್ಚರ ವಹಿಸಬೇಕು. ಗಾಡಿಯನ್ನು ನಿಧಾನವಾಗಿ ಚಲಾಯಿಸಿದರೆ ಪ್ರಾಣಿಗಳನ್ನು ರಕ್ಷಿಸಬಹುದು. ಅದು ಮಾತ್ರವಲ್ಲದೆ ಯಾವುದೇ ಸಮಯದಲ್ಲೂ ವಾಹನದಡಿಗೆ ಬೀಳುವ ಪ್ರಾಣಿಗಳ ರಕ್ಷಣೆಗಾಗಿ ಹೆಚ್ಚು ಪ್ರಾಶಸ್ತ್ಯವನ್ನು ಎಲ್ಲರೂ ನೀಡಬೇಕು.
– ತೌಸಿಫ್‌,
ಟ್ರಸ್ಟ್‌ನ ರಕ್ಷಣಾ ಉಸ್ತುವಾರಿ

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next