ಬೆಳ್ತಂಗಡಿ: ಬಳೆಂಜ ಗ್ರಾ.ಪಂ ವ್ಯಾಪ್ತಿಗೆ ಸೇರಿದ ಪೆರಾಲ್ದರಕಟ್ಟೆ ಎಂಬಲ್ಲಿ ರೇಬಿಸ್ ಕಾಯಿಲೆ ಪೀಡಿತ ನಾಯಿಯೊಂದು ಜನ ಜಾನುವಾರುಗಳಿಗೆ ಎರಗಿದ ಘಟನೆ ನಡೆದಿದೆ.
ಮಹಿಳೆಯೊಬ್ಬರು ಬೀಡಿ ತೆಗೆದುಕೊಂಡು ಹೋಗುವಾಗ ಸ್ಥಳೀಯ ಶಿರಾಜ್ ಅವರ ಹಟ್ಟಿಯಲ್ಲಿದ್ದ ಕರುವಿಗೆ ಕಚ್ಚಿದೆ. ಬಳಿಕ ಸಮೀಪದಲ್ಲೆ ಮೇಕೆ ಮರಿಯೊಂದಕ್ಕೆ ಕಡಿದ ಪರಿಣಾಮ ಮರಿ ಮೃತಪಟ್ಟಿದೆ. ಜನ ಜಾನುವಾರುಗಳನ್ನು ಗಾಯಗೊಳಿಸಿದೆ.
ಪೆರಾಲ್ದರಕಟ್ಟೆಯ ಇಂಡಸ್ಟ್ರೀಸ್ ಒಂದರ ಇಬ್ಬರು ಮಹಿಳೆಯರು ಮತ್ತು ಮಸೀದಿಯ ಬಳಿಯ ಮಹಿಳೆಯೊಬ್ಬರಿಗೆ ಹುಚ್ಚು ನಾಯಿ ಕಡಿದಿದೆ. 3 ಜಾನುವಾರುಗಳ ಮೇಲೆ ಎರಗಿ ಗಾಯಗೊಳಿಸಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಬೀದಿ ಬದಿಯ ಭಾಗಶಃ ಎಲ್ಲ ನಾಯಿಗಳ ಮೇಲೂ ಈ ಹುಚ್ಚು ನಾಯಿ ದಾಳಿ ನಡೆಸಿದೆ. ಬಳಿಕ ಸಾರ್ವಜನಿಕರು ಗ್ರಾ.ಪಂ ಸದಸ್ಯ ನಿಜಾಂ ಅವರ ನೇತೃತ್ವದಲ್ಲಿ ಹುಚ್ಚು ನಾಯಿಯನ್ನು ಬೆನ್ನತ್ತಿ ಹೊಡೆದು ಸಾಯಿಸಿದ್ದಾರೆ. ಇಲ್ಲದಿದ್ದರೆ ಆ ನಾಯಿ ಇನ್ನಷ್ಟು ಅಪಾಯ ಸೃಷ್ಡಿಸುವ ಸಾದ್ಯತೆ ಇತ್ತು.
ಹುಚ್ಚ ನಾಯಿ ಹಾವಳಿ ಬಗ್ಗೆ ಈಗಾಗಲೇ ನಮ್ಮ ಇಲಾಖೆಯ ಗಮನಕ್ಕೆ ಬಂದಿದೆ. ಇಂದು ಸಂಜೆಯೇ ಸ್ಥಳಕ್ಕೆ ತೆರಳಿ ಗಾಯಗಳಾಗಿರುವ ಜನ, ಜಾನುವಾರುಗಳಿಗೆ ಲಸಿಕೆ ಹಾಕುವ ಕೆಲಸ ಮಾಡಲಾಗುವುದು ಎಂದು ಬೆಳ್ತಂಗಡಿ ಪಶುಸಂಗೋಪನೆ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ.ಮಂಜ ನಾಯ್ಕ್ ಉದಯವಾಣಿಗೆ ತಿಳಿಸಿದ್ದಾರೆ.