ಕನ್ನಡ ಚಿತ್ರರಂಗದಲ್ಲಿ ಪ್ರಾಣಿಗಳು, ಅವುಗಳ ನಡುವಿನ ಒಡನಾಟವನ್ನು ಕಥಾಹಂದರವಾಗಿ ಇಟ್ಟುಕೊಂಡು ತೆರೆಗೆ ಬಂದು ಹಿಟ್ ಚಿತ್ರಗಳ ಉದಾಹರಣೆ ಸಾಕಷ್ಟು ಸಿಗುತ್ತದೆ. ಈಗ ಅಂಥದ್ದೇ ಮತ್ತೂಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು “ನಾನು ಮತ್ತು ಗುಂಡ’. ಹಾಸ್ಯನಟ ಶಿವರಾಜ್ ಕೆ.ಆರ್ ಪೇಟೆ ಮತ್ತು ರಾಕಿ ಎಂಬ ಶ್ವಾನ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವುದು ವಿಶೇಷ. ಶಂಕರ ಮತ್ತು ಗುಂಡನ (ನಾಯಿ) ನಡುವಿನ ಒಡನಾಟದ ಕಥೆಯನ್ನು ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನ ಮಾಡಿದ್ದಾರೆ.
ಸದ್ಯ ಪೋಸ್ಟ್ ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿರುವ “ನಾನು ಮತ್ತು ಗುಂಡ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ಟೀಸರ್‌ನಲ್ಲಿ ಶಂಕರ ಮತ್ತು ಗುಂಡನ ನಡುವಿನ ಬಾಂಧವ್ಯ, ಭಾವನಾತ್ಮಕ ದೃಶ್ಯಗಳಿದ್ದು, ಅದರ ಜೊತೆಗೆ ಚಿತ್ರದ ಹಿನ್ನೆಲೆ ಸಂಗೀತ, ಛಾಯಾಗ್ರಹಣ ಎಲ್ಲವೂ ಗಮನ ಸೆಳೆಯುತ್ತಿದೆ.
ಚಿತ್ರದ ಟೀಸರ್ ಬಿಡುಗಡೆಯ ಬಳಿಕ ಮಾತನಾಡಿದ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ, “ಇಡೀ ಚಿತ್ರ ನಾಯಿ ಮತ್ತು ಮನುಷ್ಯನ ಸುತ್ತ ಸಾಗುತ್ತದೆ. ಮೂಕ ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಬಂಧ ಹೇಗಿರುತ್ತದೆ ಅನ್ನೋದನ್ನ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ಕಾಮಿಡಿ, ಸೆಂಟಿಮೆಂಟ್, ಎಮೋಷನ್ ಎಲ್ಲವೂ ಇದೆ. ಚಿತ್ರದ ಪ್ರತಿ ದೃಶ್ಯಗಳು ಕೂಡ ಭಾವನಾತ್ಮಕವಾಗಿ ಮೂಡಿ ಬಂದಿದ್ದು, ನೋಡುಗರ ಹೃದಯ ಮುಟ್ಟುವುದು’ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಇನ್ನು ಚಿತ್ರದ ನಾಯಕ ನಟ ಶಿವರಾಜ್ ಕೆ.ಆರ್ ಪೇಟೆ, ಚಿತ್ರದ ಚಿತ್ರೀಕರಣದ ಅನುಭವಗಳು ಗುಂಡನ ಪಾತ್ರವನ್ನು ನಿರ್ವಹಿಸಿರುವ ನಾಯಿಯ ಜೊತೆಗಿನ ಒಡನಾಟವನ್ನು ಬಿಚ್ಚಿಟ್ಟರು.
ಇನ್ನು ಈ ಚಿತ್ರದಲ್ಲಿ ಸಂಯುಕ್ತಾ ಹೊರನಾಡು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚಂದನ ಕೆ.ಕೆ ಛಾಯಾಗ್ರಹಣ. ಕೆ.ಎಂ ಪ್ರಕಾಶ್ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಕಾರ್ತಿಕ್ ಶರ್ಮ ಸಂಗೀತ ಸಂಯೋಜನೆಯಿದ್ದು, ರೋಹಿತ್ ರಾಮನ್ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ವಿವೇಕಾನಂದ ಕಥೆ, ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ.
“ಪೊಯೆಮ್ ಪಿಕ್ಚರ್ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ರಘು ಹಾಸನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. “ನಾನು ಮತ್ತು ಗುಂಡ’ ಚಿತ್ರದ ಟೈಟಲ್‌ಗೆ “ಒಂದು ಮರೆಯದ ಕಥೆ…’ ಎಂಬ ಅಡಿಬರಹವಿದೆ. ಒಟ್ಟಾರೆ ಟೀಸರ್‌ನಲ್ಲೇ, ಸಿನಿ ಪ್ರಿಯರನ್ನು ಸೆಳೆಯುತ್ತಿರುವ “ನಾನು ಮತ್ತು ಗುಂಡ’ ಇದೇ ಮೇ ಅಂತ್ಯದೊಳಗೆ ತೆರೆಗೆ ಬರುವ ಸಾಧ್ಯತೆಯಿದ್ದು, ಚಿತ್ರದ ಬಗ್ಗೆ ಇರುವ ಎಲ್ಲಾ ಕುತೂಹಲಕ್ಕೆ ಚಿತ್ರ ಬಿಡುಗಡೆ ಬಳಿಕ ತೆರೆ ಬೀಳಲಿದೆ.