Advertisement

ಬಿಜೆಪಿಯವರು ಹಣ ವೆಚ್ಚವಿಲ್ಲದೇ ಚುನಾವಣೆ ಮಾಡುತ್ತಾರಾ?: ಆಳ್ವಾ

10:46 AM Apr 11, 2019 | pallavi |
ಹುಬ್ಬಳ್ಳಿ: ಬಿಜೆಪಿಯ ಎಲ್ಲರೂ ಸ್ವರ್ಗದಿಂದ ಇಳಿದಿದ್ದಾರೆ. ಅವರ ಚುನಾವಣೆಗೆ ದೇವರೇ ಹಣ ಖರ್ಚು ಮಾಡುತ್ತಿದ್ದಾನೆ. ಹಾಗಾಗಿ ಅವರು ಚುನಾವಣೆಯಲ್ಲಿ ಹಣ ಖರ್ಚು ಮಾಡದೆ ಆರಿಸಿ ಬರುತ್ತಾರೆ ಎಂದು ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್‌ ಆಳ್ವಾ ಕಿಡಿಕಾರಿದರು.
ಇಲ್ಲಿನ ಗೋಕುಲ ರಸ್ತೆಯ ಚವ್ಹಾಣ ಗ್ರೀನ್‌ ಗಾರ್ಡನ್‌ದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳವರು ಹಣ ವೆಚ್ಚ ಮಾಡದೆ ಚುನಾಯಿತರಾಗುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷಗಳ ಮುಖಂಡರ ಮೇಲೆ ಐಟಿ ದಾಳಿ ನಡೆಯುತ್ತದೆ, ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಮೇಲೆ ಯಾವುದೇ ಐಟಿ ದಾಳಿ ನಡೆಯುತ್ತಿಲ್ಲ. ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಗೆ ಇದು ಸ್ಪಷ್ಟ ನಿದರ್ಶನ ಎಂದರು.
70 ವರ್ಷದಲ್ಲಿ ಕಾಂಗ್ರೆಸ್‌ ಏನು ಮಾಡಿದೆ ಎಂದು ಮೋದಿ ಪ್ರಶ್ನಿಸುತ್ತಾರೆ. ದೇಶ ಇಷ್ಟೊಂದು ಅಭಿವೃದ್ಧಿ ಹೊಂದಲು, ಮೂಲಸೌಕರ್ಯ ಸೃಷ್ಟಿಯ ಕೆಲಸವನ್ನು ಮೋದಿ ಮಾಡಿದ್ದಾರೆಯೇ ಎಂದರಲ್ಲದೆ, ಸೈನಿಕ ಕಾರ್ಯಾಚರಣೆ ಹೆಸರಲ್ಲಿ ಮತಯಾಚನೆ ನಾಚಿಕೆಗೇಡಿನ ಸಂಗತಿ ಎಂದರು.
ಮೋದಿಯವರದ್ದು ಉಳ್ಳವರ ಪರ ಸರಕಾರ. ಇಂತಹ ಸರಕಾರವನ್ನು ಮನೆಗೆ ಕಳುಹಿಸಬೇಕಿದೆ. ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಮನೆ ಮನೆಗೆ ತೆರಳಿ ಮನವೊಲಿಸಲು ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕಾಂಗ್ರೆಸ್‌ ಸರಕಾರ ಕಳೆದ 40 ವರ್ಷಗಳಲ್ಲಿ 49ಲಕ್ಷ ಕೋಟಿ ರೂ. ಸಾಲ ಮಾಡಿದ್ದರೆ, ಎನ್‌ಡಿಎ ನೇತೃತ್ವದ ಬಿಜೆಪಿ ಸರಕಾರ ಕೇವಲ 5 ವರ್ಷಗಳಲ್ಲಿ 84.70ಲಕ್ಷ ಕೋಟಿ ರೂ. ಸಾಲ ಮಾಡಿ ದೇಶವನ್ನು ಸಾಲದ ಕೂಪಕ್ಕೆ ತಳ್ಳಿದೆ. ಸರ್ವ ಜನಾಂಗದ ಏಳ್ಗೆ ಹಾಗೂ ಜಾತ್ಯತೀತ ವಿಚಾರ ಹೊಂದಿದ ಪಕ್ಷ ಕಾಂಗ್ರೆಸ್‌ ಆಗಿದೆ. ಕಾರಣ ಬಿಜೆಪಿಯನ್ನು ಬೇರು ಸಮೇತ ಕಿತ್ತೂಗೆಯಲು ಎಲ್ಲರೂ ಪಣ ತೊಡಬೇಕು ಎಂದರು.
ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಡಾ| ಪುಷ್ಪಾ ಅಮರನಾಥ ಮಾತನಾಡಿ, ಬಿಜೆಪಿ ಮಹಿಳೆಯರ ವಿರೋಧಿ ಪಕ್ಷವಾಗಿದೆ. ಯಾವ ಯೋಜನೆಗಳನ್ನು ಜಾರಿಗೊಳಿಸದೆ ಮಹಿಳೆಯರ ಬೆನ್ನಿಗೆ ಚೂರಿ ಹಾಕಿದೆ. ಜನ್‌ಧನ್‌ ಯೋಜನೆ ಹೆಸರಿನಲ್ಲಿ ದೊಡ್ಡ ವಂಚನೆ ನಡೆದಿದೆ. ಅಚ್ಛೇ ದಿನ ಬರುತ್ತದೆ ಎಂದು ಸುಳ್ಳುಗಳ ಮೂಲಕ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಮಾತನಾಡಿ, ವಿಶ್ವದಲ್ಲಿ ಮಹಿಳೆಯರಿಗೆ ಸಮಾನತೆ ನೀಡಿದವರು ಬಸವಣ್ಣ. ನಂತರ ಡಾ| ಅಂಬೇಡ್ಕರರು. ಅದನ್ನು ಅನುಷ್ಠಾನಗೊಳಿಸಿದ್ದು ಕಾಂಗ್ರೆಸ್‌ ಪಕ್ಷ. ಪಕ್ಷದ ಪ್ರತಿಯೊಬ್ಬ ಮಹಿಳೆಯರು ಕನಿಷ್ಟ 10 ಜನರ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿ ಪರ ಮತ ಹಾಕಿಸುವ ಕಾರ್ಯ ಮಾಡಬೇಕು. ಬಿಜೆಪಿಯವರು ಒಡ್ಡುವ ಯಾವುದೇ ಆಮಿಷಗಳಿಗೆ ಯಾರೂ ಬಲಿಯಾಗಬಾರದು ಎಂದರು.
ವಿಧಾನ ಪರಿಷತ್‌ ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌. ಎಚ್‌. ಕೋನರಡ್ಡಿ ಮಾತನಾಡಿದರು. ಹು-ಧಾ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ತಾರಾದೇವಿ ವಾಲಿ, ದೇವಕಿ ಯೋಗಾನಂದ, ಸದಾನಂದ ಡಂಗನವರ, ಅಲ್ತಾಫ ಹಳ್ಳೂರ, ಮೋಹನ ಅಸುಂಡಿ, ರಾಜಶೇಖರ ಮೆಣಸಿನಕಾಯಿ ಮೊದಲಾದವರಿದ್ದರು.
ಕಾಂಗ್ರೆಸ್‌ ಅಲ್ಪಸಂಖ್ಯಾತರ ಪರವಾಗಿ¨
ಹುಬ್ಬಳ್ಳಿ: ಕಾಂಗ್ರೆಸ್‌ ಅಲ್ಪಸಂಖ್ಯಾತರ ಪರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಟಿಕೆಟ್‌ ನೀಡದ ಮಾತ್ರಕ್ಕೆ ಅಲ್ಪಸಂಖ್ಯಾತರ ವಿರೋಧಿ ಎನ್ನುವುದಲ್ಲಿ ಅರ್ಥವಿಲ್ಲ. ಈ ವಿಚಾರದಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಬಿಜೆಪಿ ತಂತ್ರ ಫ‌ಲಿಸಲ್ಲ ಎಂದು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಾಕೀರ ಸನದಿ ಸ್ಪಷ್ಟಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲದಿದ್ದರೆ ಟಿಕೇಟು ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ನಮ್ಮವರ ಬಗ್ಗೆ ಚಿಂತನೆ ಇರುವುದಕ್ಕಾಗಿಯೇ ಟಿಕೇಟು ಹಂಚಿಕೆ ವಿಳಂಬವಾಯಿತು. ಕೆಲ ಮಾನದಂಡಗಳ ಆಧಾರದ ಮೇಲೆ ವಿನಯ ಕುಲಕರ್ಣಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಅವರ ಪರ ಅಲ್ಪಸಂಖ್ಯಾತರು ಸೇರಿದಂತೆ ಇತರೆ ಎಲ್ಲಾ ಸಮಾಜದ ಜನರು ಬೆಂಬಲ ನೀಡಲಿದ್ದಾರೆ. ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡದಿರುವ ಅಸಮಾಧಾನ ಸರಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ, ಸಂಸದ ಪ್ರಹ್ಲಾದ ಜೋಶಿಯವರನ್ನು ಉತ್ತಮ ಸಂಸದ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಈ ಕುರಿತು ಇಲ್ಲಿನ ಮುಖಂಡರು ದಿನೇಶ ಗುಂಡೂರಾವ್‌ ಅವರೊಂದಿಗೆ ಮಾತನಾಡಿದ್ದಾರೆ. ಉದ್ದೇಶಪೂರ್ವಕವಾಗಿ ಹೇಳಿದ್ದರೆ ಇಲ್ಲಿನ ಕಾಂಗ್ರೆಸ್ಸಿಗರಿಗೆ ನೋವಾಗುವುದು ಖಚಿತ ಎಂದರು.
ರಾಜೀನಾಮೆ ನೀಡುತ್ತೇನೆ: ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಅಲ್ಪಸಂಖ್ಯಾತರಿಗೆ ಟಿಕೆಟ್‌ ಬೇಡ ಎಂದು ಅಂಜುಮನ್‌ ಇಸ್ಲಾಂ ಸಂಸ್ಥೆಯಿಂದ ಪತ್ರ ಬರೆದಿದ್ದಾರೆ ಎಂಬುದು ಶುದ್ಧ ಸುಳ್ಳು. ಪತ್ರ ಬರೆದಿದ್ದೇ ನಿಜವಾಗಿದ್ದರೆ ಅದನ್ನು ಬಹಿರಂಗಪಡಿಸಿದರೆ ಅಂಜುಮನ್‌ ಇಸ್ಲಾಂ ಸಂಸ್ಥೆ ಹಾಗೂ ರಾಜಕೀಯಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಶಾಕೀರ ಸನದಿ ಅಥವಾ ಅವರ ತಂದೆಗೆ ಟಿಕೆಟ್‌ ನೀಡಬೇಕೆಂಬುವುದು ನಮ್ಮ ಒತ್ತಾಯವಾಗಿತ್ತು. ಆದರೆ ಹೈಕಮಾಂಡ್‌ ತೆಗೆದುಕೊಂಡ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದರು. ಮುಖಂಡರಾದ ಬಂಗಾರೇಶ ಹಿರೇಮಠ, ರಜತ ಉಳ್ಳಾಗಡ್ಡಿಮಠ, ಶμ ಯಾದಗಿರಿ ಇನ್ನಿತರರಿದ್ದರು.
ಶಿವಳ್ಳಿ ಕುಟುಂಬಕ್ಕೆ ಜನರ ಒಲವು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸಭೆ ಮಾಡಲಾಗಿದೆ. ಅಭ್ಯರ್ಥಿ ಆಯ್ಕೆ ಕುರಿತು ಜನರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ನಮ್ಮ ವರದಿ ನೀಡುತ್ತೇವೆ. ಇದೀಗ ಜನರ ಒಲವು ಮಾಜಿ ಸಚಿವ ಸಿ.ಎಸ್‌.ಶಿವಳ್ಳಿ ಅವರ ಕುಟುಂಬ ಪರವಾಗಿದೆ ಎಂದು ಅನಿಲಕುಮಾರ ಪಾಟೀಲ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next