ಹೊಸದಿಲ್ಲಿ: ಅಯೋಧ್ಯೆಯಲ್ಲಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಿರ್ಮೋಹಿ ಅಖಾಡ ಮಂಡಿಸಿದ ವಾದವನ್ನು ಒಪ್ಪಲು ಮುಸ್ಲಿಂ ಸಂಘಟನೆಗಳು ಸಿದ್ಧವಾಗಿವೆಯೇ ಎಂದು ಸುಪ್ರೀಂಕೋರ್ಟ್ ಗುರುವಾರ ಪ್ರಶ್ನೆ ಮಾಡಿದೆ. ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ‘ನಿರ್ಮೋಹಿ ಅಖಾಡ 700, ಮತ್ತೂಬ್ಬರು 250 ವರ್ಷಗಳ ಹಿಂದೆ ಇದ್ದ ಬಗ್ಗೆ ಭಿನ್ನ ಮಾಹಿತಿ ನೀಡಿದ್ದರು. ಮತ್ತೂಬ್ಬ ಸಾಕ್ಷಿ 12 ಲಕ್ಷ ವರ್ಷಗಳ ಹಿಂದೆ ರಾಮ ಇದ್ದ ಎಂದಿದ್ದರು. ಆದರೆ 1855-’86ರಲ್ಲಿ ಅಖಾಡಾ ಇತ್ತು. ಮಹಾಂತ ರಘುವರ ದಾಸ್ ಎಂಬುವರು 1885ರಲ್ಲಿ ದಾವೆ ಹೂಡಿದರು ಎಂಬ ಅಂಶದಿಂದ ದೂರ ಸಾಗಲಾರೆನು’ ಎಂದು ವಕೀಲ ಅರಿಕೆ ಮಾಡಿಕೊಂಡರು. ಈ ವೇಳೆ ನ್ಯಾಯಪೀಠ, ಬೇರೆ ಬೇರೆ ವಾದಗಳ ಹೊರತಾಗಿಯೂ ಅಖಾಡಾಕ್ಕೆ ದೇಗುಲ ನಿರ್ವಹಿಸುವ ಹಕ್ಕು ಇದೆ ಎಂದು ಭಾವಿಸುತ್ತೀರಾ ಎಂದು ಧವನ್‌ರನ್ನು ಪ್ರಶ್ನೆ ಮಾಡಿತು. ನಿರ್ವಹಿಸುವ ಹಕ್ಕನ್ನು ಒಪ್ಪಿಕೊಂಡರೆ, ಅವರು ಮಂಡಿಸಿದ ಸಾಕ್ಷ್ಯಗಳನ್ನೂ ಒಪ್ಪಿಕೊಳ್ಳಬೇಕು ಎಂದಿತು.