ಕೋಲ್ಕತ : “ನಾನು ಮುಸ್ಲಿಮರನ್ನು ತುಷ್ಟೀಕರಿಸುತ್ತಿದ್ದೇನೆ ಎಂದು ದೂರುವವರು ಹಿಂದುಗಳ ಸ್ನೇಹಿತರೂ ಅಲ್ಲ; ಮುಸ್ಲಿಮರ ಸ್ನೇಹಿತರೂ ಅಲ್ಲ’ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ನಾನು ಮುಸ್ಲಿಮರನ್ನು ತುಷ್ಟೀಕರಿಸುತ್ತಿದ್ದೇನೆ ಎಂದು ಕೆಲವರು ಆರೋಪಿಸುತ್ತಾರೆ. ಅವರಿಗೆ ನನ್ನ ಪ್ರಶ್ನೆ ಏನೆಂದರೆ ಹಿಂದುಗಳನ್ನು ಪ್ರೀತಿಸುವುದೆಂದರೆ ಮುಸ್ಲಿಮರನ್ನು ದ್ವೇಷಿಸುವುದು ಎಂದು ಅರ್ಥವೇ ? ನಾನು ಎಲ್ಲ ಸಮುದಾಯ, ಧರ್ಮದವರನ್ನು ಗೌರವಿಸುತ್ತೇನೆ; ಈ ದೇಶ ಎಲ್ಲರಿಗೂ ಸೇರಿದ್ದಾಗಿದೆ’ ಎಂದು ಮಮತಾ ಹೇಳಿದರು.
ಈದ್ ಉಲ್ ಫಿತರ್ ಪ್ರಯುಕ್ತ ಇಲ್ಲಿನ ರೆಡ್ ರೋಡ್‌ನಲ್ಲಿ ನಡೆದ ವಿಶೇಷ ಪ್ರಾರ್ಥನಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, “ನನ್ನ ಪ್ರತಿಭಟನೆಯಿಂದಾಗಿ ಇಂದು ನಡೆಯಲಿದ್ದ ನೀತಿ ಆಯೋಗದ ಸಭೆಯನ್ನು ನಾಳೆಗೆ ನಿಗದಿಸಲಾಗಿದೆ’ ಎಂದು ಹೇಳಿದರು.
“ಜೂನ್ 16ರಂದು ಈದ್ ಆಚರಣೆ ನಡೆಯಲಿಕ್ಕಿದೆ ಎಂದು ಕೇಂದ್ರ ಸರಕಾರದ ಅಧಿಕಾರಿಗಳಿಗೆ ಗೊತ್ತಿಲ್ಲವೆ ? ಇವತ್ತು ಈದ್ ದಿನವೇ ನೀತಿ ಆಯೋಗದ ಸಭೆಯನ್ನು ಏಕೆ ಇಟ್ಟುಕೊಳ್ಳಲಾಗಿದೆ ? ನಾನು ಕೇಂದ್ರ ಸರಕಾರಕ್ಕೆ ಪತ್ರ ಬರೆದು ನೀತಿ ಆಯೋಗದ ಸಭೆಯನ್ನು ಈದ್ ದಿನದಂದು ಇಟ್ಟುಕೊಳ್ಳಬಾರದು ಎಂದು ಆಗ್ರಹಿಸಿದ್ದೆ’ ಎಂದು ಮಮತಾ ಹೇಳಿದರು.
ಈಗಿನ್ನು ಜೂನ್ 17ರಂದು ನಡೆಯುವ ನೀತಿ ಆಯೋಗದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಹಿಸುತ್ತಾರೆ.