ಉಡುಪಿ: ವಿದೇಶಿ ಸಂಸ್ಕೃತಿಯಲ್ಲಿ ಕೇವಲ ಭೌತಿಕ ಸುಖಕ್ಕೆ ಪ್ರಾಧಾನ್ಯ ನೀಡಲಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿ ಅದಕ್ಕೆ ಭಿನ್ನವಾಗಿದ್ದು, ಭೌತಿಕತೆಯೊಂದಿಗೆ ಆಧ್ಯಾತ್ಮಿಕತೆಯೂ ಒಳಗೊಂಡಿದೆ. ದೇಹದಲ್ಲಿ ಆತ್ಮ, ಪರಮಾತ್ಮನೂ ಇದ್ದಾನೆ. ಈ ನೆಲೆಯಲ್ಲಿ ಆಧ್ಯಾತ್ಮಿಕ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಶ್ರೀಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ನುಡಿದರು.
ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ಕ್ಷೇತ್ರದಲ್ಲಿ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಪಾದರು ಆಶೀರ್ವಚನ ನೀಡಿದರು.
ಹಿಂದೆ ಋಷಿ ಮುನಿಗಳು ತಮ್ಮ ಅಂತಃಚಕ್ಷುವಿನಿಂದ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುತ್ತಿದ್ದರು. ಆದರೆ ಅಂತಃಚಕ್ಷುವಿನಿಂದ ದೇವರನ್ನು ಕಾಣಲಾಗದ ಸಾಮಾನ್ಯ ಮನುಜರಿಗಾಗಿ ದೇಗುಲ, ದೈವಸ್ಥಾನಗಳನ್ನು ನಿರ್ಮಿಸಲಾಗಿದೆ. ಋಷಿ ಮುನಿಗಳು ಹೇಳಿದ ಪ್ರಕಾರ ದೇಗುಲಗಳ ಸಂದರ್ಶನ, ಶ್ರದ್ಧಾ ಭಕ್ತಿಯ ಉಪಾಸನೆಯಿಂದ ದೇವರು ಒಲಿಯುತ್ತಾನೆ. ಈ ಕ್ಷೇತ್ರದಲ್ಲಿ ದಿನನಿತ್ಯ ನಡೆಯುವ ಹೋಮಹವನಾದಿಗಳು, ಅನ್ನಸಂತರ್ಪಣೆ, ಗುರೂಜಿ ಸಾಂತ್ವನ ನುಡಿಯಿಂದ ದೇವಿಯ ಚೈತನ್ಯ ಶಕ್ತಿ ವೃದ್ಧಿಯಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಭಕ್ತರ ಸಂಕಷ್ಟ ನಿವಾರಿಸಿ, ಸಂಕಲ್ಪ ಈಡೇರಿಸುವ ಮೂಲಕ ಕ್ಷೇತ್ರವು ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.
ಹರಿಣಿ ದಾಮೋದರ್ ಶುಭಾಶಂಸನೆಗೈದರು. ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಯು. ವಿಶ್ವನಾಥ ಶೆಣೈ ಉಪಸ್ಥಿತರಿದ್ದರು. ರಮಾನಂದ ಗುರೂಜಿಯವರನ್ನು ಶ್ರೀಪಾದರು ಗೌರವಿಸಿದರು. ಕೊಡಂಕೂರು ದೇವರಾಜಮೂರ್ತಿ ಸ್ವಾಗತಿಸಿ, ನಿರೂಪಿಸಿದರು. ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ವಂದಿಸಿದರು.