ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಆ.28(ಬುಧವಾರ)ರಂದು ಏಕಕಾಲ ಶ್ರೀಚಕ್ರ ಮಂಡಲ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ವಿಕ್ಯಾತ್ ಭಟ್ ಅವರ ನೇತೃತ್ವದಲ್ಲಿ ಚೆನ್ನೈನ ವಾಸುದೇವನ್ ಮತ್ತು ಮನೆಯವರ ಸೇವಾ ರೂಪದಲ್ಲಿ ನಡೆಯಲಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದ್ದು ಬೆಳಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆ, ಅರಣಿಮಥನ, ಆದ್ಯ ಗಣಪತಿಯಾಗ, ಶ್ರೀ ಚಕ್ರ ಪೂಜಾ ಮಂಟಪದಲ್ಲಿ ಬಿಂದು ಪ್ರಕ್ರಿಯೆ ನಂತರ ಶ್ರೀ ಚಕ್ರ ಮಂಡಲ ರಚನೆ ಆರಂಭಗೊಳ್ಳಲಿದೆ.
ಸಂಜೆ 5:30 ರಿಂದ ಶ್ರೀ ಚಕ್ರ ಮಂಡಲ ಪೂಜೆ ಆರಂಭಗೊಳ್ಳಲಿದ್ದು ಶ್ರೀ ಚಕ್ರ ಪೀಠ ಸುರಪೂಜಿತೆಯಾದ ರಾಜರಾಜೇಶ್ವರಿಯನ್ನು ವಿಧ ವಿಧದ ಕುಸುಮಗಳಿಂದ ಅರ್ಜಿಸಿ, ವಿಶೇಷ ನಾಮಾವಳಿಗಳಿಂದ ಪೂಜಿಸಿ, ಬಗೆ ಬಗೆಯ ನೈವೇದ್ಯವನ್ನಿತ್ತು, ಅಷ್ಟಾವಧಾನದಿಂದ ಸಂಪ್ರೀತಗೊಳಿಸಿ ವಿಶೇಷ ಅನುಗ್ರಹವನ್ನು ಯಾಚಿಸುವ ಈ ಪೂಜೆ ಬಹು ವಿಶಿಷ್ಟವೂ ಅಪರೂಪವು ಆಗಿದೆ. ಬ್ರಾಹ್ಮಣ ಸುವಾಸಿನಿ ಆರಾಧನೆ, ಕನ್ನಿಕರಾಧನೆ, ದಂಪತಿ ಪೂಜೆ ಮತ್ತು ಆಚಾರ್ಯ ಪೂಜೆ ನೆರವೇರಲಿವೆ.
ಮೇರುಶ್ರೀಚಕ್ರವನ್ನು ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಶ್ರೀ ಚಕ್ರ ಮಂಡಲ ಪೂಜೆಗೆ ವಿಶೇಷವಾದ ಮಂಟಪ ರಚಿಸಲಾಗಿದ್ದು ಭಕ್ತರುಗಳಿಗೆ ಈ ಪೂಜೆಯನ್ನು ವೀಕ್ಷಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಹಾಗೂ ಕ್ಷೇತ್ರದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.
ದೃಢ ಕಲಶ ಮಹೋತ್ಸವ
ಶ್ರೀ ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿ ನೂತನ ಆರೂಢದಲ್ಲಿ ಪ್ರತಿಷ್ಠಾಪನೆಯಾಗಿರುವ ಶ್ರೀ ಪ್ರಸನ್ನ ಕ್ಷಿಯಾ ಸನ್ನಿಧಾನದ ದೃಢ ಕಲಶ ಮಹೋತ್ಸವವೂ ಕೂಡ ಬುಧವಾರವೇ ನೆರವೇರಲಿದ್ದು ಆ ಪ್ರಯುಕ್ತ ಪ್ರಸನ್ನಕ್ಷಿಯ ಸನ್ನಿಧಾನದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶಾ ಭಿಷೇಕ , ಶ್ರೀ ದುರ್ಗಾ ದುರ್ಗಾ ಹೋಮ, ಪ್ರಸನ್ನ ಪೂಜೆಗಳು ಗಣೇಶ್ ಸರಳಾಯ ಇವರ ನೇತೃತ್ವದಲ್ಲಿ ನೆರವೇರಲಿವೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.