Advertisement

ಹುಲುಕುಡಿ ವೀರಭದ್ರಸ್ವಾಮಿ

03:55 AM Jan 28, 2017 | |

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹುಲುಕುಡಿ ಕ್ಷೇತ್ರ ಪೌರಾಣಿಕವಾಗಿ ಹಾಗೂ ಐತಿಹಾಸಿಕವಾಗಿ ಮಹತ್ವ ಪಡೆದಿದೆ. ವೀರಭದ್ರಸ್ವಾಮಿ ದೇವಾಲಯದೊಂದಿಗೆ ಬೆಟ್ಟದ ಸುತ್ತಲ 11 ದೇವಾಲಯಗಳು, ಬಯಲು ಸೀಮೆಯಲ್ಲಿನ ಕಾಡು, ಬೆಟ್ಟಗುಡ್ಡಗಳ ವಾತಾವರಣದಿಂದಾಗಿ ಗಮನ ಸೆಳೆಯುತ್ತಿದೆ.

Advertisement

 ಇದು ತಾಲೂಕು ಕೇಂದ್ರದಿಂದ 13 ಕಿ.ಮೀ ದೂರದಲ್ಲಿನ ಹುಲುಕುಡಿ ಕ್ಷೇತ್ರದಲ್ಲಿ ಪುರಾಣದ ಕಾಲದಲ್ಲಿ ಅಗಸ್ತ್ಯ ಮುನಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಇವರ ಶಿಷ್ಯರು ಒಂದು ಹುಲ್ಲುಕಡ್ಡಿ ತಿಂದು ತಮ್ಮ ದೇಹವನ್ನು ನಿಗ್ರಹಿಸುತ್ತಿದ್ದರು. ಇಲ್ಲಿನ ಔಷಧಿ ಗುಣವುಳ್ಳ ಹುಲ್ಲು ದನಕರುಗಳ ಆರೋಗ್ಯಕ್ಕೆ ಒಳ್ಳೆಯದು ಈ ಕಾರಣಗಳಿಂದ ಈ ಕ್ಷೇತ್ರಕ್ಕೆ ಹುಲುಕುಡಿ ಎಂಬ ಹೆಸರು ಬಂದಿದೆ ಎಂದು ಇಲ್ಲಿನ ಸ್ಥಳೀಯರು ವಿವರಿಸುತ್ತಾರೆ. ಹುಲುಕುಡಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶವನ್ನು ವಿಜಯನಗರ ಅರಸರ ಕಾಲಾವಧಿಯಲ್ಲಿ ಹುಲುಕುಡಿ ನಾಡು ಎಂದು ಕರೆಯ ಲಾಗುತಿತ್ತು. ಈ ಪ್ರಾಂತ್ಯದಿಂದ ರಾಜ್ಯಭಾರ ಮಾಡುತ್ತಿದ್ಧ ಗೌಡ ನಾಯಕ ದೊರೆಗಳನ್ನು ಹುಲುಕುಡಿ ಪ್ರಭುಗಳು ಎಂದು ಕರೆಯಲಾಗಿತ್ತು. ಹೊಯ್ಸಳರ ಕಾಲಕ್ಕೆ ಸೇರಿರುವ ಕ್ರಿ.ಶ.1115 ತಮಿಳು ದಾನ ಶಾಸನವೊಂದು ಹುಲುಕುಡಿ ಬೆಟ್ಟದ ಪೂರ್ವತಪ್ಪಲಿನಲ್ಲೇ ಇರುವ ಮಾಡೇಶ್ವರದ ಗಂಗರ ಕಾಲಕ್ಕೆ ಸೇರಿದ ಮುಕ್ಕಣ್ಣೇಶ್ವರ ದೇವಾಲಯದ ಬಳಿ ಲಭ್ಯವಾಗಿದ್ದು, ಇದರಲ್ಲಿ ಹುಲುಕುಡಿಬೆಟ್ಟವನ್ನು ಪುರ್‌ಕುಡಿ ಎಂದೂ ಇಲ್ಲಿನ ಆರಾಧ್ಯದೈವವನ್ನು ಮುಡೀಶ್ವರಮ್‌ ಉಡೆಯಾರ್‌(ಜಟಾಧರದೇವ) ಎಂದು ಕರೆಯುತ್ತಿದ್ದರು. 

ಬೆಟ್ಟದ ಮೇಲೆ ಶ್ರೀ ವೀರಭದ್ರಸ್ವಾಮಿಯ ದೇವಾಲಯವಿದೆ. ಪುರಾಣಗಳ ಪ್ರಕಾರ ಈ ಕ್ಷೇತ್ರದಲ್ಲಿ ವೀರಭದ್ರಸ್ವಾಮಿಯು ತನ್ನ ರುದ್ರರೂಪವನ್ನು ಪ್ರದರ್ಶಿಸಿದ್ದಾನೆ. ದೇವರಾಯನ ದುರ್ಗದಲ್ಲಿನ ಯೋಗ ನರಸಿಂಹ ಈ ರುದ್ರ ಸ್ವರೂಪವನ್ನು ನೋಡಿ ಈ ಕ್ಷೇತ್ರದಲ್ಲಿ ವೀರಭದ್ರಸ್ವಾಮಿಯು ನೆಲೆಸುವಂತೆ ಹೇಳಿ ತಾನು ದೇವರಾಯನ ದುರ್ಗಕ್ಕೆ ತೆರಳುತ್ತಾನೆ. ರುದ್ರ ರೂಪದಲ್ಲಿದ್ದ ವೀರಭದ್ರಸ್ವಾಮಿಯು ಬಂಡೆಗಳನ್ನೇ ಚೆಂಡುಗಳನ್ನಾಗಿಸಿ, ಭೀಕರ ರೂಪ ತಾಳಿದ್ದನಂತೆ. ಈತನು ಬಿಸುಡಿದ್ದ ಬಂಡೆಗಳು, ಬೃಹತ್‌ ಬೆಟ್ಟದ ಮೇಲೆ ಕೇವಲ ಅರ್ಧ ಅಡಿ ಎತ್ತರದಲ್ಲಿ ನಿಂತಿದ್ದರೂ ಸಹ ಉರುಳದೇ ಹಾಗೆಯೇ ಶತಮಾನಗಳಿಂದ ನಿಂತಿವೆ. ಈತನ ವಾಹನ ಸರ್ಪವನ್ನೂ ಸಹ ಬೆಟ್ಟದ ಮೇಲೆ ಕಾಣಬಹುದು. ಬೆಟ್ಟದ ಮೇಲೆ ಅಗಸ್ತ್ಯ ಮುನಿಗಳು ತಪಸ್ಸು ಮಾಡಿದ್ದ ಸ್ಥಳ, ಶ್ರೀ ವೀರಭದ್ರಸ್ವಾಮಿ, ಭದ್ರಕಾಳಮ್ಮ, ಬಸವಣ್ಣ  ದೇವಾಲಯಗಳಿವೆ. ಸುಂದರವಾದ ಕೊಳಗಳಿವೆ. ಬೆಟ್ಟದ ಮೇಲಿನ ಗುಹೆಯಿಂದ ಸುರಂಗ ಮಾರ್ಗವೂ ಇದೆ.

ಕ್ಷೇತ್ರದ ವಿಶೇಷತೆ
ಹುಲುಕುಡಿ ಬೆಟ್ಟದ ಮೇಲೆ ವಿಸ್ತಾರವಾದ ಪ್ರಸ್ಥಭೂಮಿಯದ್ದು ಅದು ಪೂರ್ವಕ್ಕೆ ಇಳಿಜಾರಾಗಿದೆ. ಬೆಟ್ಟದ ಬುಡದಲ್ಲಿ ಬಿಸಿ ವಾತಾವರಣವಿದ್ದರೆ, ಮೇಲಕ್ಕೆ ಹೋದಂತೆಲ್ಲಾ ಹವಾಗುಣ ತಂಪಾಗುವುದನ್ನು ಇಂದಿಗೂ ಅನುಭವಿಸಬಹುದು. ತೃಣಾನದಿಯ ಮೂಲವು ಈ ಬೆಟ್ಟದ ಪೂರ್ವತುದಿಯಲ್ಲಿದೆ. ಇದು ಇಲ್ಲಿನ ಬೆಟ್ಟದ ಹೆಬ್ಬಂಡೆಗಳ ನಡುವೆ ಹುಟ್ಟಿ, ಬಹುತೇಕ ಅಂತರ್ಗಾಮಿಯಾಗಿಯೇ ಪೂರ್ವಾಭಿಮುಖವಾಗಿ  ಹರಿಯುತ್ತದೆ. ಮಳೆಗಾಲದಲ್ಲಿ ಬಂಡೆಗಳ ನಡುವೆ ನೀರು ಧಾರಾಕಾರವಾಗಿ ಹರಿಯುವುದನ್ನು ಈಗಲೂ ನೋಡಬಹುದಾಗಿದೆ. ಬೆಟ್ಟದ ಮೇಲೆ 5 ರಿಂದ 6 ಹೆಕ್ಟೇರ್‌ನಷ್ಟು ವಿಸ್ತಾರವಾದ ಭೂಮಿ ಇದೆ. ಇದರ ಸುತ್ತಲೂ ಕೋಟೆ ಇದೆ. ಈ ಕೋಟೆಯು ನಿಜವಾದ ಅರ್ಥದಲ್ಲಿ ಗಿರಿದುರ್ಗವೆಂದು ಕರೆಯಬಹುದಾದ ಸುಭದ್ರ ಕೋಟೆಯಾಗಿದೆ. ಪೂರ್ವ ಮತ್ತು ಉತ್ತರಕ್ಕೆ ಎರಡು ಮಹಾದ್ವಾರಗಳುಳ್ಳ ಈ ಕೋಟೆಯು ಸಾಮಾನ್ಯ ಶೈಲಿಯಲ್ಲಿದೆ. ಅಂದರೆ ಕೋಟೆ ಗೋಡೆಯು ಐದಾರು ಅಡಿಗಳಷ್ಟು ದಪ್ಪನಾಗಿದ್ದು, ಎರಡು ಹಂತಗಳಲ್ಲಿ ನಿರ್ಮಾಣಗೊಂಡಿದೆ. ಕೋಟೆಯ ಪೂರ್ವ ದಿಕ್ಕಿಗೆ ಎರಡೂ ಮೂಲೆಗಳಲ್ಲಿ ದೊಡ್ಡದಾದ ಹಾಗೂ ಎತ್ತರವಾದ ಬುರುಜುಗಳಿದ್ದು ಕಾವಲು ಗೋಪುರಗಳಂತೆ ಬಳಸಲು ಯೋಗ್ಯವಾಗಿವೆ. ಈ ಬುರುಜುಗಳ ಮೇಲೆ ನಿಂತು ನೋಡಿದರೆ ಬಹು ದೂರದವರೆಗಿನ ಪ್ರದೇಶವೆಲ್ಲಾ ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೆ ಈ ಜಾಗದಲ್ಲಿ ತಂಪಾದ ಗಾಳಿಗೆ ಮೈಯೊಡ್ಡಿ ಆಹ್ಲಾದತೆಯನ್ನು ಅನುಭಸಬಹುದಾಗಿದೆ.

ವೀರಭದ್ರಸ್ವಾಮಿ ದೇವಾಲಯ
ಹುಲುಕುಡಿ ಬೆಟ್ಟದ ಮುಖ್ಯ ದೈವ ವೀರಭದ್ರ. ಬೆಟ್ಟದ ಒಂದು ತುದಿಯಲ್ಲಿ ಗುಹಾಲಯದಂತಿರುವ ವೀರಭದ್ರನ ಗುಡಿ ಇದೆ. ಉತ್ತರಕ್ಕೆ ಮುಖಮಾಡಿ ನಿಂತಿರುವ ವೀರಭದ್ರಮೂರ್ತಿ ಬಹಳ ಸೊಗಸಾಗಿದ್ದು, ಚೋಳರ ಶೈಲಿಯಲ್ಲಿದೆ. ಇದು ಬಹುಶಃ 12ನೇ ಶತಮಾನದ ರಚನೆಯಾಗಿರಬಹುದು. ಇದನ್ನು ಒಂದು ಅಡಿ ಎತ್ತರದ ಪಾಣಿ ಪೀಠದ ಮೇಲೆ ನಿಲ್ಲಿಸಲಾಗಿದೆ. ಸುಮಾರು ನಾಲ್ಕು ಅಡಿ ಎತ್ತರವಾಗಿರುವ ಈ ಮೂರ್ತಿಯು ಸೌಮ್ಯ ಸ್ವರೂಪಿ ಹಾಗೂ ಮಂದಸ್ಮಿತ, ಗರ್ಭಗುಡಿ ಮತ್ತು ನವರಂಗವು ದೊಡ್ಡ ಬಂಡೆಯೊಂದರ ಕೆಳಗಿದೆ. 

Advertisement

ಪ್ರವೇಶದ್ವಾರದಲ್ಲಿರುವ ಶಿವಪಾರ್ವತಿಯರು ಅಕ್ಕಪಕ್ಕಗಳಲ್ಲಿ ನಿಂತಿದ್ದು, ಶಿವನನ್ನು ಸ್ವಲ್ಪ ದೊಡ್ಡದಾಗಿಯೂ, ಪಾರ್ವತಿ ಯನ್ನು ಸ್ವಲ್ಪ ಚಿಕ್ಕದಾಗಿಯೂ ರಚಿಸಲಾಗಿದೆ. ಶಿವನು ಚರ್ತುಭುìಜ ನಾಗಿದ್ಧು, ಮೇಲಿನ ಎಡಗೈಯಲ್ಲಿ  ಢಮರುಗ, ಬಲಗೈಲಿ ಮೃಗ ಸಂಕೇತವನ್ನು ಹಿಡಿದ್ದಾನೆ. ಕೆಳಗಿನ ಎಡಗೈ ವರದ ಮುದ್ರೆಯಲ್ಲಿದೆ. 

ಬೆಟ್ಟದ ಮೇಲೆ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ವೀರಭದ್ರಸ್ವಾಮಿಯ ಮೂರ್ತಿಗೆ  ಸೋಮವಾರ, ಶುಕ್ರವಾರ ಹಾಗೂ ಭಾನುವಾರಗಳಂದು ವಿಶೇಷ ಪೂಜೆ ನಡೆಯಲಿದೆ. ಪ್ರತಿ ವರ್ಷ ರಥಸಪ್ತಮಿ ದಿನದಂದು ವೀರಭದ್ರಸ್ವಾಮಿ ರಥೋತ್ಸವ ನಡೆಯಲಿದ್ದು, ಈ ಬಾರಿಯ ರಥೋತ್ಸವ ಹಾಗೂ ಜಾತ್ರೆ ಫೆಬ್ರವರಿ 3ರಂದು ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಸುಗಳ ಜಾತ್ರೆಯು ಸಹ ನಡೆಯಲಿದೆ. 

ಡಿ. ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next