ದೊಡ್ಡಬಳ್ಳಾಪುರ: ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿಗೆ ಫೆ.29ರಂದು ಕೊನೆ ದಿನ ಎಂದು ತಿಳಿದು ನೂರಾರು ರೈತರು ಜಮಾಯಿಸಿದ್ದರು. ಈ ನಡುವೆ ಕ್ಷೇತ್ರದ ಶಾಸಕರು ಸೇರಿದಂತೆ ಹಲವು ರೈತ ಸಂಘಟನೆಗಳ ಮುಖಂಡರು ಒತ್ತಾಯದ ಮೇರೆಗೆ ರಾಗಿ ಖರೀದಿ ದಿನಾಂಕವನ್ನು ಮಾರ್ಚ್ 15ರವರೆಗೂ ವಿಸ್ತರಿಸಿ, ಸರ್ಕಾರ ಆದೇಶ ಮಾಡಿರುವುದು ರೈತರಲ್ಲಿ ಸಮಾಧಾನ ಮೂಡಿಸಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ರಾಗಿ ಖರೀದಿ ಕೇಂದ್ರ ಆರಂಭಿಸಲಾಗಿದೆ.
ಖರೀದಿ ಆರಂಭವಾದ ಮೂರೇ ದಿನಗಳಲ್ಲಿ 5,914 ಕ್ವಿಂಟಲ್ ರಾಗಿ ದಾಸ್ತಾನಾಗಿದೆ. ಪ್ರತಿ ಎಕರೆಗೆ 10 ಕ್ವಿಂಟಲ್ ಹಾಗೂ ಗರಿಷ್ಠ ಒಬ್ಬ ರೈತರಿಂದ 50 ಕ್ವಿಂಟಲ್ ರಾಗಿ ಖರೀದಿಗೆ ಸರ್ಕಾರ ನಿಯಮ ರೂಪಿಸಿದೆ. ತಾಲೂಕಿನಲ್ಲಿ ಇದುವರೆಗೆ 4,700 ರೈತರು ಖರೀದಿ ಕೇಂದ್ರದಲ್ಲಿ ರಾಗಿ ಸರಬರಾಜಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿನ ರಾಜ್ಯ ಆಹಾರ ನಿಗಮದ ಗೋದಾಮಿನಲ್ಲಿ ರೈತರಿಂದ ಖರೀದಿಸಿದ ರಾಗಿಯನ್ನು ದಾಸ್ತಾನು ಮಾಡಲಾಗುತ್ತಿದೆ. ಈ ಹಿಂದೆ ಹೆಸರು ನೋಂದಣಿ ಮಾಡಿಕೊಂಡಿದ್ದ ರೈತರಿಂದ ಪ್ರತಿ ದಿನ ಸುಮಾರು 100 ರೈತರಿಂದ ರಾಗಿ ಖರೀದಿಸಲು ದಿನಾಂಕ ನಿಗದಿಪಡಿಸಿ ರೈತರಿಗೆ ಚೀಟಿ ನೀಡಲಾಗಿದೆ.
ಆದರೆ ಪ್ರತಿ ದಿನ ನೂರಕ್ಕೂ ಹೆಚ್ಚು ಜನ ರೈತರು ಟ್ರ್ಯಾಕ್ಟರ್‌ಗಳಲ್ಲಿ ರಾಗಿ ತುಂಬಿಕೊಂಡು ಬರುತ್ತಿದ್ದಾರೆ. ರೈತರಿಗೆ ನಿಗದಿತ ದಿನಾಂಕ ನೀಡಿದ್ದೇವೆ. ಆದರೆ ಅವಧಿಗೂ ಮುನ್ನವೇ ಆಗಮಿಸುತ್ತಿರುವುದು ರಾಗಿ ದಾಸ್ತಾನಿಗೆ ದೊಡ್ಡ ಸಮಸ್ಯೆಯಾಗುತ್ತಿದೆ’ ಎಂದು ಗೋದಾಮಿನ ಅಧಿಕಾರಿಗಳು ಹೇಳುತ್ತಾರೆ.
ತಾಲೂಕಿನಲ್ಲಿ ರಾಗಿ ಬೆಳೆ ಉತ್ತಮವಾಗಿ ಬಂದಿರುವುದರಿಂದ ಸರ್ಕಾರ ದಿನಕ್ಕೊಂದು ಕಾನೂನು ನೆಪ ಹೇಳುತ್ತ ರಾಗಿ ಖರೀದಿಯನ್ನು 15 ರಿಂದ 10 ಕ್ವಿಂಟಲ್ ಗೆ ಇಳಿಸಿದೆ. ಮುಂದೆ ನಿಯಮ ಬದಲಾಗುವುದಕ್ಕೆ ಮುಂಚೆ ರಾಗಿ ಹಾಕಿ ಬಿಡೋಣ ಎಂದು ಬಂದಿದ್ದೇವೆ. ಸರ್ಕಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಕೇಂದ್ರ ತೆರೆಯಬೇಕಿದೆ ಎನ್ನುತ್ತಾರೆ ರೈತರು.
ಪ್ರತಿ ರೈತರಿಂದ ಎಕರೆಗೆ 15 ಕ್ವಿಂಟಾಲ್ ರಾಗಿ ಖರೀದಿಸುವಂತೆ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ. ಈ ನಿಯಮ ಬದಲಾಗುವ ನಿರೀಕ್ಷೆಯಿದೆ. ರೈತರು ಆತಂಕಕ್ಕೊಳಗಾಗದೇ ತಮಗೆ ನಿಗದಿಪಡಿಸಿರುವ ದಿನದಂದೇ ಖರೀದಿ ಕೇಂದ್ರಕ್ಕೆ ರಾಗಿ ತರಬೇಕು.
●ಟಿ.ವೆಂಕಟರಮಣಯ್ಯ, ಶಾಸಕ