Advertisement

ಗ್ರಾಹಕರ ಜೇಬಿಗೆ ಹೊರೆಯಾದ ಅವರೆ

04:35 PM Jan 09, 2020 | Naveen |

ದೊಡ್ಡಬಳ್ಳಾಪುರ: ಪ್ರಸಕ್ತ ಋತುವಿನಲ್ಲಿ ಅವರೆಕಾಯಿ ಇಳುವರಿ ಕಡಿಯಾಗಿದ್ದು, ಮಾರುಕಟ್ಟೆಗೆ ಅವಶ್ಯವಿರುವಷ್ಟು ಅವರೆಕಾಯಿ ಆವಕವಾಗುತ್ತಿಲ್ಲ. ಜತೆಗೆ ಗ್ರಾಹಕರ ಬೇಡಿಕೆಯೂ ಹೆಚ್ಚಿದ್ದು, ಸಹಜವಾಗಿಯೇ ಬೆಲೆ ಏರಿಕೆ ಕಂಡಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗಿದೆ.

Advertisement

ಸೊಗಡಿನ ಒಂದು ಕೆ.ಜಿ. ಅವರೆಕಾಯಿ ಬೆಲೆ 40 ರಿಂದ 50 ರೂ.ಗಳವರೆಗೆ ಇದ್ದು, ದರ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಇನ್ನು ಹಿದುಕಿದ ಅವರೆಕಾಯಿ ಬೇಳೆಯಂತೂ ಲೀಟರ್‌ಗೆ 150 ರೂ.ಗಳ ವರೆಗೆ ಇದೆ. ಜವಾರಿ ಹಾಗೂ ಅದರ ಋತುವಿನಲ್ಲೇ ಸಿಗುವ ಅವರೆ ಕಾಯಿಗೆ ಇರುವಷ್ಟು ರುಚಿ, ಅಭಿವೃದ್ಧಿ ಪಡಿಸಿದ ತಳಿಗಳಲ್ಲಿ ಸಿಗುವುದಿಲ್ಲ. ಅವರೆಬೇಳೆ ಸಾರು ತಿನ್ನದೇ ಅಡುಗೆ ರುಚಿಸುತ್ತಿಲ್ಲ ಎನ್ನುತ್ತಾರೆ ಪ್ರಿಯರ ಮಾತು.

ಅವಶ್ಯವಿದ್ದಷ್ಟು ಆವಕವಾಗುತ್ತಿಲ್ಲ ಅವರೆ: ನವೆಂಬರ್‌ ನಲ್ಲಿ ಆರಂಭವಾಗುವ ಅವರೆಕಾಯಿ ಋತು ಜನವರಿಗೆ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿ ರುತ್ತದೆ. ಆದರೆ ಈ ವರ್ಷ ಪ್ರತಿಕೂಲ ಹವಾಮಾನ, ಮಂಜು, ಮಳೆಯ ಚಲ್ಲಾಟ, ನೀರಿನ ಕೊರತೆ, ಕಾಯಿ ಕೊರಕ ರೋಗ ಸೇರಿದಂತೆ ಹಲವು ಕಾರಣಗಳಿಂದಾಗಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಅವರೇ ಇಳುವರಿ ಬಂದಿಲ್ಲ. ಹೀಗಾಗಿ ಮಾರುಕಟ್ಟೆಗೂ ಹೆಚ್ಚಿನ ಪ್ರಮಾಣದಲ್ಲಿ ಅವರೇ ಬರುತ್ತಿಲ್ಲ. ಇದು ಬಂದಷ್ಟೇ ವೇಗವಾಗಿ ಖರ್ಚಾಗುತ್ತಿದ್ದು, ಗ್ರಾಹಕರ ಬೇಡಿಕೆ ತಣಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿರಾಯಾಸವಾಗಿಯೇ ಅವರೇ ಬೆಲೆ ಗಗನಕ್ಕೇರಿದೆ.

ರಾಗಿ ಬೆಳೆಗೆ ಮಿಶ್ರವಾಗಿ ಬೆಳೆಯದ ಅವರೆ: ರೈತರು, ಅವರೆ ಬೆಳೆಯನ್ನು ರಾಗಿ ಬೆಳೆಗೆ ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದರು. ಆದರೆ ರಾಗಿ ಬೆಳೆ ಫ‌ಸಲು ಬಂದ ಮೇಲೆ ಅಧುನಿಕ ಯಂತ್ರಗಳ ಬಳಕೆಯಿಂದ ಕೊಯ್ಲು ಮಾಡುತ್ತಿರುವುದರಿಂದ ಅವರೆಯನ್ನು ಬೆಳೆಯುತ್ತಿಲ್ಲ. ಈ ಅವರೆಯೇ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿತ್ತು. ಆದರೆ ಈ ಬಾರಿ ಅದೇಲ್ಲ ಬಂದಿಲ್ಲ. ಹೀಗಾಗಿಯೇ ರೈತರು ತಮಗೆ ಅವಶ್ಯವಿದ್ದಷ್ಟು ಮಾತ್ರ ಅವರೆ ಬೆಳೆದಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಅವರೇ ಮಾರುಕಟ್ಟೆಗೆ ಬರುತ್ತಿಲ್ಲದಿರುವುದು ಕಾರಣವಾಗಿದೆ.

ಅವರೆಕಾಯಿ ಸೊಗಡು: ಸ್ಥಳೀಯ ಅವರೆಗೆ ಹೆಚ್ಚು ಸೊಗಡಿದ್ದು, ವಿಶಿಷ್ಟತೆ ಹೊಂದಿದೆ. ಬೆಂಗಳೂರಿನ ಕೆ.ಆರ್‌ ಮಾರುಕಟ್ಟೆಗೆ ತಾಲೂಕಿನಿಂದ ಟನ್‌ಗಟ್ಟಲೇ ಆವರೆ ಸರಬರಾಜಾಗುತ್ತದೆ. ದೊಡ್ಡಬಳ್ಳಾಪುರಕ್ಕೆ ಗೌರಿಬಿದನೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಕಡೆಯಿಂದ ಮಣಿ, ಡಬ್ಬೆ ಹಾಗೂ ಬುಡ್ಡ ತಳಿಗಳು ಆವಕವಾಗುತ್ತವೆ. ಪ್ರತಿದಿನ ಸುಮಾರು 4 ರಿಂದ 5 ಟನ್‌ ಅವರೆಕಾಯಿ ವಹಿವಾಟು ನಡೆಯುತ್ತಿದೆ ಎನ್ನುತ್ತಾರೆ ವ್ಯಾಪಾರಿಯೊಬ್ಬರು.

Advertisement

ಅವರೆ ಕೃಷಿ: ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಅವರೆ ಬೆಳೆ ಜನಪ್ರಿಯ. ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಪ್ರಮುಖ ಬೆಳೆ. ಅವರೆಯನ್ನು ಸಾಮಾನ್ಯವಾಗಿ ಅಂತರ ಅಥವಾ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಡಿಮೆ ಅವಧಿಯ ಹಾಗೂ ವರ್ಷವಿಡಿ ಬೆಳೆಯಬಹುದಾದ ತಳಿಗಳನ್ನು ಬೆಂಗಳೂರು ಕೃಷಿ ವಿವಿಯಲ್ಲಿ ಅಭಿವೃದ್ಧಿಗೊಳಿಸಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಅವರೆಯನ್ನು ಜಾನುವಾರುಗಳಿಗೆ ಮೇವಾಗಿಯೂ ಬಳಸಲಾಗುತ್ತದೆ. ಹೀಗಾಗಿ ರೈತರು ಹೆಚ್ಚಾಗಿಯೇ ಬೆಳೆಯುತ್ತಾರೆ.

ಸ್ವಯಂ ಪರಾಗಸ್ಪರ್ಷ
ವಿಜ್ಞಾನದಲ್ಲಿ ಅವರೆಗೆ ವಿಶೇಷ ಸ್ಥಾನವಿದೆ. ಇದು ದ್ವಿದಳ ಧಾನ್ಯದ ಬೆಳೆಯಾಗಿರುವ ಅವರೇ, ಸ್ವಕೀಯ ಪರಾಗ ಸ್ಪರ್ಷದಿಂದ ಬೆಳೆಯುತ್ತದೆ. ಹೀಗಾಗಿ ಬೆಳೆಗೆ ವಿಶೇಷ ಆರೈಕೆ ಮಾಡುವ ಅಗತ್ಯವಿಲ್ಲ. ಜತೆಗೆ ರೋಗ ಬಾಧೆ ಬೇರೆ ಬೆಳೆಗಳಿಗೆ ಹೋಲಿಸಿದರೆ ಕಡಿಮೆಯಾಗಿದ್ದು, ಉತ್ತಮ ಇಳುವರಿಯೇ ಸಿಗುತ್ತದೆ. ಇದರಿಂದ ರೈತರಿಗೆ ಶ್ರಮ ಕಡಿಮೆ ಹಾಗೂ ಉತ್ತಮ ಲಾಭ ದೊರೆಯುತ್ತದೆ. 70ರಿಂದ 75 ದಿನಗಳಲ್ಲಿ ಬೆಳೆ ಕೊಯ್ಲು ಮಾಡಬಹುದಾಗಿದೆ. ಪ್ರತಿ ಹೆಕ್ಟೇರಿಗೆ ನೀರಾವರಿಯಲ್ಲಿ 6 ರಿಂದ 8 ಕ್ವಿಂಟಲ್‌ನಷ್ಟು ಒಣ ಬೀಜದ ಇಳುವರಿ ಪಡೆಯಬಹುದಾಗಿದೆ.

ಸುತ್ತಲಿನ ಜಿಲ್ಲೆಗಳಿಂದಲೂ ಸರಬರಾಜಾಗುತ್ತಿಲ್ಲ
ಕೆಲವೆಡೆ ಬಿಟ್ಟರೆ ಬಹುತೇಕ ಕಡೆಗಳಲ್ಲಿ ಮಳೆ ಚನ್ನಾಗಿಯೇ ಸುರಿದಿದೆ. ಆದರೂ ಬೆಳೆ ರೋಗಗಳ ಕಾರಣದಿಂದ ಸುತ್ತಲಿನ ಜಿಲ್ಲೆಗಳಲ್ಲೂ ಉತ್ತಮ ಫ‌ಸಲು ಬಂದಿಲ್ಲ. ಹೀಗಾಗಿ ಸುತ್ತಿಲಿನ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದಲೂ ಬೆಂಗಳೂರಿಗೆ ಬರುವುದು ಕಡಿಮೆಯಾಗಿದೆ. ಮಂಜು ಮುಸುಕಿದ ವಾತಾವರಣ, ಅವರೆಕಾಯಿ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹುಳುಕು ಕಾಯಿ ಹೆಚ್ಚಾಗಿ ಬರುತ್ತದೆ. ನಮ್ಮ ಪ್ರದೇಶದ ಹೊಲಗಳಲ್ಲಿ ಅವರೆಕಾಯಿ ಇಳುವರಿ ಇನ್ನೂ ಕಡಿಮೆಯಾಗಿದೆ ಎಂದು ವಡ್ಡರಹಳ್ಳಿ ರೈತ ರಾಮಚಂದ್ರ ಹೇಳುತ್ತಾರೆ. ಆವಕ ಕಡಿಮೆಯಿದ್ದು, ವ್ಯಾಪಾರ ಇನ್ನೂ ಚುರುಕಾಗಿಲ್ಲ. ಕಾಯಿಯಲ್ಲಿ ಹುಳು ಹೆಚ್ಚು ಬಂದರೆ, ನಷ್ಟವಾಗುವ ಸಂಭವ ಇದೆ ಎಂದು ಅವರೆಕಾಯಿ ವ್ಯಾಪಾರಿಗಳು ಹೇಳುತ್ತಾರೆ.

ವರ್ಷವಿಡಿ ಬೆಳೆಯುವ ಅವರೆ ತಳಿ ಪರಿಚಯ
ಅವರೆ ಋತುವಿಗಾಗಿ ಕಾಯದೇ ವರ್ಷವಿಡಿ ಬೆಳೆಯುವ ಅವರೆ ತಳಿಗಳನ್ನು ಕೃಷಿ ವಿಜ್ಞಾನ ಕೇಂದ್ರದಿಂದ ಪರಿಚಯಿಸಲಾಗಿದೆ. ರೈತರು, ವರ್ಷದ ಎಲ್ಲಾ ಋತುಗಳಲ್ಲಿ ಹುಲುಸಾಗಿ ಬೆಳೆದು ಉತ್ತಮ ಗುಣಮಟ್ಟದ ಹಸಿರು ಕಾಯಿಗಳನ್ನು ಕೊಡಬಲ್ಲ ಎಚ್‌.ಎ.-3 ಮತ್ತು ಎಚ್‌.ಎ-4 ತಳಿ ಅವರೆ ಬೆಳೆದರೆ ಆರ್ಥಿಕವಾಗಿ ಲಾಭದಾಯಕ. ಅವರೆ ಬೆಳೆ ಎನಿಸಬೇಕಾದರೆ ರೈತರು ಅಧಿಕ ಇಳುವರಿ ಕೊಡುವಂತಹ ತಳಿ ಬಳಸಿಕೊಂಡು ಸಮಗ್ರ ಬೆಳೆ ಪದ್ಧತಿ ಅನುಸರಿಸಿ, ಮಾರುಕಟ್ಟೆ ನಿರ್ಮಿಸುವ ಕುರಿತು ಚಿಂತನೆ ಹರಿಸಬೇಕು. ಅಧಿಕ ಇಳುವರಿ ಮತ್ತು ಆದಾಯಕ್ಕಾಗಿ ವರ್ಷದ ಎಲ್ಲಾ ಋತುಗಳಲ್ಲಿ ಹುಲುಸಾಗಿ ಬೆಳೆಯುವ ಉತ್ತಮ ಗುಣಮಟ್ಟದ ತಳಿ ಬೆಳೆಯಬೇಕು ಎನ್ನುತ್ತಾರೆ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಬಿ. ಮಂಜುನಾಥ್‌. ಅವರೆ ಬೆಳೆಯನ್ನು ಎಲ್ಲಾರೀತಿಯ ಭೂಮಿಯಲ್ಲಿ ಬೆಳೆಯಬಹುದು.

ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next