ದೊಡ್ಡಬಳ್ಳಾಪುರ :ಹೋಳಿ ಹುಣ್ಣಿಮೆಯ ಅಂಗವಾಗಿ ನಗರದ ವಿವಿಧೆಡೆಗಳಲ್ಲಿ ಸೋಮವಾರ ರಾತ್ರಿ ಕಾಮ ದಹನ ಆಚರಿಸಲಾಯಿತು. ಕಾಮನ ಮೂರ್ತಿಯ ಚಿತ್ರಪಟವನ್ನು ಪೂಜಿಸಿ ಮೆರವಣಿಗೆ ನಡೆಸಿದ ಪೇಟೆಯ ನಾಗರಿಕರು, ನಂತರ ಸಂಗ್ರಹಿಸಿ ತಂದ ಸೌದೆ ಉರುವಲುಗಳನ್ನು ದಹಿಸಿ ಕಾಮನ ಹಬ್ಬ ಆಚರಿಸಿದರು.
ನಗರದ ಕಲ್ಲುಪೇಟೆ, ರಂಗಪ್ಪ ಸರ್ಕಲ್ ಬಳಿಯ ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆಯ ಬಳಿ, ವೀರಭದ್ರನಪಾಳ್ಯ,ಗಾಣಿಗರ ಪೇಟೆ ಸೇರಿದಂತೆ ವಿವಿಧೆಡೆ ಕಾಮದಹನ ಆಚರಿಸಲಾಯಿತು.
ಆಚರಣೆ ಹಿನ್ನೆಲೆ: ದಾಕ್ಷಾಯಿಣಿ ಅಗ್ನಿಕುಂಡಕ್ಕೆ ಬಿದ್ದ ಮೇಲೆ ಶಿವ ಯೋಗಮುದ್ರೆಯಲ್ಲಿದ್ದು, ಇಹ ಪರದ ಚಿಂತ ಬಿಟ್ಟು ಸದಾ ಧ್ಯಾನಾಸಕ್ತನಾಗಿರುತ್ತಾನೆ. ತಾರಕಾಸುರನನ್ನು ಸಂಹರಿಸಲು ಕುಮಾರ ಸ್ವಾಮಿಯ ಅವತಾರ ಸನ್ನಿಹಿತವಾಗಿದ್ದು, ಈ ವೇಳೆ ಪರಶಿವನನ್ನು ತಪಸ್ಸಿನಿಂದ ಎಚ್ಚರಿಸಲು ಅನಿವಾರ್ಯವಾಗಿರುತ್ತದೆ. ಆದರೆ, ಪರಶಿವನನ್ನು ಎಚ್ಚರಿಸುವ ಧೈರ್ಯ ಯಾರಿಗೂ ಇಲ್ಲದೇ ದೇವತೆಗಲು ಮನ್ಮಥನ ಮೊರೆ ಹೋಗುತ್ತಾರೆ. ಮನ್ಮಥ ಪುಷ್ಪ ಬಾಣದಿಂದ ಶಿವನ ತಪಸ್ಸನ್ನು ಭಂಗ ಮಾಡುತ್ತಾನೆ. ತಪಸ್ಸನ್ನು ಕೆಡಿಸಿದ ಮನ್ಮಥನನ್ನು ಶಿವ ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ದಹಿಸುತ್ತಾನೆ.
ಈ ಪುರಾಣ ಕಥೆಯೇ ಕಾಮದಹನಕ್ಕೆ ಪ್ರೇರಣೆಯಾಗಿದೆ. ಮನ್ಮಥನನ್ನು ಮನ್ನಿಸಿದ ಶಿವ ಶಾಂತಿ ಸ್ವರೂಪದಿಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸಲುವಾಗಿ ಕಾಮನ ಮೂರ್ತಿಯಾಗಿ ಅವತಾರಗೊಂಡ ಪುರಾಣದ ಈ ಕಥೆಯು ಜನಪದರಲ್ಲಿ ಕಾಮಣ್ಣ ಹಬ್ಬವಾಗಿ ಆಚರಿಸಲಾಗುತ್ತಿದೆ. ಕಾಮನ ದಹನದಂತೆ ನಮ್ಮಲ್ಲಿನ ಅರಿಷಡ್ ವರ್ಗಗಳು ದಹನವಾಗಲಿ ಎಂಬುದೂ ಇದರ ಆಶಯ. ಲೈಂಗಿಕತೆಗೆ ಮನ್ಮಥನೇ ಆದಿ ದೇವತೆಯಾದ್ದರಿಂದ ಕಾಮದಹನದ ಆಚರಣೆಯ ಸಂದರ್ಭದಲ್ಲಿ ಅಶ್ಲೀಲ ಲೈಂಗಿಕ ಭಾಷೆಯ ಬಳಕೆಯೂ ಉಂಟು. ಆದರೆ ಇದು ಆ ಕ್ಷಣಕ್ಕೆ ಮಾತ್ರ. ಮನ್ಮಥನ ಪೂಜೆ ನೆರವೇರಿಸಿ ಉರುವಲುಗಳನ್ನು ದಹಿಸಿದ ನಂತರ ಯುಗಾದಿ ಅಮಾವಾಸ್ಯೆಯಂದು ಕಾಮನ ಮೂರ್ತಿಯನ್ನು ತಣ್ಣಗೆ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ.
ಸುಮಾರು 15ರಿಂದ 25 ಅಡಿಗಳ ವೆರಗೆ ಕಾಮನ ಮೂರ್ತಿಯನ್ನು ಜೇಡಿ ಮಣ್ಣಿನಿಂದ ಮಾಡಿ ಪೂಜೆ ನೆರವೇರಿಸಲಾಗುತ್ತದೆ. ಸಾಂಪ್ರದಾಯಿಕವಾದ ಈ ಜನಪದ ಆಚರಣೆ ತಾಲೂಕಿನ ವಿವಿದೆಡೆಗಳಲ್ಲಿ ಆಚರಿಸುತ್ತಾರೆ. ಕಾಮದಹನದಲ್ಲಿ ಹೆಚ್ಚಾಗಿ ಉರುವಲು ಬಳಸಲಾಗುತಿತ್ತು. ಆದರೆ, ಇದು ಪರಿಸರಕ್ಕೆ ಮಾರಕ ಎನ್ನುವ ಕಾರಣದಿಂದ ಹೆಚ್ಚೇನೂ ಉರುವಲುಗಳನ್ನು ಬಳಸದೇ ಸಾಂಕೇತಿಕವಾಗಿ ಕಾಮದಹನವನ್ನು ಆಚರಿ ಸುತ್ತಿರುವುದು ಸಾಮಾನ್ಯವಾಗಿದೆ. ಆದರೆ,ಆಚರಣೆಯ ಉತ್ಸಾಹ ಕಡಿಮೆಯಾಗುತ್ತಿರುವುದು ಕಾಣುತ್ತಿದೆ. ಕಾಮದಹನದಲ್ಲಿ ಆಚರಿಸುವ ಹಲವಾರು ಆಚರಣೆಗಳನ್ನು ಕೈಬಿಡಲಾಗಿದ್ದು, ಸಾಂಕೇತಿಕ ಪೂಜೆಯನ್ನಷ್ಟೇ ಮಾಡಲಾಗುತ್ತಿದೆ. ಇಂದಿನ ಪೀಳಿಗೆ ಇಂತಹ ಜನಪದ ಆಚರಣೆಗಳನ್ನು ಉಳಿಸಿ ಬೆಳೆಸಬೇಕಿದೆ ಎನ್ನುತ್ತಾರೆ ಸಂಜೀವ್ ನಾಯಕ್.