ಉಡುಪಿ: ಸ್ವಾತಂತ್ರ್ಯ ಹೋರಾಟಗಾರರಾಗಿ, ಹರಿದಾಸರಾಗಿ, ಯಕ್ಷಗಾನ ನವಯುಗದ ಪ್ರವರ್ತಕರಾದ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನವನ್ನು ಚಿತ್ರಿಸುವ, ದಿನೇಶ ಉಪ್ಪೂರ ವಿರಚಿತ “ದೊಡ್ಡ ಸಾಮಗರ ನಾಲ್ಮೊಗ’ ಕೃತಿಯು ಉಡುಪಿಯ ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಗೃಹದಲ್ಲಿ ಶನಿವಾರ ಬಿಡುಗಡೆಗೊಂಡಿತು.
ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಪುಸ್ತಕ ಅನಾವರಣಗೊಳಿಸಿ ಆಶೀರ್ವಚಿಸಿ, ಸಾಮಗರು ಒಬ್ಬ ಕಲಾವಿದ-ವಿದ್ವಾಂಸ ಎನ್ನುವುದಕ್ಕಿಂತಲೂ ಹೆಚ್ಚಾಗಿ ಉತ್ತಮ ವ್ಯಕ್ತಿತ್ವ ಹೊಂದಿರುವ ಕಲಾವಿದ. ಸರಳತೆಯ ಬದುಕು ಹೇಗೆ ಎಂದು ಅವರು ತೋರಿಸಿಕೊಟ್ಟಿದ್ದಾರೆ.
ಹಿರಿಯ ಕಲಾವಿದರ ಬಗೆಗಿನ ಪುಸ್ತಕಗಳು ಪ್ರಕಟವಾದರೆ ಅಂಥವರ ಪರಿಚಯ ಯುವ ಪೀಳಿಗೆಗೆ ಆಗಲು ಸಾಧ್ಯವಿದೆ. ಕಲಾವಿದರ ಮಾಹಿತಿಗೂ ಇದು ಪೂರಕವಾಗಿದೆ ಎಂದರು.
ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ ಅವರು ಪುಸ್ತಕ ಪರಿಚಯ ಮಾಡಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಹೆ ಸಹ ಕುಲಪತಿ ಡಾ| ನಾರಾಯಣ ಸಭಾಹಿತ್, ಮಣಿಪಾಲ ಯುನಿವರ್ಸಲ್ ಪ್ರಸ್‌ನ ಸಂಪಾದಕಿ ಪ್ರೊ| ನೀತಾ ಇನಾಂದಾರ್, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಸಾಮಗರ ಸಹಕಲಾವಿದರಾದ ಡಾ| ಪ್ರಭಾಕರ ಜೋಷಿ, ಹಿರಿಯ ಕಲಾವಿದ ಡಾ| ಕೋಳ್ಯೂರು ರಾಮಚಂದ್ರ ರಾವ್, ಲೇಖಕ ಬಾ. ಸಾಮಗ, ದಿನೇಶ್ ಉಪ್ಪೂರ ಉಪಸ್ಥಿತರಿದ್ದರು. ದೊಡ್ಡ ಸಾಮಗರ ಪುತ್ರ ಪ್ರೊ| ಎಂ.ಎಲ್.ಸಾಮಗ ಸ್ವಾಗತಿಸಿ, ಪ್ರಸ್ತಾವಿಸಿದರು.
ಕಾರ್ಯಕ್ರಮದ ಬಳಿಕ ಶಲ್ಯ ಸಾರಥ್ಯ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿಗೊಂಡಿತು.