ಚನ್ನಪಟ್ಟಣ: ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವತಿಯಿಂದ ಮಾ.5ರಂದು ತಾಲೂಕಿನ ದೊಡ್ಡಮಳೂರಿನಲ್ಲಿ ಬಮೂಲ್ ಉತ್ಸವ ಆಯೋಜಿಸಲಾಗಿದೆ ಎಂದು ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು ತಿಳಿಸಿದರು.
ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಉತ್ಸವದಲ್ಲಿ ರಾಸುಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕೃಷಿ ಮೇಳ ಆಯೋಜಿಸಲಾಗಿದ್ದು, ಸುಮಾರು 15 ಸಾವಿರ ಹಾಲು ಉತ್ಪಾದಕ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಮೂಲ್ ವತಿಯಿಂದ ಸಿಗಬೇಕಿರುವ ಎಲ್ಲ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವುದು ಉತ್ಸವದ ಉದ್ದೇಶವಾಗಿದೆ ಎಂದರು.
ಉತ್ಸವಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ನಂಜಾವಧೂತ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಕೆಎಂಎಫ್, ಬಮೂಲ್‌ನ ಅಧ್ಯಕ್ಷರು, ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ 12.50 ಲಕ್ಷ ರೂ. ಪ್ರತಿಭಾ ಪುರಸ್ಕಾರ ಚೆಕ್ ವಿತರಣೆ, ಆಯ್ದ ಸರ್ಕಾರಿ ಶಾಲೆಗಳಿಗೆ ಪೀಠೊಪಕರಣಗಳ ವಿತರಣೆ, ಶುದ್ಧ ಕುಡಿಯುವ ಫಿಲ್ಟರ್ ವಿತರಣೆ, ಎಂಪಿಸಿಎಸ್ ಸಂಘಗಳಿಗೆ ಕಂಪ್ಯೂಟರ್, ಯುಪಿಎಸ್ ವಿತರಣೆ, 25 ರೈತರಿಗೆ ಕೊಟ್ಟಿಗೆ ನಿರ್ಮಾಣ ಮಾಡಲು ತಲಾ 50 ಸಾವಿರ ರೂ. ಚೆಕ್ ವಿತರಣೆ, ಹಾಲು ಉತ್ಪಾದಕರಿಗೆ ವೈದ್ಯಕೀಯ ಮರುಪಾವತಿಗೆ 5ಲಕ್ಷ ರೂ. ವಿತರಣೆ, ಹಾವು ಕಡಿತದಿಂದ ಅಂಗವಿಕಲನಾದ ರೈತನಿಗೆ 1 ಲಕ್ಷ ರೂ. ಹಾಗೂ ಮೃತ ರಾಸುಗಳ ಪರಿಹಾರದ ಚೆಕ್ ವಿತರಿಸಲಾಗುವುದು.
ಬೈರಾಪಟ್ಟಣ ಬಳಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಿಬಿರ ಕಚೇರಿ ಹಾಗೂ ನಂದಿನಿ ಕೂಲ್ ಪಾರ್ಲರ್ ಕಟ್ಟಡಕ್ಕೆ ಭೂಮಿ ಪೂಜೆ, ಮಿಶ್ರತಳಿ ಕರುಗಳ ಪ್ರದರ್ಶನ ಹಾಗೂ ಬಹುಮಾನ ವಿತರಣೆ, ಹಾಲು ಕರೆಯುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ ಹಾಗೂ ಡೇರಿ ಅಗ್ರಿಕಲ್ಚರ್ ಸೆಕ್ಷನ್ ವತಿಯಿಂದ ವಿವಿಧ ವಸ್ತುಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಮೂಲ್ ಶಿಬಿರ ಉಪವ್ಯವಸ್ಥಾಪಕ ಡಾ.ಕೆಂಪರಾಜು, ಚಂದ್ರಪ್ಪ, ಡಾ.ದೇವರಾಜು, ವಿಸ್ತರಣಾಧಿಕಾರಿಗಳಾದ ಹೊನ್ನಪ್ಪ ಪೂಜಾರಿ, ನಂದಿತ, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪುಟ್ಟೇಗೌಡ, ಪದಾಧಿಕಾರಿಗಳಾದ ದೇವರಾಜು, ಪುಟ್ಟರಾಜು, ರಮೇಶ್, ರವೀಂದ್ರ, ಅನಿಲ್ ಕುಮಾರ್, ಬಿಳಿಗೌಡ ಸೇರಿದಂತೆ ಹಲವರಿದ್ದರು.