Advertisement

ಸಾಂಪ್ರದಾಯಿಕ ಪದ್ಯಗಳ ದಾಖಲೀಕರಣವೂ ಸವಾಲೇ!

11:00 AM Feb 16, 2019 | |

ಶಿರಸಿ: ಯಕ್ಷಗಾನದಲ್ಲಿ ಕಳೆದು ಹೋಗುತ್ತಿರುವ ಅಪರೂಪದ ತಿಟ್ಟಿನ, ಮಟ್ಟಿನ ಪದ್ಯಗಳ ಹಾಡುಗಾರಿಕೆ, ವಾದನಗಳ ಶೈಲಿಯ ದಾಖಲೀಕರಣ ನಗರದ ಹೊರ ವಲಯದ ಪುಟ್ಟಣಮನೆಯಲ್ಲಿ ನಡೆಯುತ್ತಿದೆ. ಕರ್ನಾಟಕ
ಯಕ್ಷಗಾನ ಅಕಾಡೆಮಿ ನೇತೃತ್ವದಲ್ಲಿ ನಾದಶಂಕರ ಸಂಸ್ಥೆ ಸಹಕಾರದಲ್ಲಿ ಈ ಕಾರ್ಯ ನಡೆಯುತ್ತಿದೆ.

Advertisement

ಐದು ದಿನಗಳಲ್ಲಿ ಕನಿಷ್ಠ 150ಕ್ಕೂ ಅಧಿಕ ವಿಧ ಪೌರಾಣಿಕ ಪ್ರಸಂಗಗಳ ಪದ್ಯಗಳ ಹಳೆ ಶೈಲಿಯಲ್ಲಿ ದಾಖಲೀಕರಣ ಆಗುತ್ತಿದೆ. ಬಡಗು, ಬಡಾ ಬಡಗಿನ ಹೆಸರಾಂತ ಭಾಗವತರು, ಹಿಮ್ಮೇಳ ವಾದಕರು ಇಲ್ಲಿ ಸಾಥ್‌ ನೀಡಿದ್ದಾರೆ.

ಸವಾಲಿನ ದಾಖಲೀಕರಣ!: ಹಳಬರು ಹೀಗೆ ಪದ್ಯ ಹಾಡುತ್ತಿದ್ದರು ಎಂದು ದಾಖಲೆ ಮಾಡುವುದು ಸುಲಭದ್ದಲ್ಲ. ಆದರೂ ದಾಖಲೀಕರಣ ಆಗದೇ ಇದ್ದರೆ ಈಗಿನ ಆಧುನೀಕರಣದ ವೇಗಕ್ಕೆ, ಬದಲಾವಣೆಗೆ ಹಳೆಯ ಅನೇಕ ಗುಣಮಟ್ಟದ ಸಂಗತಿಗಳೂ ತೂರಿ ಹೋಗಬಹುದು. ಈ ಕಾರಣದಿಂದ ಅಕಾಡೆಮಿಯ ಜವಬ್ದಾರಿಗಳಲ್ಲಿ ಇಂತಹ ಕಾರ್ಯ ಕೂಡ ಒಂದು. ಆದರೆ, ದಾಖಲೀಕರಣದ ವೇಳೆ ಹಳೆಯ ಶೈಲಿ ತಪ್ಪದಂತೆ ನೋಡಿಕೊಳ್ಳುವುದೂ ಸವಾಲೇ.

ಪುಟ್ಟನಮನೆಯಲ್ಲಿ ನಡೆಯುತ್ತಿರುವ ಬಡಗು ಯಕ್ಷಗಾನ ದೃಷ್ಟಿಯಲ್ಲಿ ದೊಡ್ಡ ಕೆಲಸ ಆಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೆಬ್ಬೂರು ನಾರಾಯಣ ಭಾಗವತ್‌, ಕಪ್ಪೆಕೆರೆ ಸುಬ್ರಾಯ ಭಾಗವತ್‌, ಸುಬ್ರಹ್ಮಣ್ಯ ಧಾರೇಶ್ವರ, ವಿದ್ವಾನ್‌ ಗಣಪತಿ ಭಟ್ಟ, ಕೇಶವ ಹೆಗಡೆ ಕೊಳಗಿ, ಸತೀಶ ದಂಟಕಲ್‌ ಭಾಗವತರಾಗಿ ಹಳೆ ಮಟ್ಟನ್ನು ಎತ್ತಿ ಹೇಳುತ್ತಿದ್ದಾರೆ. ಉಪ್ಪೂರು ನಾರಣಪ್ಪ, ಮಹಾಬಲ ಹೆಗಡೆ ಕೆರೆಮನೆ, ಶಿವರಾಮ ಹೆಗಡೆ ಕೆರೆಮನೆ, ನೀರ್ಚಾಲು ರಾಮಕೃಷ್ಣ ಅವರಂತಹ ಹಿರಿಯ ಭಾಗವತರ ಒಡನಾಡಿ ಕಲಾವಿದರ, ಶಿಷ್ಯರ ಮೂಲಕ ದಾಖಲೀಕರಣ ಒಂದೆಡೆಗೆ ಆದರೆ, ಇನ್ನೊಂದಡೆ ಈಗಿನ ಹಿರಿಯ ಭಾಗವತರ ಶೈಲಿಯೂ ದಾಖಲೀಕರಣ ಆಗುವಂತೆ ಆಗಲಿದೆ. ಹೊಸ ತಲೆಮಾರಿಗೆ ಇಂತಹ ಶೈಕ್ಷಣಿಕ ನಡೆಗಳು ಭವಿಷ್ಯದಲ್ಲಿ ನೆರವಾಗುತ್ತವೆ. ಹಳೆ ತಲೆಮಾರಿನ ಕೊಂಡಿಯಾಗಿರುವ ಈಗಿನ ಭಾಗವತರು ಒಂದೇ ಕಡೆ ಕರೆತಂದು ದಾಖಲಿಸುವದು ಕೂಡ ಜವಾಬ್ದಾರಿ ಕಾರ್ಯವಾಗಿದೆ.

ವಾದನಗಳ ದಾಖಲೀಕರಣವೂ: ಹಿಮ್ಮೇಳ ಎಂದರೆ ಯಕ್ಷಗಾನದಲ್ಲಿ ವಾದನಗಳೂ ಸೇರುತ್ತವೆ. ಮದ್ದಲೆ ಹಾಗೂ ಚಂಡೆಯ ಹಳೆ ಮಟ್ಟುಗಳ ದಾಖಲೀಕರಣ ಕೂಡ ಇಲ್ಲಾಗುತ್ತದೆ. ಶಂಕರ ಭಾಗವತ್‌ ಯಲ್ಲಾಪುರ, ನರಸಿಂಹ ಭಟ್ಟ
ಹಂಡ್ರಮನೆ ಅವರು ಮದ್ದಲೆಯಲ್ಲಿ, ಗಣೇಶ ಗಾಂವಕರ್‌, ವಿಘ್ನೇಶ್ವರ ಗೌಡ ಚಂಡೆಯಲ್ಲಿ ಹಳೆ ಪೆಟ್ಟುಗಳನ್ನು ನುಡಿಸಲಿದ್ದಾರೆ. ಎಲ್ಲೇ ತಪ್ಪಿದರೂ ಮತ್ತೆ ಹೊಸತಾಗಿ ದಾಖಲೀಕರಣವನ್ನೂ ಮಾಡಲಾಗುತ್ತಿದೆ. ಗುಣಮಟ್ಟಕ್ಕೆ ಆದ್ಯತೆ ಕೊಟ್ಟು ಈ ಕಾರ್ಯ ಮಾಡಲಾಗುತ್ತಿದೆ ಎಂಬುದು ವಿಶೇಷವಾಗಿದೆ.

Advertisement

ಪದ್ಯಗಳ ಆಯ್ಕೆ: ಯಕ್ಷಗಾನದಲ್ಲಿ ಈಗ ಚಾಲ್ತಿಯಲ್ಲಿ ಇರುವ ಪ್ರಸಂಗಗಳ ಪದ್ಯಗಳಿಗೂ ಇದೇ ಪ್ರಸಂಗದ ಪದ್ಯಗಳನ್ನು ಎರಡು ಮೂರು ದಶಕಗಳ ಹಿಂದೆ ಹೇಳುವ ಕ್ರಮಕ್ಕೂ ವ್ಯತ್ಯಾಸವಿದೆ. ಅಂದಿನ ಅನೇಕ ಒಳ್ಳೆ ಗುಣಗಳೂ, ಅನೇಕ ಪದ್ಯಗಳು ಪ್ರಸ್ತುತಿಯಲ್ಲೂ ಬದಲಾಗಿದೆ, ಪದ್ಯಗಳನ್ನು ಹಾಡುವಾಗಿನ ಭಾವದಲ್ಲೂ, ನಡೆಯಲ್ಲೂ ಹಲವು ತಿರುವುಗಳು ಪಡೆದುಕೊಳ್ಳುತ್ತಿದೆ ಎಂಬ ಆರೋಪಗಳೂ ಇವೆ.

ಈ ಕಾರಣದಿಂದಲೂ ದಾಖಲೀಕರಣ ಹಾಗೂ ಇಂತಹ ಪದ್ಯಗಳು ಹೀಗೇ ಹಾಡಬೇಕು ಎಂಬ ಕರಾರುವಕ್ಕಾದ ಮತ್ತು ಹೀಗೂ ಹಾಡಬಹುದು ಎಂಬುದಕ್ಕೆ ಉದಾಹರಣೆಗಳ ಸಹಿತ ಪ್ರಸ್ತುತಗೊಳಿಸುವುದೂ ಇಲಿನ ವಿಶೇಷವಾಗಿದೆ. ಇಲ್ಲಿ ದಾಖಲಿಸಲಾಗುವ ಪೌರಾಣಿಕ ಪ್ರಸಂಗಗಳ ನೂರಕ್ಕೂ ಅಧಿ ಕ ಪದ್ಯಗಳು ಇಲ್ಲಿ ಆಯಾ ಭಾಗವತರು ಪ್ರಸ್ತುತಗೊಳಿಸಲಿದ್ದಾರೆ. ಇಂಥ ಪದ್ಯ ಇಂಥವರಿಂದಲೇ ಎಂಬ ನಿರ್ದಿಷ್ಟತೆ ಇಲ್ಲವಾದರೂ ಕಳೆದು ಹೋಗುವದನ್ನು ಹುಡುಕುವ, ಹುಡುಕಿದ್ದನ್ನು ಆಯ್ದುಕೊಡುವ ಪ್ರಯತ್ನ ಇಲ್ಲಿ ನಡೆದಿದೆ, ನಡೆಯುತ್ತಿದೆ.

ಹೊಸ ತರುವಾಯಕ್ಕಾಗಿ ಇಂಥದೊಂದು ದಾಖಲೀಕರಣ ಆಗತ್ಯ. ಸಂಪ್ರದಾಯ ಬದ್ಧವೇ ನಮಗೆ ಬೇಕು ಎಂಬ ಆಗ್ರಹ ಪ್ರೇಕ್ಷಕರಿಂದಲೂ ಬಂದಾಗ ಸರಿಯಾಗಬಹುದು, ಉಳಿಯಬಹುದು.
 ನರೇಂದ್ರ ಹೆಗಡೆ
 ಯಕ್ಷಾಭಿಮಾನಿ, ಶಿರಸಿ

ದಾಖಲೀಕರಣ ಕೂಡ ಯಕ್ಷಗಾನದ ಒಂದು ಭಾಗ, ಜವಾಬ್ದಾರಿ. ತೆಂಕು, ಮೂಡಲಪಾಯಗಳಲ್ಲೂ ಇಂಥ ದಾಖಲೀಕರಣ ಹಿಂದೆ ಆಗಿದೆ, ಆಗುತ್ತದೆ ಕೂಡ. ಕುಣಿತದ ವಿಭಾಗದಲ್ಲೂ ಇಂಥದ್ದು ಅಗತ್ಯವಿದೆ. ಹಳತು ಹೊಸತು ಅರಿತವರ ಹುಡುಕಿ ಮಾಡಿಸಬೇಕು.
 ಪ್ರೊ| ಎಂ.ಎ.ಹೆಗಡೆ ದಂಟ್ಕಲ್‌
ಅಧ್ಯಕ್ಷರು ಅಕಾಡೆಮಿ

ರಾಘವೇಂದ್ರ ಬೆಟ್ಟಕೊಪ್ಪ 

Advertisement

Udayavani is now on Telegram. Click here to join our channel and stay updated with the latest news.

Next