Advertisement

ಸಾಕ್ಷ್ಯಚಿತ್ರಗಳ ಪ್ರದರ್ಶನ ಮತ್ತಷ್ಟು ನಗರಗಳಿಗೆ ಶೀಘ್ರವೇ ವಿಸ್ತರಣೆ

12:41 PM Nov 25, 2019 | Team Udayavani |

ಪಣಜಿ: ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದೇ ಇಂದಿನ ತುರ್ತು ಅವಶ್ಯ. ಸಾಕ್ಷ್ಯಚಿತ್ರ ರೂಪಿಸುವವರಿಗೆ ಕೊರತೆ ಇಲ್ಲ, ಆದರೆ ಆವುಗಳನ್ನು ಪ್ರೇಕ್ಷಕರಿಗೆ ತಲುಪಿಸುವ ದಾರಿಗಳ ಕೊರತೆ ಇದೆ ಎಂದು ಆಭಿಪ್ರಾಯಪಟ್ಟವರು ಭಾರತೀಯ ಸಾಕ್ಷ್ಯಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷೆ ಉಷಾ ದೇಶಪಾಂಡೆ.

Advertisement

ಭಾರತೀಯ ಆಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆವರು, ಈಗಾಗಲೇ ನಾವು  ಹಲವು ಮಾರ್ಗಗಳನ್ನು ಹುಡುಕಿಕೊಂಡಿದ್ದೇವೆ. ದೇಶದ ವಿವಿಧ ನಗರಗಳಲ್ಲಿ ಪ್ರತಿ ಎರಡನೇ ಮತ್ತು ನಾಲ್ಕನೇ ಶುಕ್ರವಾರ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಇನ್ನಷ್ಟು ನಗರಗಳಿಗೆ ವಿಸ್ತರಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಗುಲ್ಬರ್ಗ, ಪುಣೆ, ಮುಂಬಯಿ, ಜೈಪುರ, ದಿಲ್ಲಿ ಸೇರಿದಂತೆ 20 ನಗರಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಎಲ್ಲ ಸಾಕ್ಷ್ಯಚಿತ್ರ ನಿರ್ದೇಶಕರು ಎದುರಿಸುತ್ತಿರುವ ಎರಡು ಸಮಸ್ಯೆಯೆಂದರೆ ನಿರ್ಮಾಣ ವೆಚ್ಚ ಮತ್ತು ಪ್ರದರ್ಶನಕ್ಕೆ ವೇದಿಕೆ. ಇವೆರಡಕ್ಕೂ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಸಿನಿಮಾ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೆಲವೊಂದು ಕಡೆ ಗುಣಮಟ್ಟದ ಜತೆಗೆ ರಾಜಿ ಮಾಡಿಕೊಳ್ಳಲಾಗುತ್ತಿದೆ. ಆದರೆ ಎಲ್ಲವೂ ಖಾಸಗಿ ಸಂಸ್ಥೆಗಳಾಗಿರುವುದರಿಂದ ನಾವೇನೂ ನೇರವಾಗಿ ಮಾಡುವಂತಿಲ್ಲ. ಹಾಗಾಗಿ ಪ್ರೇಕ್ಷಕರೇ ಇದನ್ನು ನಿಯಂತ್ರಿಸಬೇಕು. ಗುಣಮಟ್ಟದ ಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಇದಕ್ಕೆ ದನಿಗೂಡಿಸಿದ ಸಂಘದ ಕಾರ್ಯದರ್ಶಿ ಸಂಸ್ಕಾರ್ ದೇಸಾಯಿ, ಈ ಸಂಬಂಧ ಸರಕಾರದೊಂದಿಗೂ ಚರ್ಚಿಸುತ್ತಿದ್ದೇವೆ, ಸಾಕ್ಷ್ಯಚಿತ್ರ ನಿರ್ಮಾಣಕರರಿಗೆ ನಿಗದಿತವಾಗಿ ಕೆಲಸ ಮಾಡುವಂಥ ಹಾಗೂ ಆದಾಯ ಸಿಗುವಂಥ ನೀತಿಯನ್ನು ಸರಕಾರ ರೂಪಿಸಬೇಕಿದೆ ಎಂದು ಹೇಳಿದರು.

Advertisement

ಸಾಕ್ಷ್ಯಚಿತ್ರ ನಿರ್ದೇಶಕರೂ ಪತ್ರಕರ್ತರಂತೆ ಕೆಲಸ ಮಾಡಬೇಕು. ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವಾಗ ನಿಷ್ಪಕ್ಷಪಾತವಾಗಿರಬೇಕು ಎಂದು ಸಲಹೆ ನೀಡಿದ ಉಷಾ ದೇಶಪಾಂಡೆ, ಈ ನಿಟ್ಟಿನಲ್ಲಿ ಎಚ್ಚರವಹಿಸಬೇಕು ಎಂದು ಹೇಳಿದರು.

ಸಂಘದ ವತಿಯಿಂದ ಇಫಿ ಚಿತ್ರೋತ್ಸವದಲ್ಲಿ ನ. 25 ರಿಂದ 27 ರವರೆಗೆ ವಿವಿಧ ಸಂವಾದಗಳನ್ನು ಏರ್ಪಡಿಸಿದೆ. ‘ಅಣಬೆಯಂತೆ ಹುಟ್ಟಿಕೊಳ್ಳುತ್ತಿರುವ ಸಿನಿಮಾ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಯಾವ ಕ್ರಮ ಕೈಗೊಳ್ಳಬೇಕು’, ‘ಸತ್ಯ ಘಟನೆಗಳನ್ನು ಅಧರಿಸಿದ ಚಿತ್ರಗಳೆಷ್ಟು ಸತ್ಯ?’ ಹಾಗೂ ‘ಸ್ವತಂತ್ರ ಚಿತ್ರ ನಿರ್ಮಾಣಕಾರರು ವಿದ್ಯುನ್ಮಾನ ಮಾಧ್ಯಮಗಳಿಂದ ಅನುಕೂಲವಾಗುತ್ತಿದೆಯೇ?’ ಈ ವಿಷಯಗಳ ಕುರಿತು ಕ್ಷೇತ್ರಗಳ ವಿವಿಧ ಪರಿಣಿತರು ಸಂವಾದ ನಡೆಸುವರು.

Advertisement

Udayavani is now on Telegram. Click here to join our channel and stay updated with the latest news.

Next