ಬುಧವಾರ ಸ್ವಾತಂತ್ರ್ಯೋತ್ಸವದ ದಿನ ಭಾರತಿ ವಿಷ್ಣುವರ್ಧನ್ ಅವರು ತಮ್ಮ ಹುಟ್ಟುಹಬ್ಬವನ್ನು ಕುಟುಂಬದವರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ. ಈ ಬಾರಿಯ ವಿಶೇಷತೆಯೆಂದರೆ, ಅವರ ಸಾಕ್ಷ್ಯಚಿತ್ರವೊಂದು ಪ್ರಾರಂಭವಾಗಿದ್ದು. ಈ ಡಾಕ್ಯುಮೆಂಟರಿಯನ್ನು ನಟ ಅನಿರುದ್ಧ್ ನಿರ್ದೇಶಿಸುತ್ತಿದ್ದು, ಈ ಸಾಕ್ಷ್ಯಚಿತ್ರದ ಮುಹೂರ್ತ ಭಾರತಿ ಅವರ ಜಯನಗರದ ಮನೆಯಲ್ಲಿ ನಡೆಯಿತು.
ಅನಿರುದ್ಧ್ ಅವರು ಈಗಾಗಲೇ ಕೀರ್ತಿ ಇನ್ನೋವೇಷನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರಡಿ ಆರು ಕಿರುಚಿತ್ರಗಳನ್ನು ಮಾಡಿದ್ದಾರೆ. ಆ ಕಿರುಚಿತ್ರಗಳು ಇದೀಗ ವಿವಿಧ ಹಂತಗಳಲ್ಲಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ. ಈ ಮಧ್ಯೆ, ಭಾರತಿ ವಿಷ್ಣುವರ್ಧನ್ ಕುರಿತ ಸಾಕ್ಷ್ಯಚಿತ್ರಕ್ಕೆ ಅನಿರುದ್ಧ್ ಕೈ ಹಾಕಿದ್ದಾರೆ. “ಅಮ್ಮನ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡಬೇಕು ಎಂದು ಬಹಳ ದಿನಗಳಿಂದ ಆಸೆಯಿತ್ತು. ಅದೀಗ ಕೈಗೂಡಿದೆ.
“ಅವರದ್ದು ಚಿತ್ರರಂಗದಲ್ಲಿ ಸುದೀìಘವಾದ ಜರ್ನಿ.ಐದು ದಶಕಗಳಲ್ಲಿ ಆರು ಭಾಷೆಗಳಲ್ಲಿ ನಟಸಿರುವ ಅವರು, ಮಗಳಾಗಿ, ಅಕ್ಕನಾಗಿ, ಸ್ನೇಹಿತೆಯಾಗಿ, ಗಾಯಕಿಯಾಗಿ, ಕಲಾವಿದೆಯಾಗಿ, ಅರ್ಧಾಂಗಿಯಾಗಿ, ತಾಯಿಯಾಗಿ, ಅಜ್ಜಿಯಾಗಿ, ಪದ್ಮಶ್ರೀ ಪುರಸ್ಕೃತರಾಗಿ, ಸಮಾಜಮುಖೀಯಾಗಿ ಹಲವಾರು ಅವತಾರಗಳನ್ನು ಎತ್ತಿದ್ದಾರೆ. ಇದೆಲ್ಲವನ್ನೂ ಎತ್ತಿಹಿಡಿಯುವ ಒಂದು ಸಾಕ್ಷ್ಯಚಿತ್ರ ಮಾಡಬೇಕು ಎಂಬುದು ನಮ್ಮ ಆಸೆ.
ಅವರನ್ನು ಬಹಳ ವರ್ಷಗಳಿಂದ ನೋಡಿಕೊಂಡು ಬಂದಿರುವ ನನಗೆ, ಅವರ ಕುರಿತು 100ಕ್ಕೂ ಹೆಚ್ಚು ಪ್ರಶ್ನೆಗಳಿವೆ. ಇನ್ನು ಕುಟುಂಬವರ್ಗ, ಸ್ನೇಹಿತರು, ಸಹಕಲಾವಿದರು ಹೀಗೆ ಸಾಕಷ್ಟು ಜನರನ್ನು ಮಾತನಾಡಿಸಬೇಕಿದೆ. ಹಾಗಾಗಿ ಈಗಲೇ ಇದು ಎಷ್ಟು ನಿಮಿಷದ ಸಾಕ್ಷ್ಯಚಿತ್ರವಾಗಬಹುದು ಎಂದು ನನಗೆ ಗೊತ್ತಿಲ್ಲ. ಈ ಸಾಕ್ಷ್ಯಚಿತ್ರಕ್ಕೆ “ಬಾಳ ಬಂಗಾರ’ ಎಂಬ ಹೆಸರಿಡಬೇಕು ಎಂದು ಯೋಚಿಸಿದ್ದೇನೆ’ ಎನ್ನುತ್ತಾರೆ ಅನಿರುದ್ಧ್.
ಮೈರಾ ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್-ಅನಿರುದ್ಧ್ ನಟನೆ: ಈ ಹಿಂದೆ “ರಾಜಾಸಿಂಹ’ ಚಿತ್ರದಲ್ಲಿ ತಾಯಿ ಮಗನಾಗಿ ಕಾಣಿಸಿಕೊಂಡಿದ್ದ ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ್, ಈಗ ಮತ್ತೆ ಇನ್ನೊಂದು ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಹೆಸರು “ಮೈರಾ’. ಈ ಚಿತ್ರವನ್ನು “ಅಭಯಹಸ್ತ’ ಚಿತ್ರವನ್ನು ನಿರ್ದೇಶಿಸಿರುವ ನವೀನ್ ನಿರ್ದೇಶಿಸುತ್ತಿದ್ದಾರೆ.
“ಅಭಯಹಸ್ತ’ ಚಿತ್ರದಲ್ಲಿ ಅನಿರುದ್ಧ್ ನಟಿಸಿದ್ದು, ಆ ಚಿತ್ರ 24ರ ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಗುತ್ತಿದೆ. ಅದರ ಬೆನ್ನಲ್ಲೇ “ಮೈರಾ’ ಎಂಬ ಇನ್ನೊಂದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ನವೀನ್. “ಮೈರಾ’ ಎಂಬುದು ಸಂಸ್ಕೃತದ ಪದವಾಗಿದ್ದು, ಸಾಮಾನ್ಯ ಮನುಷ್ಯನ ಕುರಿತಾದ ಚಿತ್ರವಾಗಿರುತ್ತದಂತೆ. ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಮುಂತಾದವರು ನಟಿಸುತ್ತಿರುವ ಈ ಚಿತ್ರವು ಮೂರು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ.