Advertisement

ಖಾಸಗಿ ಆಸ್ಪತ್ರೆ ಬಂದ್‌; ತುರ್ತು ಸೇವೆಗೆ ವಿನಾಯಿತಿ

11:49 AM Jul 28, 2018 | |

ಮಂಗಳೂರು/ ಉಡುಪಿ: ಭಾರತೀಯ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗಿರುವ ನ್ಯಾಶನಲ್‌ ಮೆಡಿಕಲ್‌ ಕಮಿಷನ್‌ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಇದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ದ.ಕ. ಜಿಲ್ಲಾ ಘಟಕವು ಜು. 28ರಂದು ಧಿಕ್ಕಾರ ದಿನ ಆಚರಿಸಲು ನಿರ್ಧರಿಸಿವೆ. ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಶನಿವಾರ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಅಲಭ್ಯವಾಗುವ ಸಾಧ್ಯತೆ ಇದೆ. 
ಬೆಳಗ್ಗೆ 6ರಿಂದ ಸಂಜೆ 6ರ ತನಕ ಧಿಕ್ಕಾರ ದಿನ ಹಮ್ಮಿಕೊಳ್ಳಲಾಗಿದೆ. 2017ರಲ್ಲಿ ಮಂಡಿಸಲಾದ ರಾಷ್ಟ್ರೀಯ ವೈದ್ಯಕೀಯ ಕಾನೂನಿನಲ್ಲಿರುವ ಋಣಾತ್ಮಕ ಅಂಶಗಳನ್ನು ಪರಿಗಣಿಸಲು ಲೋಕಸಭೆಯ ಸ್ಥಾಯಿ ಸಮಿತಿಗೆ ಸೂಚಿಸಲಾಗಿತ್ತು. ಈ ಸಮಿತಿಯು ಹಲವಾರು ಸಾಕ್ಷಿಗಳನ್ನು ಮತ್ತು ಪರಿಣಿತರನ್ನು ವಿಚಾರಿಸಿ 24 ಸಲಹೆ ಗಳನ್ನು ಸೂಚಿಸಿತ್ತು. ಈ ಪೈಕಿ ಕೇವಲ ಒಂದನ್ನು ಸಂಪೂರ್ಣವಾಗಿ ಮತ್ತು ಮೂರನ್ನು ಭಾಗಶಃ ಅಳವಡಿಸಿ ಉಳಿದ ಅಂಶಗಳನ್ನು ಕೈ ಬಿಟ್ಟು ಲೋಕಸಭೆಯಲ್ಲಿ ಪುನಃ ಮಂಡಿಸಲಾಗಿದೆ. 
ಭಾರತೀಯ ವೈದ್ಯಕೀಯ ಸಂಘದ ನಿರ್ದೇಶದಂತೆ ಸಂಘದ ದ.ಕ. ಜಿಲ್ಲಾ ಘಟಕವು ಖಾಸಗಿ ಆಸ್ಪತ್ರೆ ಬಂದ್‌ಗೆ ಕರೆ ಕೊಟ್ಟಿದೆ. ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಸೇವೆಗಳು ಲಭ್ಯವಿರುವುದಿಲ್ಲ. ಆದರೆ ಇದು ತತ್‌ಕ್ಷಣದ ನಿರ್ದೇಶವಾದ್ದರಿಂದ ಯಾವೆಲ್ಲ ಆಸ್ಪತ್ರೆಗಳು ಪಾಲ್ಗೊಳ್ಳಲಿವೆ ಎಂಬ ಬಗ್ಗೆ ತಿಳಿದಿಲ್ಲ ಎಂಬುದಾಗಿ ಮಂಗಳೂರು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಕೆ. ರಾಮಚಂದ್ರ ಕಾಮತ್‌ ತಿಳಿಸಿದ್ದಾರೆ. 
ಉಡುಪಿ: ವೈದ್ಯರ ಮುಷ್ಕರ
ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸುವ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಸೂದೆಯು ಆರೋಗ್ಯ ಹಿತಾಸಕ್ತಿಗೆ ಮಾರಕವಾಗಿದ್ದು ಬಂಡ ವಾಳಶಾಹಿಗಳ ಪರವಾಗಿದೆ. ಇದರ ವಿರುದ್ಧ ಉಡುಪಿ ಜಿಲ್ಲೆಯಲ್ಲಿ ಖಾಸಗಿ ವೈದ್ಯರು ಶನಿವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮುಷ್ಕರ ನಡೆಸಲಿದ್ದಾರೆ. ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಇದರಲ್ಲಿ ಭಾಗಿಯಾಗಲಿವೆ. ತುರ್ತು ಸೇವೆ ಮತ್ತು ಒಳರೋಗಿ ಸೇವೆ ಹೊರತುಪಡಿಸಿ ಹೊರರೋಗಿ ಸೇವೆಗಳು ಇರುವುದಿಲ್ಲ ಎಂದು ಐಎಂಎ ಜಿಲ್ಲಾಧ್ಯಕ್ಷ ಡಾ|ವೈ. ಸುದರ್ಶನ ರಾವ್‌ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next