ಕೊಪ್ಪಳ: ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು ರಾಷ್ಟ್ರವ್ಯಾಪಿ ಸೋಮವಾರ ಕರೆ ನೀಡಿದ್ದ ಬಂದ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಲವು ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳಿಗೆ ಚಿಕಿತ್ಸೆಯನ್ನು ಸಂಪೂರ್ಣ ಬಂದ್ ಮಾಡಿ, ಒಳ ರೋಗಿಗಳಿಗೆ ಮಾತ್ರ ಸೇವೆ ಕೊಡುತ್ತಿದ್ದವು.
ಭಾರತೀಯ ವೈದ್ಯಕೀಯ ಸಂಘ ಬಂದ್ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸೇವೆ ಸಂಪೂರ್ಣ ಅಲಭ್ಯವಾಗಿತ್ತು. ಹೊರ ರೋಗಿಗಳು ಎಂದಿನಂತೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಮುಂದಾದರೆ ಆಸ್ಪತ್ರೆಗಳು ಸಂಪೂರ್ಣ ಬಂದ್ ಆಗಿರುವುದನ್ನು ನೋಡಿ ಬೇಸರದಿಂದಲೇ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡುವಂತ ಪರಿಸ್ಥಿತಿ ಕಂಡುಬಂದಿತು.
ವಿಶೇಷವೆಂಬಂತೆ ಹೊರ ರೋಗಿಗಳ ಚಿಕಿತ್ಸೆ ಬಂದ್ ಮಾಡಿದ್ದ ಖಾಸಗಿ ವೈದ್ಯರು ಒಳ ರೋಗಿಗಳ ಚಿಕಿತ್ಸೆಯನ್ನೂ ಅಷ್ಟಕ್ಕಷ್ಟೆ ನೀಡುತ್ತಿದ್ದರು. ಕೇವಲ ತುರ್ತು ಚಿಕಿತ್ಸೆ ನೀಡುವ ಕೇಸ್‌ಗಳನ್ನು ಮಾತ್ರ ನೋಡುತ್ತಿದ್ದರು. ಆಸ್ಪತ್ರೆಗಳ ಬಂದ್ ಹಿನ್ನೆಲೆಯಲ್ಲಿ ಎಲ್ಲ ಆಸ್ಪತ್ರೆಗಳ ಮುಂಭಾಗದಲ್ಲಿ ಸೇವೆ ಬಂದ್ ಇರುವ ಕುರಿತು ಬೋರ್ಡ್ ಹಾಕಲಾಗಿತ್ತು. ನಿತ್ಯ ರೋಗಿಗಳು, ಜನರಿಂದ ಗಿಜುಗುಡುತ್ತಿದ್ದ ಖಾಸಗಿ ಆಸ್ಪತ್ರೆಗಳು ಸೋಮವಾರ ಬಿಕೋ ಎನ್ನುತ್ತಿದ್ದವು.
ಇನ್ನೂ ಬಹುತೇತ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದರಿಂದ ಜನರು ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಬೇಕಾಯಿತು. ಹೊರ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೌಂಟರ್‌ನಲ್ಲಿ ಜನರು ಸರದಿ ಸಾಲಿನಲ್ಲಿ ನಿಂತು ಚೀಟಿ ಮಾಡಿಸಿ ವೈದ್ಯರ ಬಳಿ ತಮ್ಮ ನೋವು ಹೇಳಿಕೊಂಡರು. ಎಂದನಂತೆ ಆಸ್ಪತ್ರೆ ಇರದೇ ಸೋಮವಾರ ಹೆಚ್ಚಿನ ಜನ ಜಂಗುಳಿಯಿಂದ ತುಂಬಿತ್ತು.
ಇನ್ನೂ ವೈದ್ಯರ ಸಂಘವು ತಮ್ಮ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಇತ್ತಿಚೇಗೆ ವೈದ್ಯರ ಮೇಲೆ ಪದೇ ಪದೆ ಹಲ್ಲೆಗಳು ನಡೆಯುತ್ತಿವೆ. ಇದರಿಂದಾಗಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ದೇಶದ ವ್ಯವಸ್ಥೆಯಲ್ಲಿ ಎಂತಹ ರೋಗಿ ಇದ್ದರೂ ಸಹಿತ ವೈದ್ಯ ಚಿಕಿತ್ಸೆ ಕೊಟ್ಟು ಸಮಾನಾಗಿ ಕಾಣುತ್ತಿದ್ದಾರೆ. ಆದರೆ ಜನರೇ ರೋಗಿಯನ್ನು ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಗೆ ಕರೆ ತಂದು ವೈದ್ಯರ ಮೇಲೆ ದಬ್ಟಾಳಿಕೆ ಮಾತನ್ನಾಡುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದ ವೈದ್ಯರಿಗೆ ಸರಿಯಾಗಿ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪ ವೈದ್ಯ ಸಂಘದಿಂದ ಕೇಳಿ ಬಂದಿತು.
ಇನ್ನೂ ಕೇಂದ್ರ ಸರ್ಕಾರ 2017ರಲ್ಲಿ ವೈದ್ಯರ ರಕ್ಷಣೆಗಾಗಿ ಕಾಯ್ದೆ ಜಾರಿ ಮಾಡಲು ಸಿದ್ಧತೆ ನಡೆಸಿತ್ತು. ಆದರೆ ಯಾವುದೋ ಕಾರಣಕ್ಕೆ ಆ ಕಾಯ್ದೆಯನ್ನು ಜಾರಿ ಮಾಡಲೇ ಇಲ್ಲ. ಆದರೂ ವೈದ್ಯರ ಮೇಲೆ ಹಲ್ಲೆಗಳು ನಿಂತಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರ ತಪ್ಪು ಇರಲ್ಲ. ಸುಮ್ಮನೆ ಜನತೆ ನಾನಾ ಆಪಾದನೆ ಮಾಡಿ ಹಲ್ಲೆ, ದೌರ್ಜನ್ಯ ಮಾಡುವಂತ ಪ್ರಕರಣ ಎಲ್ಲೆಡೆ ಕಾಣಲಾಗುತ್ತಿದೆ. ಮೊದಲು ವೈದ್ಯರಿಗೆ ರಕ್ಷಣೆ ಸಿಗಬೇಕಿದೆ ಎಂದರಲ್ಲದೇ, ದೇಶದಲ್ಲಿ ಇಂಜನಿಯರ್‌ಗಳು ಸೇತುವೆ ಕಟ್ಟುವ ವೇಳೆ ಸೇತುವೆ ಬಿದ್ದರೆ ಇಂಜನಿಯರ್ ಮೇಲೆ ಹಲ್ಲೆ ಮಾಡಿದ ಉದಾಹರಣೆಯಿಲ್ಲ. ಆದರೆ ಸೇವೆ ಕೊಡುವ ವೈದ್ಯರ ಮೇಲೆ ಹೆಚ್ಚು ಹಲ್ಲೆಯಾಗುತ್ತಿವೆ ಎನ್ನುವ ಮಾತುಗಳು ವೈದ್ಯರುಗಳಿಂದ ಕೇಳಿ ಬಂದವು.
ಒಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಘವು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಬಂದ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಲ್ಲದೇ, ಹೊರ ರೋಗಿಗಳ ಚಿಕಿತ್ಸಾ ಸೇವೆ ಬಂದ್ ಮಾಡಿತ್ತು.
ಆದರೆ ರೋಗಿಗಳು ಮಾತ್ರ ಚಿಕಿತ್ಸೆ ಇಲ್ಲದೆ ಸರ್ಕಾರಿ ಆಸ್ಪತ್ರೆಗಳಿಗೆ ಅಲೆದಾಡಿದ್ದು ತಪ್ಪಲಿಲ್ಲ. ಸರ್ಕಾರಿ ಆಸ್ಪತ್ರೆಗಳು ಜನಜಂಗುಳಿಯಿಂದ ತುಂಬಿಕೊಂಡಿದ್ದವು.