ಮೈಸೂರು: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರಕ್ಕೆ ಮೈಸೂರಿನಲ್ಲಿ ಬೆಂಬಲ ವ್ಯಕ್ತವಾಯಿತು.
ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿರುವುದರಿಂದ, ಸದಾ ರೋಗಿಗಳ ದಟ್ಟಣೆ ಹೆಚ್ಚಿರುವ ಮೈಸೂರಿನ ದೊಡ್ಡಾಸ್ಪತ್ರೆ ಎನಿಸಿರುವ ಕೆ.ಆರ್.ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಿತ್ತು. ಕೆ.ಆರ್.ಆಸ್ಪತ್ರೆಯ ಕಿರಿಯ ವೈದ್ಯರು ಮುಷ್ಕರ ಬೆಂಬಲಿಸಿ ಸೇವೆಯಿಂದ ಹೊರಗುಳಿದು, ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಷ್ಕರ ನಿರತ ಕಿರಿಯ ವೈದ್ಯರು, ಭಾರತದಲ್ಲಿ ವೈದ್ಯರು ಕಡಿಮೆ ಸವಲತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ತಮ್ಮ ಶಕ್ತಿಮೀರಿ ಕರ್ತವ್ಯ ನಿರ್ವಹಿಸಬೇಕಾದ ಕೆಲಸದ ಒತ್ತಡದಿಂದ ವೈದ್ಯರು ಬೇಸತ್ತು ಹೋಗಿದ್ದಾರೆ.
ಕಾರ್ಯಕ್ಷೇತ್ರದಲ್ಲಿ ಇಷ್ಟೆಲ್ಲಾ ತೊಂದರೆಗಳಿದ್ದರೂ ಸೂಕ್ತ ಭದ್ರತೆ ಮತ್ತು ಸವಲತ್ತುಗಳ ಕೊರತೆಯಿಂದಾಗಿ ಅಸುರಕ್ಷಿತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವೈದ್ಯರು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಕೋರಿದರು.
ಡಾ.ಸೌಮ್ಯಾ, ಡಾ.ಲೋಹಿತ್, ಡಾ.ನವೀನ್, ಡಾ.ಶ್ರೀಧರ್ ಸೇರಿದಂತೆ ನೂರಾರು ಮಂದಿ ಕಿರಿಯ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಿರಿಯ ವೈದ್ಯರು ಮುಷ್ಕರ ನಿರತರಾಗಿದ್ದ ಹಿನ್ನೆಲೆಯಲ್ಲಿ ಹೊರ ರೋಗಿಗಳಿಗೆ ತೊಂದರೆಯಾಗದಂತೆ ಕೆ.ಆರ್.ಆಸ್ಪತ್ರೆಯ ಹಿರಿಯ ವೈದ್ಯರು ಮತ್ತು ಮೈಸೂರು ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರು, ಮೈಸೂರು ನಗರ ಸೇರಿದಂತೆ ದೂರದ ಊರುಗಳಿಂದ ಬಂದಿದ್ದ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಮುಷ್ಕರ ಬೆಂಬಲಿಸಿ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿದ್ದರೂ ಒಳ ರೋಗಿಗಳ ವಿಭಾಗದಲ್ಲಿ ಸೇವೆ ಎಂದಿನಂತಿತ್ತು. ಔಷಧಾಲಯ, ಹೆರಿಗೆ ಮತ್ತು ಡಯಾಲಿಸೀಸ್ ವಿಭಾಗದ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.
ಆದರೆ, ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿನ ಹೊರ ರೋಗಿಗಳ ವಿಭಾಗದ ಜೊತೆಗೆ ಕ್ಲಿನಿಕ್‌ಗಳು, ಪ್ರಯೋಗಾಲಯಗಳು ಬಂದ್ ಆಗಿದ್ದರಿಂದ ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಹೆಚ್ಚಿತ್ತು.