Advertisement

ವೈದ್ಯರು, ನಿವೃತ್ತ ಪ್ರಾಂಶುಪಾಲರು ಇಲ್ಲಿ ವಿದ್ಯಾರ್ಥಿಗಳು!

01:56 AM Feb 11, 2020 | mahesh |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಮತ್ತು ಕೊಂಕಣಿ ಸ್ನಾತಕೋತ್ತರ ಪದವಿ ಕಲಿಕೆಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದ್ದು, ನಿವೃತ್ತ ಪ್ರಾಂಶುಪಾಲರು, ಬ್ಯಾಂಕ್‌ ಮ್ಯಾನೇಜರ್‌ಗಳು ವಿದ್ಯಾರ್ಥಿಗಳಾಗಿರುವುದು ವಿಶೇಷ. ಅಷ್ಟೇ ಅಲ್ಲ, ವೃತ್ತಿಯಲ್ಲಿರುವ ವೈದ್ಯರು, ಮಿಸೆಸ್‌ ಇಂಡಿಯಾ ರೂಪದರ್ಶಿಯಾಗಿರುವ ಯುವ ಸಮುದಾಯದವರು ಕೂಡ ಇದೀಗ ತುಳು ಎಂಎ ತರಗತಿ ವಿದ್ಯಾರ್ಥಿಗಳಾಗಿ ಗಮನಸೆಳೆಯುತ್ತಿದ್ದಾರೆ.

Advertisement

ಹಂಪನಕಟ್ಟೆಯಲ್ಲಿರುವ ವಿ.ವಿ. ಕಾಲೇಜು ಕ್ಯಾಂಪಸ್‌ನ ಸಂಧ್ಯಾ ಕಾಲೇಜಿನಲ್ಲಿ 2018-19ನೇ ಸಾಲಿನಲ್ಲಿ ಆರಂಭಗೊಂಡಿರುವ ತುಳು ಎಂಎ ಪ್ರಥಮ ವರ್ಷದಲ್ಲಿ 20 ಹಾಗೂ ದ್ವಿತೀಯ ವರ್ಷದಲ್ಲಿ 16 ವಿದ್ಯಾರ್ಥಿಗಳಿದ್ದಾರೆ. 2016-17ರಲ್ಲಿ ಆರಂಭಗೊಂಡಿರುವ ಕೊಂಕಣಿ ಎಂಎ ಪ್ರಥಮ ವರ್ಷದಲ್ಲಿ 10 ಮತ್ತು ದ್ವಿತೀಯ ವರ್ಷದಲ್ಲಿ 8 ವಿದ್ಯಾರ್ಥಿಗಳಿದ್ದಾರೆ.

ತುಳು ಎಂಎ ತರಗತಿಗಳಲ್ಲಿ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌, ಇಬ್ಬರು ಆಕಾಶವಾಣಿ ಉದ್ಘೋಷಕರು ಕೂಡ ಇದ್ದಾರೆ. “ಮಿಸೆಸ್‌ ಇಂಡಿಯಾ ಟಾಪ್‌ ಮಾಡೆಲ್‌ 2019’ರ ವಿಜೇತೆ ಸುಧೀಕ್ಷಾ ಪ್ರಥಮ ವರ್ಷದ ಎಂಎ ವಿದ್ಯಾರ್ಥಿನಿ. ಅಕಾಡೆಮಿ ಸದಸ್ಯೆ ವಿಜಯಲಕ್ಷ್ಮೀ ರೈ ಕೂಡ ಪ್ರಥಮ ವರ್ಷದಲ್ಲಿ ಕಲಿಯುತ್ತಿದ್ದಾರೆ. ತುಳು ಅಕಾಡೆಮಿಯ ಮಾಜಿ ಸದಸ್ಯ, 73 ವರ್ಷ ವಯಸ್ಸಿನ ಶಿವಾನಂದ ಕರ್ಕೇರ, ನಿವೃತ್ತ ಪ್ರಾಂಶುಪಾಲ ಸುಭಾಶ್ಚಂದ್ರ ಕಣ್ವತೀರ್ಥ ಅವರು ತುಳು ಎಂಎ ದ್ವಿತೀಯ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ. ಬಿಡಿಎಸ್‌, ಎಂಡಿಎಂಸ್‌ ಮಾಡಿರುವ ಡಾ| ಪ್ರಶಾಂತ್‌ ಕಲ್ಲಡ್ಕ ಅವರು ಕೂಡ ತುಳು ದ್ವಿತೀಯ ಎಂಎ ವಿದ್ಯಾರ್ಥಿ.
ಕೊಂಕಣಿ ಎಂಎ ತರಗತಿಯಲ್ಲಿ ಒಬ್ಬರು ವೈದ್ಯರು, ಬ್ಯಾಂಕ್‌ ಅಧಿಕಾರಿಗಳು ಇದ್ದಾರೆ.

ತರಗತಿ ತಪ್ಪಿಸುವುದಿಲ್ಲ
ಪ್ರಥಮ ವರ್ಷದಲ್ಲಿ ಈಗ ತಾನೆ ಪದವಿ ಮುಗಿಸಿ ಬಂದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ದ್ವಿತೀಯ ವರ್ಷದಲ್ಲಿ ನಿವೃತ್ತರು, ಹಿರಿಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಭಿನ್ನ ಕ್ಷೇತ್ರಗಳಲ್ಲಿ ಹೆಸರು ಗಳಿಸಿರುವ ಇವರು ತರಗತಿಗಳಿಗೆ ತಪ್ಪದೆ ಹಾಜರಾಗುತ್ತಾರೆ. ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
-ಶ್ಯಾಮ್‌ ಪ್ರಸಾದ್‌, ಉಪನ್ಯಾಸಕರು, ತುಳು ಎಂ.ಎ.

ಗಂಭೀರ ಅಧ್ಯಯನ
ಮಿಕ್ಸ್‌ಡ್‌ ಗ್ರೂಪ್‌ನಂತಿರುವ ವಿಶಿಷ್ಟ ತರಗತಿಗಳು ಇಲ್ಲಿವೆ. ಅನೇಕ ಮಂದಿ ನಿವೃತ್ತರು ಕೂಡ ಎಂಎ ಓದಲು ಉತ್ಸಾಹ ತೋರಿಸಿದ್ದಾರೆ. ಆದರೆ ಇವರೆಲ್ಲರೂ ಗಂಭೀರವಾಗಿ ಅಧ್ಯಯನ ಮಾಡುತ್ತಿದ್ದಾರೆ.
– ಡಾ| ರಾಮಕೃಷ್ಣ ಬಿ.ಎಂ., ಪ್ರಾಂಶುಪಾಲರು

Advertisement

8 ಕಾಲೇಜುಗಳಲ್ಲಿ ತುಳುಭಾಷೆ
ತುಳು ಎಂಎ ಸಮಗ್ರ ಅಧ್ಯಯನದ ಕೋರ್ಸ್‌. ಇದನ್ನು ಪೂರೈಸಿದವರಿಗೆ ಹಲವು ರೀತಿಯ ಅವಕಾಶಗಳಿವೆ. ಈಗಾಗಲೇ 8 ಕಾಲೇಜುಗಳಲ್ಲಿ ತುಳು ಭಾಷೆ ಇದೆ. ಉಪನ್ಯಾಸಕರಾಗಿ, ಸಂಶೋಧಕರಾಗಿ, ಅಧ್ಯಯನ ಕೇಂದ್ರಗಳಲ್ಲಿ, ಭಾಷಾಂತರಕಾರರಾಗಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುವ ಅವಕಾಶವಿದೆ. ಗರಿಷ್ಠ ಸೇರ್ಪಡೆಯ ಸಂಖ್ಯೆ 20. ಅದು ಭರ್ತಿಯಾಗಿದೆ. ಇನ್ನೂ ಹಲವು ಮಂದಿಯಿಂದ ಬೇಡಿಕೆ ಇತ್ತು.
– ಡಾ| ಮಾಧವ, ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕರು

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next