ಬೆಳಗಾವಿ: ದೇವರ ತೀರ್ಥ ಸೇವಿಸುವ ವೇಳೆ ಲೋಹದ ಕೃಷ್ಣನನ್ನು ನುಂಗಿದ್ದ 45 ವರ್ಷದ ವ್ಯಕ್ತಿಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಕೃಷ್ಣನನ್ನು ಹೊರ ತೆಗೆಯಲಾಗಿದೆ.
ದೇವರ ತೀರ್ಥ ಸೇವನೆ ಮಾಡುವ ಅಭ್ಯಾಸ ಹೊಂದಿದ್ದ ವ್ಯಕ್ತಿ ಅದನ್ನು ಗಮನಿಸದೇ ಲೋಹದ ಕೃಷ್ಣನನ್ನು ನುಂಗಿದ್ದನು. ಇದರಿಂದ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿ ಸ್ಥಳಿಯ ವೈದ್ಯರನ್ನು ಚಿಕಿತ್ಸೆಗಾಗಿ ಸಂಪರ್ಕಿಸಿದ್ದಾರೆ. ಆಗ ಸ್ಥಳಿಯ ವೈದ್ಯರು ಎಕ್ಸರೇ ಮಾಡಿಸಲು ಸೂಚಿಸಿದ್ದಾರೆ. ಎಕ್ಸರೇ ರಿಪೋರ್ಟ್‌ನಲ್ಲಿ ಕೃಷ್ಣ ವಿಗ್ರಹ ಗಂಟಲಿನಲ್ಲಿ ಇರುವುದು ಸೆರೆಯಾಗಿದೆ.
ಹೆಚ್ಚಿನ ಚಿಕಿತ್ಸೆ ಪಡೆಯಲು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೃಷ್ಣನ ಮೂರ್ತಿಯ ಎಡಗಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿದೆ ಎಂಬುದನ್ನು ಎಂಡೋಸ್ಕೋಪ್ ಮೂಲಕ ದೃಢಪಡಿಸಿಕೊಂಡು ಇಎನ್‌ಟಿ ವಿಭಾಗದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ವಿಗ್ರಹ ಹೊರ ತೆಗೆದಿದ್ದಾರೆ.
ಇಎನ್‌ಟಿ ವಿಭಾಗದ ವೈದ್ಯರಾದ ಡಾ| ಪ್ರೀತಿ ಹಜಾರೆ, ಡಾ| ವಿನಿತಾ ಮೆಡಗುಡ್ಡಮಠ, ಅರವಳಿಕೆ ತಜ್ಞ ಡಾ| ಚೈತನ್ಯ ಕಾಮತ್ ಸೇರಿ ಇತರ ಶುಶ್ರೂಷಕರ ಸಹಾಯದಿಂದ ರೋಗಿಯ ಗಂಟಲಿನಲ್ಲಿರುವ ಕೃಷ್ಣನ ವಿಗ್ರಹವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಸ್ತ್ರ ಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ, ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ|ಎಂ.ವಿ. ಜಾಲಿ ಅಭಿನಂದಿಸಿದ್ದಾರೆ.