ಬೆಂಗಳೂರು: ಒಕ್ಕಲಿಗರ ಸಂಘದ ಆಡಳಿತ ಮಂಡಳಿಯ ಅನಗತ್ಯ ನೇಮಕ ವಿರುದ್ಧ ಎಂಟು ದಿನಗಳಿಂದ ಧರಣಿ ನಡೆಸುತ್ತಿದ್ದ ಕಾಯಂ ವೈದ್ಯರು, ಅರೆವೈದ್ಯ, ತಾಂತ್ರಿಕ ಸಿಬ್ಬಂದಿ ಹೋರಾಟದ ತೀವ್ರತೆಯನ್ನು ಸಡಿಲಿಸಿದ್ದು, ಅರೆಕಾಲಿಕ ಸೇವೆ ನೀಡಲಾರಂಭಿಸಿದ್ದಾರೆ.
ಒಕ್ಕಲಿಗರ ಸಂಘದ ಆಡಳಿತ ಮಂಡಳಿಯ ಭರವಸೆ ಹಿನ್ನೆಲೆಯಲ್ಲಿ ಜೂ.21ರವರೆಗೆ ಹೋರಾಟದ ತೀವ್ರತೆಯನ್ನು ಸಡಿಲಿಸಿರುವ ಕಾಯಂ ನೌಕರರು, ನಿತ್ಯ ಮಧ್ಯಾಹ್ನ 1 ಗಂಟೆವರೆಗೆ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ.
ಒಕ್ಕಲಿಗರ ಸಂಘದ ಆಶ್ರಯದಲ್ಲಿರುವ 18 ಸಂಸ್ಥೆಗಳಲ್ಲಿ ನಿಯಮ ಬಾಹಿರವಾಗಿ ಅನಗತ್ಯ ಸಿಬ್ಬಂದಿ ನೇಮಕ ನಡೆದಿದೆ ಎಂದು ಆರೋಪಿಸಿ 2,500ಕ್ಕೂ ಹೆಚ್ಚು ಕಾಯಂ ವೈದ್ಯರು, ಅರೆವೈದ್ಯ ಸಿಬ್ಬಂದಿ, ತಾಂತ್ರಿಕ ನೌಕರರು ಎಂಟು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರು. ದಿನ ಕಳೆದಂತೆ ಹೋರಾಟ ತೀವ್ರಗೊಳಿಸಿದ್ದ ನೌಕರರು ಹೊರರೋಗಿ ವಿಭಾಗದ ಸೇವೆಯನ್ನು ಸ್ಥಗಿತಗೊಳಿಸಿದ್ದರು. ನಂತರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಒಕ್ಕಲಿಗರ ಸಂಘದ ಆಡಳಿತ ಮಂಡಳಿಯು ಪ್ರತಿಭಟನಾನಿರತ ಕಾರ್ಮಿಕರೊಂದಿಗೆ ಸೋಮವಾರ ಸಭೆ ನಡೆಸಿ ಅನಗತ್ಯ ನೇಮಕಾತಿಯನ್ನು ಜೂ. 21ರಂದು ರದ್ದುಪಡಿಸುವುದಾಗಿ ಭರವಸೆ ನೀಡಿತು. ಇದಕ್ಕೆ ಸಂಪೂರ್ಣ ಒಪ್ಪದ ಕಾರ್ಮಿಕರು ಜೂ.21ರವರೆಗೆ ನಿತ್ಯ ಮಧ್ಯಾಹ್ನ 1 ಗಂಟೆವರೆಗೆ ಕಾರ್ಯ ನಿರ್ವಹಿಸಿ ನಂತರ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿವೆ.
ಆಡಳಿತ ಮಂಡಳಿಯು ಅನಗತ್ಯ ನೇಮಕ ರದ್ದುಪಡಿಸಲು ಜೂ. 21ರವರೆಗೆ ಕಾಲಾವಕಾಶ ಕೋರಿದೆ. ಅಲ್ಲಿಯವರೆಗೆ ನಿತ್ಯ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಕಾರ್ಯ ನಿರ್ವಹಿಸಲಾಗುವುದು. ನಂತರ ಧರಣಿ ಮುಂದುವರಿಸಲಾಗುವುದು. ಜೂ.21ರಂದು ರದ್ದುಪಡಿಸಿದರೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆಗೆ ಮರಳುತ್ತೇವೆ. ಒಂದೊಮ್ಮೆ ಸ್ಪಂದಿಸದೆ ಮಾತಿಗೆ ತಪ್ಪಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾನಿರತರು ಹೇಳಿದ್ದಾರೆ.