Advertisement

ಇಂದಿನಿಂದ ನಗರದಲ್ಲಿ ವೈದ್ಯರ ಪ್ರತಿಭಟನೆ

10:19 AM Nov 16, 2017 | Team Udayavani |

ಬೆಂಗಳೂರು: ನಿಮಗೆ, ಶೀತ, ಜ್ವರ, ಕೆಮ್ಮು, ತೀವ್ರ ತಲೆ ನೋವು, ಬೆನ್ನು ನೋವಿನಂಥ ಯಾವುದೇ ಸಮಸ್ಯೆ ಕಾಣಿಸಿಕೊಂಡರೆ ಇಂದು ಯಾವುದೇ ಖಾಸಗಿ ಆಸ್ಪತ್ರೆ ಬಾಗಿಲಿಗೆ ಹೋಗಬೇಡಿ. ಕಾರಣ, ನಗರದ ಖಾಸಗಿ ಆಸ್ಪತ್ರೆಗಳ 20 ಸಾವಿರಕ್ಕೂ ಅಧಿಕ ವೈದ್ಯರು ಇಂದಿನಿಂದ ಪ್ರತಿಭಟನೆ ಆರಂಭಿಸಿದ್ದಾರೆ.

Advertisement

ಈ ಪ್ರತಿಭಟನೆ ನಿಲ್ಲಬೇಕೆಂದರೆ ಸರ್ಕಾರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ (ಕೆಪಿಎಂಇ) ತಿದ್ದುಪಡಿ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವೇ ಖಾಸಗಿ ವೈದ್ಯರು “ಸರಿ ತಿದ್ದುಪಡಿ ಜಾರಿ ಮಾಡಿ’ ಎಂದು ಸುಮ್ಮನಾಗಬೇಕು. ಆದರೆ ಸದ್ಯದ ಮಟ್ಟಿಗೆ ಈ ಎರಡೂ ಬಣಗಳು ಬಗ್ಗುವ ಸಾಧ್ಯತೆ ಕಡಿಮೆ ಹೀಗಾಗಿ ಇನ್ನೂ ಅದೆಷ್ಟು ದಿನಗಳ ಕಾಲ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸೇವೆ ಸ್ಥಗಿತವಾಗುತ್ತದೋ ಗೊತ್ತಿಲ್ಲ. ಈ ನಡುವೆ ಸರ್ಕಾರಿ ಆಸ್ಪತ್ರೆ ವೈದ್ಯರು ಯಾವುದೇ ಕಾರಣಕ್ಕೂ ರಜೆ ಹಾಕಬಾರದು, ಜತೆಗೆ ಆಸ್ಪತ್ರೆಯಲ್ಲಿ ಹಾಜರಿರಬೇಕು ಎಂದು ಸರ್ಕಾರ ಆದೇಶಿಸಿದೆ. ಹೀಗಾಗಿ ಸಾರ್ವಜನಿಕರು ಹತ್ತಿರದ ಸರ್ಕಾರಿ, ಮಹಾನಗರ ಪಾಲಿಕೆ ಆಸ್ಪತ್ರೆ, ಪ್ರಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವುದು ಒಳಿತು.

ನಗರ ಶಾಖೆಯ ಬೆಂಬಲ: ಕೆಪಿಎಂಇ ತಿದ್ದುಪಡಿ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ವತಿಯಿಂದ ಬೆಳಗಾವಿಯಲ್ಲಿ ಈಗಾಗಲೇ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಸಂಬಂಧ ಬೆಂಗಳೂರು ಶಾಖೆಯ ವೈದ್ಯರು ಹಾಗೂ 30ಕ್ಕೂ ಅಧಿಕ ವೈದ್ಯಕೀಯ ಸಂಸ್ಥೆಗಳು ಬುಧವಾರ ಸಭೆ ನಡೆಸಿ, ಪ್ರತಿಭಟನೆಗೆ ಪೂರ್ಣ ಪ್ರಮಾಣದ ಬೆಂಬಲ ಸೂಚಿಸಲು ನಿರ್ಧರಿಸಿವೆ. ಸರ್ಕಾರ ತಿದ್ದುಪಡಿ ವಿಧೇಯಕ ಹಿಂಪಡೆಯುವವರೆಗೂ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗವನ್ನು ಅನಿರ್ಧಿಷ್ಟಾವಧಿಗೆ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ.

ಮರಣ ಶಾಸನವಾಗಲಿದೆ: ನಗರದ ಹೋಟೆಲೊಂದರಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಎಂಇ ಸಂಘದ ನಿಯೋಜಿತ ಅಧ್ಯಕ್ಷ ಡಾ.ಜಯಣ್ಣ, “ರಾಜ್ಯ ಸರ್ಕಾರ ವೈದ್ಯರನ್ನು ರಾಕ್ಷಸರ ರೀತಿಯಲ್ಲಿ ಬಿಂಬಿಸುತ್ತಿದೆ. ಕೆಪಿಎಂಇ ಕಾಯ್ದೆ ತಿದ್ದುಪಡಿ ಕರಾಳ ಶಾಸನವಲ್ಲ, ಅದು ಮರಣ ಶಾಸನವಾಗಲಿದೆ. ರಾಜ್ಯದ 6.30 ಕೋಟಿ ಜನರಿಗೆ ಇದರಿಂದ ಸಮಸ್ಯೆಯಾಗುತ್ತದೆ. ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಬಂದಲ್ಲಿ ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆಗಳು ಮುಚ್ಚಲಿವೆ. ಯಾರೋ ಕೆಲವರು ಮಾಡುವ ತಪ್ಪಿಗೆ ಎಲ್ಲರನ್ನೂ ಕೆಟ್ಟವರಂತೆ ನೋಡುವುದು ಸರಿಯಲ್ಲ,’ ಎಂದು ಹೇಳಿದರು.

ಶೇ.78 ರಷ್ಟು ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಖಾಸಗಿ ವೈದ್ಯರ ಮೇಲೆ ಸರ್ಕಾರ ಸವಾರಿ ಮಾಡುತ್ತಿದೆ. ತಿದ್ದುಪಡಿ ಕಾಯ್ದೆ ಮಂಡಿಸದಂತೆ ಮುಖ್ಯಮಂತ್ರಿ ಸಹಿಸತವಾಗಿ ಆರೋಗ್ಯ ಸಚಿವರಲ್ಲಿ ಅನೇಕ ಬಾರಿ ಮನವಿ
ಮಾಡಿದ್ದೇವೆ. ನಮ್ಮ ಯಾವ ಮನವಿಗೂ ಸರ್ಕಾರ ಸ್ಪಂದಿಸಿಲ್ಲ. ಐಎಂಎ ರಾಜ್ಯ ಘಟಕ ನಡೆಸುತ್ತಿರುವ ಹೋರಾಟಕ್ಕೆ ಬೆಂಗಳೂರು ಘಟಕದಿಂದ ಪೂರ್ಣ ಬೆಂಬಲ ನೀಡಲಾಗಿದೆ. ನ.16ರಿಂದ ಬೆಂಗಳೂರಿನ 600 ಆಸ್ಪತ್ರೆ, ಕ್ಲಿನಿಕ್‌ ಹಾಗೂ ನರ್ಸಿಂಗ್‌ ಹೋಮ್‌ ಗಳ ಒಪಿಡಿ ಸೇವೆ ಸ್ಥಗಿತಗೊಳ್ಳಲಿದೆ. ಸುಮಾರು 22 ಸಾವಿರ ವೈದ್ಯರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದರು.

Advertisement

ಸಾವಿಗೆ ಸರ್ಕಾರವೇ ಹೊಣೆ: “ರಾಜ್ಯದಲ್ಲಿ ಕಳೆದ ಎರಡು ದಿನ ಹತ್ತಾರು ಮಂದಿ ಮರಣ ಹೊಂದಿರುವುದು ವೈದ್ಯಕೀಯ ಸೇವೆ ಇಲ್ಲದ ಕಾರಣದಿಂದಲ್ಲ, ಸರ್ಕಾರದ ಬೇಜಾವಾಬ್ದಾರಿಯಿಂದ,’ ಎಂದು ಡಾ.ಜಯಣ್ಣ ಆರೋಪಿಸಿದ್ದಾರೆ. “ಸರ್ಕಾರ ಮತ್ತು ಆರೋಗ್ಯ ಸಚಿವರ ಹಠದಿಂದ ಸಮಸ್ಯೆ ಉಲ್ಬಣಿಸಿದೆ . ಸಾರ್ವಜನಿಕರನ್ನು ಸಮಸ್ಯೆಗೆ ಸಿಲುಕಿಸುವ ಯಾವ ದುರುದ್ದೇಶವೂ ಖಾಸಗಿ ವೈದ್ಯರಿಗಿಲ್ಲ. ನಮಗೇ ಜೀವ ಭಯ ಇರುವಾಗ ನಾವು ಇನ್ನೊಬ್ಬರ ಜೀವ ಉಳಿಸಲು ಸಾಧ್ಯವಿಲ್ಲ. ಜಿಲ್ಲಾ ಮಟ್ಟದಲ್ಲೂ ಎಲ್ಲ ಸಚಿವರು, ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುವವರಗೂ ಹೋರಾಟ ನಡೆಯುತ್ತದೆ,’ ಎಂದು ಅವರು ಎಚ್ಚರಿಸಿದ್ದಾರೆ.

ರಾಜಕಾರಣಿಗಳ ವಿರುದ್ಧ ಕ್ರಮ?
“ರಾಜ್ಯ ಸರ್ಕಾರ, ಸರ್ಕಾರಿ ಆಸ್ಪತ್ರೆಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಿ, ಜನರಿಗೆ ಸಮರ್ಪಕ ಸೇವೆ ನೀಡಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ಜನರೇ ಬರುತ್ತಿರಲಿಲ್ಲ. ಕಾಯ್ದೆಯ ತಿದ್ದುಪಡಿ ಮೂಲಕ ಖಾಸಗಿ ಆಸ್ಪತ್ರೆಗಳ ಹೋರಾಟಕ್ಕೆ ಸರ್ಕಾರವೇ ಪ್ರೇರೇಪಿಸಿದೆ. ಖಾಸಗಿ ವೈದ್ಯರು ಯಾವ ತಪ್ಪಿಗೆ 5 ಲಕ್ಷ ದಂಡ ಕಟ್ಟಬೇಕು? ಎಲ್ಲ ಕ್ಷೇತ್ರದಲ್ಲೂ ಕೆಟ್ಟವರು ಇರುತ್ತಾರೆ. ರಾಜಕಾರಣಿಗಳಲ್ಲಿ ಭ್ರಷ್ಟರಿಲ್ಲವೇ? ಹಾಗಂತ ಎಲ್ಲ ರಾಜಕಾರಣಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವೇ? ಶೇಕಡ ಒಂದೆರಡು ಪ್ರಮಾಣದ ವೈದ್ಯರು ಮಾಡುವ ತಪ್ಪಿಗೆ ಎಲ್ಲರಿಗೂ ಶಿಕ್ಷೆ ನೀಡುವುದು ಸರಿಯಲ್ಲ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು,’ ಎಂದು ಡಾ.ಮದನ್‌ ಹೇಳಿದರು.

ಶೀತ, ಜ್ವರಕ್ಕೂ ಚಿಕಿತ್ಸೆ ಇರೋಲ್ಲ: ಪ್ರತಿಭಟನೆಯಿಂದಾಗಿ ನಗರದ 600 ಆಸ್ಪತ್ರೆ, ಕ್ಲಿನಿಕ್‌ ಹಾಗೂ ನರ್ಸಿಂಗ್‌ ಹೋಮ್‌ಗಳಲ್ಲಿನ ಒಪಿಡಿ ಸೇವೆ ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳ್ಳಲಿದೆ. ಈ ವೇಳೆ ಜ್ವರ, ಶೀತ, ಕೆಮ್ಮು ಸೇರಿದಂತೆ ದಿಢೀರ್‌ ಅಸ್ಪಸ್ಥತೆಗೆ ಸಂಬಂಧಿಸಿದ ಚಿಕಿತ್ಸೆ, ಕನ್ಸಲ್ಟೇಷನ್‌ ಸೇರಿ ಯಾವುದೇ ರೀತಿಯ ಸೇವೆ ನೀಡುವುದಿಲ್ಲ. ಎಲೆಕ್ಟ್ರೀವ್‌ ಸರ್ಜರಿ ಇರುವುದಿಲ್ಲ. ಒಳರೋಗಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕ್ಯಾನ್ಸರ್‌ ಚಿಕಿತ್ಸೆ, ತುರ್ತು ಸೇವಾ ವಿಭಾಗ ಎಂದಿನಂತೆ ತೆರೆದಿರುತ್ತದೆ. “ತಿದ್ದುಪಡಿ ಕಾಯ್ದೆಗೆ ಸಂಘದಿಂದ ಆಕ್ಷೇಪಿಸಿರುವ 4 ಪ್ರಮುಖ ಅಂಶಗಳನ್ನು ಸರ್ಕಾರ ಕೈಬಿಡುವವರೆಗೂ ಒಪಿಡಿ ಸೇವೆ ರದ್ದು ಮಾಡಲಿದ್ದೇವೆ,’ ಎಂದು ಡಾ.ಜಯಣ್ಣ ತಿಳಿಸಿದ್ದಾರೆ.

ಮತ ಕಬಳಿಸಲು ತಿದ್ದುಪಡಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂಬರುವ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಜನರನ್ನು ಭಾವನಾತ್ಮಕವಾಗಿ ಒಡೆದು ಮತ ಪಡೆಯಲು ಯತ್ನಿಸುತ್ತಿದ್ದೆ. ನಿವೃತ್ತ ನ್ಯಾ. ವಿಕ್ರಮ್‌ಜಿತ್‌ ಸೇನ್‌ ಅವರ ವರದಿಯ ಅನುಷ್ಠಾನ ಸಾಧ್ಯವಿಲ್ಲ. ಕೆಪಿಎಂಇ ವಿಧೇಯಕ ತಿದ್ದುಪಡಿಯನ್ನು ಅನುಷ್ಠಾನ ಮಾಡುತ್ತಿರುವುದು ಜನರ ವೋಟು ಪಡೆಯಲಿಕ್ಕಾಗಿ,’ ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರೇ ನಮ್ಮ ಬಳಿ ಹೇಳಿಕೊಂಡಿದ್ದಾರೆ’ ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಮ್‌ಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ರವೀಂದ್ರ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next