Advertisement

ವೈದ್ಯ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ

11:46 AM Dec 23, 2018 | Team Udayavani |

ಬಳ್ಳಾರಿ: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಜಾರಿಗೆ ತರುವ ಪ್ರಸ್ತಾಪವನ್ನು ವಿರೋಧಿಸಿ ಹಾಗೂ ಶುಲ್ಕ ಹೆಚ್ಚಳವನ್ನು ಖಂಡಿಸಿ ಎಐಡಿಎಸ್‌ಒ ಸಂಘಟನೆಯು ವಿದ್ಯಾರ್ಥಿಗಳ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.

Advertisement

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ (ಅನಿವಾಸಿ ಭಾರತೀಯರ ಕೋಟಾ) ಜಾರಿಗೆ ತರುವ ಹಾಗೂ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ಶೇ.300 ಶುಲ್ಕ ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಪ್ರಸ್ತಾವನೆ ರೂಪಿಸಿದೆ. ಪದವಿ ಕೋರ್ಸ್‌ಗಳ ಶುಲ್ಕವನ್ನು 17 ಸಾವಿರದಿಂದ 50 ಸಾವಿರವರೆಗೆ ಈಗಾಗಲೇ ಏರಿಸಲಾಗಿದೆ. ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕಗಳನ್ನು 3.5ಲಕ್ಷಕ್ಕೆ ಏರಿಸುವ ಪ್ರಸ್ತಾಪವಿದೆ. ಸರ್ಕಾರದ ಈ ನಿಲುವು ನಿಜಕ್ಕೂ ವೈದ್ಯರಲ್ಲಿ, ವಿದ್ಯಾರ್ಥಿ, ಪೋಷಕರು ಹಾಗೂ ಜನಸಾಮಾನ್ಯರಲ್ಲೂ ದೊಡ್ಡ ಆಘಾತ ಮೂಡಿಸಿದೆ. ಖಾಸಗಿ ಕಾಲೇಜುಗಳಲ್ಲೂ ಎನ್‌ಆರ್‌ಐ ಕೋಟಾ ಜಾರಿಗೆ ತರುವುದು
ಸಂವಿಧಾನ ಬಾಹಿರ. ಇದ್ದಲ್ಲಿ ರಾಜ್ಯ ಸರ್ಕಾರ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.10ರಷ್ಟು ಎನ್‌ಆರ್‌ಐ ಕೋಟಾ ಜಾರಿ ಮಾಡುವ ಪ್ರಸ್ತಾಪಿಸಿರುವುದು ವೈದ್ಯಕೀಯ ಶಿಕ್ಷಣ ಇನ್ನಷ್ಟು ವ್ಯಾಪಾರೀಕರಣ-ಖಾಸಗೀಕ ರಣಗೊಳ್ಳಲಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.

ಈಗಾಗಲೇ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಕೈಗೆಟಕದಷ್ಟು ದುಬಾರಿಯಾಗಿದೆ. ಬಡ ವಿದ್ಯಾರ್ಥಿಗಳಿಗೆ
ಆಸರೆಯಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅದೆಷ್ಟೋ ಬಡ ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದಾರೆ. ಇನ್ನು ಬರುವ ದಿನಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಜಾರಿಯಾದರೆ, ಶುಲ್ಕಗಳು ದುಬಾರಿಯಾಗುತ್ತಾ ಹೋದರೆ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ. ಹಾಗಾಗಿ ಎನ್‌ಆರ್‌ಐ ಕೋಟಾ ಹಾಗೂ ಶುಲ್ಕಗಳನ್ನು ಹೆಚ್ಚಿಸುವ ಪ್ರಸ್ತಾಪವನ್ನು ಕೈಬಿಡಬೇಕು.

ಹೆಚ್ಚಿಸಿರುವ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಎಐಡಿಎಸ್‌ಒ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಪ್ರಮೋದ, ಜಿಲ್ಲಾಧ್ಯಕ್ಷ ಗೋವಿಂದ, ಜಿ.ಸುರೇಶ್‌, ವಿ.ಎನ್‌.ಜಗದೀಶ್‌ ಹಾಗೂ ಎಐಡಿಎಸ್‌ಒ ಜಿಲ್ಲಾ ಸಮಿತಿ ಸದಸ್ಯರು ಮತ್ತು ಮೆಡಿಕಲ್‌ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಫೆಲೋಶಿಪ್‌ಗ್ಳಿಗೆ ನೆಟ್‌ ಕಡ್ಡಾಯಸರಕಾರದ ನಿಯಮಕ್ಕೆ ವಿರೋಧ
ಹೊಸಪೇಟೆ: ಸಂಶೋಧನೆಗಾಗಿ ಯುಜಿಸಿ ಫೆಲೋಶಿಪ್‌ಗ್ಳಿಗೆ ನೆಟ್‌ ಕಡ್ಡಾಯ ಎಂಬ ಸರ್ಕಾರದ ನಿಯಮ ವಿರೋಧಿಸಿ ಕನ್ನಡ ವಿಶ್ವವಿದ್ಯಾಲಯದ ಬಯಲು ಚಿಂತನ ಸಂಶೋಧನಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Advertisement

ಕನ್ನಡ ವಿವಿ ತ್ರಿಪದಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಸಂಶೋಧನೆಗಾಗಿ ಯುಜಿಸಿ ನೀಡುವ ಫೆಲೋಶಿಪ್‌ಗ್ಳಿಗೆ ನೆಟ್‌ ಕಡ್ಡಾಯ ಎಂಬ ನಿಯಮ ಹಿಂಪಡೆಯಬೇಕು. ಯುಜಿಸಿ ಫೆಲೋಶಿಪ್‌ಗ್ಳನ್ನು ನಿಯಮದಂತೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. 

ಈಗಾಗಲೇ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ಮೌಲಾನಾ ಆಜಾದ್‌ ಫೆಲೋಷಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹತೆಯಾಗಿ ನೆಟ್‌ ಪರೀಕ್ಷೆ ಕಡ್ಡಾಯಗೊಳಿಸಿರುವುದು ಮತ್ತು ಪ್ರತಿ ನಾಲ್ಕು ವರ್ಷದಂತೆ ರಾಷ್ಟ್ರೀಯ ಶಿಷ್ಯವೇತನಗಳನ್ನು ಯುಜಿಸಿ ನಿಯಮದಂತೆ ಹೆಚ್ಚು ಮಾಡದಿರುವುದು ಅಧ್ಯಯನದ ಕುಂಠಿತಕ್ಕೆ ನೇರ ಕಾರಣವಾಗಿದೆ. ಇತ್ತೀಚೆಗೆ ರಾಜೀವ್‌ ಗಾಂಧಿ  ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ನೆಟ್‌ ಪರೀಕ್ಷೆ ಕಡ್ಡಾಯ ಮಾನದಂಡವಾಗಿ ಪರಿಗಣಿಸಿ ನಡಾವಳಿ ರೂಪಿಸಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾದೆ ಎಂದರು. 

ಈ ಹಿಂದೆ ಶಿಕ್ಷಣದ ಅಭಿವೃದ್ಧಿಗಾಗಿ ಕೊಠಾರಿ ಆಯೋಗವು ಶಿಫಾರಸು ಮಾಡಿರುವಂತೆ ಕೇಂದ್ರ ಸರ್ಕಾರ ಶೇ.10, ರಾಜ್ಯ ಸರ್ಕಾರ ಶೇ.30 ಹಾಗೂ ಜಿಡಿಪಿಯಲ್ಲಿ ಶೇ.06 ಹಣವನ್ನು ಮೀಸಲಿಡಲು ವರದಿ ಸಲ್ಲಿಸಿತ್ತು. ಆದರೆ ಈ ವರದಿ ಪ್ರಕಾರ ಜಾರಿಗೊಳ್ಳದೇ ಆಯಾ ಸರ್ಕಾರಗಳು ತಮ್ಮದೇ ನಿಲುವುಗಳನ್ನು ಅನುಸರಿಸರಿಸಿ ಶೈಕ್ಷಣಿಕ ವಿರೋಧಿ  ನೀತಿಗಳನ್ನು ಜಾರಿಮಾಡುವ ಮೂಲಕ ತಳಸಮುದಾಯಗಳ ವಿರೋಧಿ ನೀತಿಯನ್ನು ಮುಂದುವರಿಸಿವೆ. ಶೀಘ್ರವೇ ಯುಜಿಸಿ ನಿಯಮದಂತೆ ಶಿಷ್ಯವೇತನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next