ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಇತ್ತೀಚೆಗೆ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ರಾಜ್ಯಾ ದ್ಯಂತ ಮೂರು ದಿನಗಳಿಂದ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಗುರುವಾರ ಸಿಎಂ ಮಮತಾ ಬ್ಯಾನರ್ಜಿಯ ಶಿಸ್ತುಕ್ರಮ ಎಚ್ಚರಿಕೆಗೂ ಬಗ್ಗಲಿಲ್ಲ.
ಕೆಲವು ದಿನಗಳ ಹಿಂದೆ ಕೋಲ್ಕತಾದ ಎನ್‌ಆರ್‌ಎಸ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ನಡೆದು, ಕೆಲವು ವೈದ್ಯರಿಗೆ ಗಂಭೀರ ಗಾಯಗಳಾಗಿದ್ದವು. ಇದನ್ನು ಪ್ರತಿಭಟಿಸಿ ವೈದ್ಯರು ಮಂಗಳ ವಾರದಿಂದ ಪ್ರತಿಭಟನೆ ನಡೆಸುತ್ತಿ ದ್ದಾರೆ. ಗುರುವಾರ ಎಸ್‌ಎಸ್‌ಕೆಎಂ ಆಸ್ಪತ್ರೆಯ ಆವರಣಕ್ಕೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ 2 ಗಂಟೆಯೊಳಗೆ ಮುಷ್ಕರ ಸ್ಥಗಿತಗೊಳಿಸದಿದ್ದರೆ ಕಠಿನ ಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡಿದ್ದರು. ಆದರೆ ವೈದ್ಯರು ಇದಕ್ಕೆ ಬೆದರದೇ, ಮುಷ್ಕರ ಮುಂದು ವರಿಸಿದ್ದಾರೆ.
ಅಲ್ಲದೆ ವೈದ್ಯರ ಒಂದು ತಂಡವು ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಯವರನ್ನು ಭೇಟಿ ಮಾಡಿದ್ದು, ಪ್ರತಿಭಟನೆಗೆ ಸಿಎಂ ಪ್ರತಿಕ್ರಿಯೆಯನ್ನು ಖಂಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಭೇಟಿ ಅನಂತರ ಮಾತನಾಡಿದ ವೈದ್ಯರು, ನಾವು ರಾಜ್ಯಪಾಲರ ಜತೆ ಮಾತನಾಡಿದ್ದೇವೆ. ಸಿಎಂ ಜತೆಗೆ ಚರ್ಚೆ ನಡೆಸುವ ಭರವಸೆ ನೀಡಿದ್ದಾರೆ ಎಂದಿದ್ದಾರೆ. ಎಲ್ಲ ಆಸ್ಪತ್ರೆಗಳಲ್ಲೂ ಸಶಸ್ತ್ರ ಪೊಲೀಸ್ ಭದ್ರತೆ ನೀಡಿ ಹಾಗೂ ಆಸ್ಪತ್ರೆ ಮೇಲೆ ದಾಳಿ ನಡೆಸಿದವರನ್ನು ಬಂಧಿಸಿ ಎಂಬುದಾಗಿ ವೈದ್ಯರು ಬೇಡಿಕೆ ಇಟ್ಟಿದ್ದಾರೆ.
ವೈದ್ಯರ ಪ್ರತಿಭಟನೆಯು ಬಿಜೆಪಿ ಹಾಗೂ ಸಿಪಿಎಂ ಕುತಂತ್ರ. ಆಸ್ಪತ್ರೆ ಆವರ ಣದಲ್ಲಿ ವೈದ್ಯರ ಬದಲಿಗೆ ಬಿಜೆಪಿ ಕಾರ್ಯಕರ್ತರುಗಳೇ ಇದ್ದಾರೆ ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಪಕ್ಷಗಳು ಮಮತಾ ನಡೆಯನ್ನು ತೀವ್ರವಾಗಿ ಖಂಡಿಸಿವೆ. ಸಮಸ್ಯೆಯನ್ನು ಪರಿಹರಿಸುವ ಬದಲಿಗೆ ಮಮತಾ ಬೆದರಿಕೆ ಒಡ್ಡುತ್ತಿದ್ದಾರೆ. ತತ್‌ಕ್ಷಣ ಮಮತಾ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಉಪಾ ಧ್ಯಕ್ಷ ಜಯ ಪ್ರಕಾಶ್ ಮಜುಂದಾರ್ ಆಗ್ರಹಿಸಿದ್ದಾರೆ.
ಸರ್ವಪಕ್ಷ ಸಭೆ ವಿಫಲ: ಈ ನಡುವೆ, ರಾಜ್ಯದಲ್ಲಿನ ರಾಜಕೀಯ ಹಿಂಸಾ ಚಾರ ಕೊನೆಗಾಣಿಸುವ ನಿಟ್ಟಿನಲ್ಲಿ ರಾಜ್ಯಪಾಲರು ಗುರುವಾರ ಕರೆದಿದ್ದ ಸರ್ವಪಕ್ಷ ಸಭೆ ವಿಫಲವಾಗಿದೆ. ರಾಜ್ಯ ಪಾಲರು ಕೆಲವು ಸಲಹೆ ಕೊಟ್ಟರೂ, ಟಿಎಂಸಿ ಪ್ರತಿನಿಧಿಯು ಪಕ್ಷದೊಂದಿಗೆ ಚರ್ಚಿಸಿಯೇ ನಿರ್ಧರಿಸುವುದು ಎಂದು ಹೇಳಿದ್ದಾಗಿ ಬಿಜೆಪಿ ತಿಳಿಸಿದೆ.