ಮೈಸೂರು: ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ(ಕೆಪಿಎಂಇ) ವಿರೋಧಿಸಿ ಖಾಸಗಿ ವೈದ್ಯಕೀಯ ಸಂಘ ಹಮ್ಮಿಕೊಂಡಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಸೋಮವಾರ ನಗರದ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಲಾಗಿತ್ತು.
ಬೆಳಗಾವಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವ ಸಲುವಾಗಿ ನಗರದ ವಿವಿಧ ಖಾಸಗಿ ಆಸ್ಪತ್ರೆಗಳ ನೂರಾರು ವೈದ್ಯರು ಸೋಮವಾರ ಮೈಸೂರು ನಗರ ಖಾಸಗಿ ಆಸ್ಪತ್ರೆಗಳ ಸಂಘ, ಭಾರತೀಯ ವೈದ್ಯಕೀಯ ಸಂಘದ ಮೈಸೂರು ಶಾಖೆ ನೇತೃತ್ವದಲ್ಲಿ ಮೈಸೂರಿನಿಂದ ಬೆಳಗಾವಿಗೆ ತೆರಳಿದ್ದರು. ಹೀಗಾಗಿ ನಗರ ಹಾಗೂ ಜಿಲ್ಲೆಯ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳು ಸಂಪೂರ್ಣ ಸ್ಥಗಿತವಾಗಿತ್ತು.
ಪ್ರಮುಖವಾಗಿ ನಗರದ ಜೆಎಸ್‌ಎಸ್ ಆಸ್ಪತ್ರೆ, ಕೊಲಂಬಿಯಾ ಏಷಿಯಾ ಆಸ್ಪತ್ರೆ, ಬಿಜಿಎಸ್ ಅಪೋಲೋ ಆಸ್ಪತ್ರೆ, ಶಾಂತವೇರಿಗೋಪಾಲಗೌಡ ಆಸ್ಪತ್ರೆ, ಕಾಮಾಕ್ಷಿ ಆಸ್ಪತ್ರೆ, ಸೇಂಟ್ ಜೋಸೆಫ್, ಸೇಂಟ್ ಜಾನ್ಸ್ ಆಸ್ಪತ್ರೆ, ಮಿಷನ್ ಆಸ್ಪತ್ರೆ, ಸಿಗ್ಮಾ ಸೇರಿದಂತೆ ನಗರದ 120 ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳು, ಡಯಾಗ್ನೊಸ್ಟಿಕ್‌ಸೆಂಟರ್‌ಗಳು ಬಂದ್ ಆಗಿತ್ತು.
ಹೀಗಾಗಿ ತುರ್ತು ಪರಿಸ್ಥಿತಿ ಪ್ರಕರಣ ಹೊರತುಪಡಿಸಿ ಉಳಿದ ಯಾವುದೇ ರೋಗಿಗಳನ್ನು ದಾಖಲು ಮಾಡಿಕೊಳ್ಳಲಿಲ್ಲ. ಆಸ್ಪತ್ರೆಗಳಲ್ಲಿನ ಒಳರೋಗಿಗಳಾಗಿ ದಾಖಲೆಯಾಗಿದ್ದವರಿಗೆ ಚಿಕಿತ್ಸೆ ಕಾರ್ಯ ಮುಂದುವರಿದಿದ್ದರೆ, ಹೊರರೋಗಿಗಳಾಗಿ ತಪಾಸಣೆಗೆಂದು ಬಂದವರಿಗೆ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಲಾಯಿತು.
ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಯಿತು. ವಿವಿಧ ಚಿಕಿತ್ಸೆಗೆಂದು ಆಸ್ಪತ್ರೆಗಳಿಗೆ ಬಂದಿದ್ದ ರೋಗಿಗಳು ಸೂಕ್ತ ಚಿಕಿತ್ಸೆ ಲಭಿಸದ ಪರಿಣಾಮ ಅನೇಕರು ಕೆ.ಆರ್.ಆಸ್ಪತ್ರೆಗೆ ಲಗ್ಗೆಯಿಟ್ಟರು, ಇದರಿಂದಾಗಿ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಸೇರಿದಂತೆ ಇನ್ನಿತರ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಹಾಜರಿ ಪ್ರಮಾಣ ಹೆಚ್ಚಾಗಿತ್ತು.