Advertisement

ದಾವಣಗೆರೆಯಲ್ಲೂ ವೈದ್ಯರ ಪ್ರತಿಭಟನೆ

10:36 AM Jun 18, 2019 | Suhan S |

ದಾವಣಗೆರೆ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲೂ ಸೋಮವಾರ ಖಾಸಗಿ ಹಿರಿಯ, ಕಿರಿಯ ವೈದ್ಯರು ಪ್ರತಿಭಟನೆ ನಡೆಸಿದರು.

Advertisement

ವೈದ್ಯರ ಹೋರಾಟದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 6 ರಿಂದ ಮಂಗಳವಾರ ಬೆಳಗ್ಗೆ 6ರ ವರೆಗೆ ಹೊರ ರೋಗಿಗಳ ವಿಭಾಗ ಮುಚ್ಚಿದ್ದರ ಪರಿಣಾಮ ರೋಗಿಗಳು ಪರದಾಡುವಂತಾಯಿತು. ಸೋಮವಾರ ಬೇರೆ ಬೇರೆ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಸ್ಪತ್ರೆಗಳಿಗೆ ದೌಡಾಯಿಸುವುದು ಸಾಮಾನ್ಯ. ವೈದ್ಯರ ಪ್ರತಿಭಟನೆಯ ಬಗ್ಗೆ ಗೊತ್ತಿಲ್ಲದೇ ಬಂದವರು ತೊಂದರೆ ಅನುಭವಿಸಿದರು. ತುರ್ತು ಚಿಕಿತ್ಸೆ ಮತ್ತು ಹೆರಿಗೆ ವಿಭಾಗಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ಬಾಪೂಜಿ ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಇಂಡಿಯನ್‌ ಅಕಾಡೆಮಿ ಆಫ್‌ ಪಿಡಿ ಯಾಟ್ರಿಕ್ಸ್‌ ಹಾಗೂ ಭಾರತೀಯ ವೈದ್ಯ ಕೀಯ ಜಿಲ್ಲಾ ಶಾಖೆ, ಜೂನಿಯರ್ ಡಾಕ್ಟರ್‌ ಅಸೋಸಿಯೇಷನ್‌, ಜೆಜೆಎಂ ಸ್ಟೂಡೆಂಟ್ ಯೂನಿಯನ್‌ ವೈದ್ಯರ ನೇತೃತ್ವದಲ್ಲಿ ಜಮಾಯಿಸಿದ ಹಿರಿಯ, ಕಿರಿಯ ಖಾಸಗಿ ವೈದ್ಯರು ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿ ದರು. ವೈದ್ಯರು ಮತ್ತು ವೈದ್ಯಕಿಯೇತರ ಸಿಬ್ಬಂದಿಗೆ ಹೆಚ್ಚಿನ ರಕ್ಷಣೆಗೆ ಒತ್ತಾಯಿಸಿದರು. ಹಾಲಿ ಜಾರಿಯಲ್ಲಿರುವ ಕಾನೂನನ್ನು ಇನ್ನೂ ಹೆಚ್ಚು ಬಿಗಿಗೊಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

ನಾವು ಭಯೋತ್ಪಾದಕರಲ್ಲ ವೈದ್ಯರು. ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಎಂದಿಗೂ ಸಲ್ಲದು ಮುಂತಾದ ಘೋಷಣೆಗಳನ್ನು ಕೂಗುತ್ತಾ ಪಶ್ಚಿಮ ಬಂಗಾಳದಲ್ಲಿ ನಡೆಸಿದ ವೈದ್ಯರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು.

ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯ ಮೆಡಿಕಲ್ ನಿರ್ದೇಶಕ ಡಾ| ಎನ್‌.ಕೆ. ಕಾಳಪ್ಪನವರ್‌ ಮಾತನಾಡಿ, ಕೊಲ್ಕತ್ತಾದ ಎನ್‌ಆರ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯನಿರತ ಯುವ ವೈದ್ಯೆ ಡಾ| ಪ್ರತಿಭಾ ಮುಖರ್ಜಿ ಸೇರಿದಂತೆ ಇಬ್ಬರು ವೈದ್ಯರ ಮೇಲೆ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯ. ಈ ರೀತಿ ರಾಜ್ಯದಲ್ಲೂ ಪದೇ ಪದೇ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದ್ದರೆ ವೈದ್ಯರಿಗೆ ಯಾರು ರಕ್ಷಣೆ ಒದಗಿಸಬೇಕು? ಎಂದು ಪ್ರಶ್ನಿಸಿದ‌ರಲ್ಲದೇ, ಸರ್ಕಾರ ವೈದ್ಯರಿಗೆ ಮೊದಲು ರಕ್ಷಣೆ ಒದಗಿಸಬೇಕು. ಹಲ್ಲೆ ನಡೆಸುವ ಜನರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

Advertisement

ಐಎಂಎ ಜಿಲ್ಲಾಧ್ಯಕ್ಷ ಡಾ| ಗಣೇಶ್‌ ಇಡಗುಂಜಿ ಮಾತನಾಡಿ, ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಬೇಕು. ವೈದ್ಯರ ಮೇಲೆ ಹಲ್ಲೆ ನಡೆದಾಗ ಹಲ್ಲೆ ಮಾಡಿದವರಿಗೆ ಕಾನೂನಿನಡಿ ವಿಧಿಸಲು ಆದೇಶವಿರುವ ಶಿಕ್ಷೆಯ ಪ್ರಮಾಣವನ್ನು ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ನಂತರ ಬಾಪೂಜಿ ಮಕ್ಕಳ ಆಸ್ಪತ್ರೆದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಗುಂಡಿ ವೃತ್ತ, ಸಿ.ಜೆ. ರೋಡ್‌, ಸಿಟಿ ಸೆಂಟ್ರಲ್ ಆಸ್ಪತ್ರೆ ರಸ್ತೆ, ಅಂಬೇಡ್ಕರ್‌ ವೃತ್ತ, ಜಯದೇವ ವೃತ್ತದ ಮಾರ್ಗವಾಗಿ ಗಾಂಧಿ ವೃತ್ತಕ್ಕೆ ತೆರಳಿ ಮೆರವಣಿಗೆ ಕೊನೆಗೊಳಿಸಿದರು. ನಂತರ ಕೆಲ ವೈದ್ಯರು ಎಸ್ಪಿ ಕಚೇರಿಗೆ ತೆರಳಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಟಿ.ಜೆ. ಉದೇಶ್‌ ಅವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದಂತೆ ರಕ್ಷಣೆ ಕೋರಿ ಮನವಿ ಸಲ್ಲಿಸಿದರು.

ಜೆಜೆಎಂ ಮೆಡಿ ಕಲ್ ಕಾಲೇಜಿನ ಪ್ರಾಚಾರ್ಯ ಡಾ| ಎಸ್‌.ಬಿ. ಮುರುಗೇಶ್‌, ಭಾರತೀಯ ಮೆಡಿಕಲ್ ಸರ್ವಿಸ್‌ ಸೆಂಟರ್‌ನ ರಾಜ್ಯ ಕಾರ್ಯದರ್ಶಿ ಡಾ| ಎನ್‌. ವಸುಧೇಂದ್ರ, ಜೆಜೆಎಂ ಸ್ಟೂಡೆಂಟ್ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಮೀರ್‌ ಲುಕ್ಮಾನ್‌ ಮೆಹದಿ, ಜೂನಿಯರ್ ಡಾಕ್ಟರ್‌ ಅಸೋಸಿಯೇಷನ್‌ನ ಅಧ್ಯಕ್ಷ ಡಾ| ಪ್ರತ್ಯಕ್ಷ ವೈಷ್ಣವ್‌, ಡಾ| ಪ್ರವೀಣ್‌ ಅನ್ವೇಕರ್‌, ಡಾ| ಕಡ್ಲಿ, ಡಾ| ನಾಗಪ್ರಕಾಶ್‌,ಡಾ|ರವಿ, ಡಾ| ಮಾವಿನತೋಪು, ಡಾ| ಎಂ.ಎಂ. ಶಿವಕುಮಾರ್‌, ಡಾ| ಪ್ರೇಮಾ ಪ್ರಭುದೇವ್‌, ಡಾ| ಶಶಿಕಲಾ ಕೃಷ್ಣಮೂರ್ತಿ, ಡಾ| ಬಂದಮ್ಮ, ಡಾ| ರಶ್ಮಿ ಹೆಗಡೆ, ಡಾ| ಸಪ್ನ, ಡಾ| ಲತಾ ಸೇರಿದಂತೆ ನೂರಾರು ಹಿರಿಯ-ಕಿರಿಯ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next