ಹೊಸದಿಲ್ಲಿ: ಕೋವಿಡ್ ದಿಂದಾಗಿ ಸತ್ತ ವ್ಯಕ್ತಿಯ ಶವದ ಒಳಗೆ ಎಷ್ಟು ಸಮಯದ ತನಕ ವೈರಸ್ ಜೀವಂತವಾಗಿರುತ್ತದೆ ಹಾಗೂ ವೈರಸ್ ಅಂಗಾಂಗದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಕಂಡು ಹಿಡಿಯುವುದಕ್ಕಾಗಿ ಅಧ್ಯಯನ ನಡೆಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿಧಿ ವಿಜ್ಞಾನ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ತಿಳಿಸಿದ್ದಾರೆ. “ಅಧ್ಯಯನ ನಡೆಸುವ ಮೊದಲು ಕಾನೂನಾತ್ಮಕ ಸಮ್ಮತಿಯನ್ನು ಪಡೆಯಲಾಗುತ್ತದೆ, ರೋಗ ಶಾಸ್ತ್ರ ಹಾಗೂ ಸೂಕ್ಷ್ಮ ಜೀವ ವಿಜ್ಞಾನದಂತಹ ಇನ್ನೂ ಅನೇಕ ವಿಜ್ಞಾನ ವಿಭಾಗಗಳು ಅಧ್ಯಯನದಲ್ಲಿ ಭಾಗಿಯಾಗಲಿವೆ. ಕೋವಿಡ್ ರೋಗಿಯ ದೇಹವನ್ನು ಪ್ರವೇಶಿಸಿದ ಬಳಿಕ ಏನು ಮಾಡುತ್ತದೆ, ದೇಹ ದೊಳಗೆ ಹೇಗೆಲ್ಲ ವರ್ತಿಸುತ್ತದೆ, ಯಾವ ರೀತಿಯಲ್ಲಿ ಅಂಗಾಂಗ ಹಾನಿ ಮಾಡುತ್ತದೆ, ರೋಗಿ ಸತ್ತ ನಂತರವೂ ಎಷ್ಟು ಸಮಯ ವೈರಸ್ ಜೀವಂತವಾಗಿರುತ್ತದೆ ಎನ್ನುವಂತಹ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕಿದೆ’ ಎಂದು ಗುಪ್ತಾ ವಿವರಿಸಿದರು.
ಶವಗಳಿಂದ ಸೋಂಕು ಹರಡಲ್ಲ
ಮೃತದೇಹಗಳಿಂದ ಕೋವಿಡ್ ಸೋಂಕು ಹರಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಹೀಗಾಗಿ ಮುಂಬೈ ನಗರ ಪಾಲಿಕೆಗೆ (ಬಿಎಂಸಿ) ಕೋವಿಡ್ ದಿಂದ ಸಾವನ್ನಪ್ಪುವ ರೋಗಿಗಳ ಶವಗಳನ್ನು ಯಾವುದೇ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿ ಸುವ ಅಧಿಕಾರ ಇದೆ ಎಂದು ಬಾಂಬೆ ಹೈ ಕೋರ್ಟ್ ತಿಳಿಸಿದೆ. ಕೋವಿಡ್ ಸೋಂಕಿನಿಂದ ಮೃತಪಡುವ ರೋಗಿಗಳ ಶವಗಳನ್ನು ಅಂತ್ಯಕ್ರಿಯೆ ನಡೆಸಲು ಮುಂಬೈ ನಗರ ಪಾಲಿಕೆಯು, 20 ಸ್ಮಶಾನ ಭೂಮಿಗಳನ್ನು ಗುರುತಿಸಿತ್ತು. ಈ ಕ್ರಮದಿಂದ ಜನರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಈ ಸ್ಮಶಾನ ಭೂಮಿಗಳಲ್ಲಿ ಶವಗಳ ಅಂತ್ಯಕ್ರಿಯೆಗೆ ಅವಕಾಶ ನೀಡಬಾರದು ಎಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.