ಪಣಂಬೂರು ನಂದನೇಶ್ವರ ದೇವಸ್ಥಾನದ ಆಶ್ರಯದಲ್ಲಿ ರಚನೆಯಾಗಿರುವ ನಗುವ, ನಗಿಸುವ ಗೆಳೆಯರು (ನನಗೆ) ಎಂಬ ವಿಶಿಷ್ಟ ಹೆಸರಿನ ಸಾಂಸ್ಕೃತಿಕ ಸಂಸ್ಥೆ. ಅದರ ವತಿಯಿಂದ ಜರಗಿದ ಆಖ್ಯಾನ “ಅರ್ಬುದಾಸುರ ಗರ್ವಭಂಗ’. ನಗರದ ಖ್ಯಾತ ವೈದ್ಯರ ತಂಡ ಮತ್ತು ಪಿ.ವಿ. ಐತಾಳ ಇಂಗ್ಲಿಷ್ ಯಕ್ಷಗಾನ ಮಂಡಳಿಯ ಸಹಯೋಗದಲ್ಲಿ ಅದೇ ತಂಡದ ಸದಸ್ಯರ ಕೂಡುವಿಕೆಯಿಂದ ಅರ್ಬುದ ರೋಗ (ಕ್ಯಾನ್ಸರ್) ವಿರುದ್ಧ ಜನಜಾಗೃತಿ ಮೂಡಿಸುವ ಒಂದು ವಿಶಿಷ್ಟ ಪ್ರಯೋಗ. ವೈದ್ಯರಾದ ಡಾ| ಅಣ್ಣಯ್ಯ ಕುಲಾಲ್ ಮತ್ತು ಡಾ| ಸತ್ಯಮೂರ್ತಿ ಐತಾಳ್ ಈ ಪ್ರಸಂಗಕ್ಕೆ ಕಥಾವಸ್ತು ನೀಡಿ, ಅರ್ಥದಾರಿ, ಪ್ರಸಂಗಕರ್ತ ನಿತ್ಯಾನಂದ ಕಾರಂತ ಪೊಳಲಿ ಇವರು ಪದ್ಯರಚನೆ ಮಾಡಿದ್ದಾರೆ.
ದೇವ ಭಗವಂತನ ರಂಗಪ್ರವೇಶದೊಂದಿಗೆ ಯಕ್ಷಗಾನ ಪ್ರಾರಂಭವಾಗುತ್ತದೆ. ಲೋಕದಲ್ಲಿ ನಡೆಯುವ ಅವ್ಯವಹಾರ, ದುಶ್ಚಟಗಳ ಮೇಲಾಟ, ಇದನ್ನು ನಿಗ್ರಹಿಸುವ ಬಗ್ಗೆ ಅರಿವು ಮೂಡಿಸುವ ಪ್ರಯತ್ನದೊಂದಿಗೆ ದೇವ ಭಗವಂತನ ಪ್ರವೇಶ ಮುಗಿಯುತ್ತದೆ.ಅರ್ಬುದಾಸುರನ ಒಡ್ಡೋಲಗದಲ್ಲಿ ಏಡ್ಸಾಸುರ ಮತ್ತು ದುವ್ಯìಸನಾಸುರ ಎಂಬಿಬ್ಬರು ರಾಕ್ಷಸರ ಪ್ರವೇಶವಾಗುತ್ತದೆ. ಲೋಕ ಕಂಟಕರಾಗಿ ಮೆರೆಯುವ ಈ ಮೂವರು ರಾಕ್ಷಸರು ಜನರಿಗೆ ಯಾವ ರೀತಿ ಈ ರೋಗಗಳನ್ನು ಪಸರಿಸುವುದೆಂದು ಯೋಚಿಸುತ್ತಾರೆ. ಮಾಯಾ ವಿಷಕನ್ಯೆಯರ ಮೂಲಕ ರೋಗಗಳನ್ನು ಪಸರಿಸಲು ಹುರಿದುಂಬಿಸುತ್ತಾರೆ. ನಾಟಕದಲ್ಲಿ ಬರುವ ಪಾತ್ರದಂತೆ ರಂಗದ ಮುಂಭಾಗದಿಂದ ಎದ್ದು ಬರುವ ಕುಡುಕ ಪಾತ್ರಧಾರಿ ಕುಡಿಯುತ್ತಲೇ ರಂಗ ಪ್ರವೇಶಿಸುತ್ತಾನೆ.
ಕುಡುಕ, ಗುಟ್ಕ ವ್ಯಸನಿ ಮತ್ತು ಧೂಮಪಾನಿಗಳು ಇಲ್ಲಿ ಹಾಸ್ಯ ಪಾತ್ರದಾರಿಗಳಂತೆ ಗೋಚರಿಸುತ್ತಾರೆ. ನಾಟ್ಯದ ಗಂಧಗಾಳಿ ಗೊತ್ತಿರದ ಈ ಪಾತ್ರಧಾರಿ ನಾಟಕದಲ್ಲಿ ನೋಡಿದ ಯಾವುದೇ ಪಾತ್ರದಂತೆ ಕಾಣಿಸುತ್ತದೆ. ಕೆಲವೊಂದು ಕಡೆ ಇದು ನಾಟಕವೋ? ಯಕ್ಷಗಾನವೋ ಎಂಬ ಅನುಮಾನ ಉಂಟಾಗುತ್ತದೆ. ಕುಡುಕ, ಗುಟ್ಕ ವ್ಯಸನಿ, ಧೂಮಪಾನಿ ಧರ್ಮಗುರುಗಳ ಬಳಿ ತೆರಳಿ ತಮಗೆ ದುವ್ಯìಸನಗಳಿಂದ ಮುಕ್ತಿ ಸಿಗುವಂತೆ ಮಾಡಿ ಎನ್ನುವ ಸನ್ನಿವೇಶ ನಿಜಕ್ಕೂ ಯಕ್ಷಗಾನದಲ್ಲೂ ಹೀಗೂ ಉಂಟಾ ಎಂಬ ಸಂದೇಹ ಮೂಡಿಸುತ್ತದೆ. ಪದಗಳ ಉಚ್ಛಾರ ಸ್ಪಷ್ಟತೆ ಇಷ್ಟವಾಗುತ್ತದೆ.
ಕ್ರಮೇಣ ಯಕ್ಷಗಾನ ರಂಗದಲ್ಲಿಯೇ ಬರುವ ವೈದ್ಯರುಗಳು ರೋಗಗಳು ಹೇಗೆ ಬರುತ್ತವೆ, ಅವುಗಳನ್ನು ಹೋಗಲಾಡಿಸುವ ಪರಿ ಹೇಗೆ ಎಂದು ವಿವರಿಸುವ ಸನ್ನಿವೇಶ ವೈದ್ಯರು ರೋಗಿಗೆ ನೀಡುವ ಕೌನ್ಸಲಿಂಗ್‌ನಂತೆ ಕಾಣುತ್ತದೆ. ಸ್ತ್ರೀರೋಗ ತಜ್ಞೆ ಸ್ತ್ರೀ ಪಾತ್ರಧಾರಿ ವೇಷಭೂಷಣಗಳಿಲ್ಲದೆ ನಿತ್ಯದ ಸೀರೆಯಲ್ಲಿ ಬಂದು ಸ್ತ್ರೀ ರೋಗದ ಬಗ್ಗೆ ನೀಡುವ ಸಲಹೆ ಯಾವುದೇ ಮೆಡಿಕಲ್ ಕೌನ್ಸಲಿಂಗ್‌ಗೆ ಕಡಿಮೆಇಯಿಲ್ಲ. ಕೊನೆಗೆ ಔಷಧ ಕುಮಾರಿ, ಔಷಧ ಕುಮಾರರ ರಂಗ ಪ್ರವೇಶದೊಂದಿಗೆ ಅಬುìದಾಸುರ, ಏಡಾÕಸುರ, ದುವ್ಯìಸನಾಸುರರನ್ನು ಮಣಿಸುವ ಮೂಲಕ ಈ ಆಖ್ಯಾನ ಅಂತ್ಯ ಕಾಣುತ್ತದೆ. ಪೊಳಲಿಯವರ ಛಂದಸ್ಸು ಸಹಿತವಾದ ಪದ್ಯ ಮುದ ನೀಡುತ್ತದೆ. ಇಂಗ್ಲಿಷ್‌ನಲ್ಲೇ ವ್ಯವಹರಿಸುವ ವೈದ್ಯರ ಕನ್ನಡ ಉಚ್ಛಾರ ಹಿತವೆನಿಸುತ್ತದೆ.
ದೇವ ಭಗವಂತನ ಪಾತ್ರ ಮಾಡಿದ ಡಾ| ಸತ್ಯಮೂರ್ತಿ ಐತಾಳ್ ಅವರು ಹವ್ಯಾಸಿ ಯಕ್ಷಗಾನ ಕಲಾವಿದ. ಇವರ ಅಭಿನಯ ಚೆನ್ನಾಗಿತ್ತು. ಅಬುìದಾಸುರನಾಗಿ ಶಿವತೇಜರ ನಟನೆಯೂ ಅದ್ಭುತವಾಗಿತ್ತು. ಏಡಾÕಸುರ ಮತ್ತು ದುವ್ಯìಸನಾಸುರರಾಗಿ ಶ್ರೀಜಿತ್ ಲಿಂಗ ಮತ್ತು ಸ್ಕಂದ ಕೊನ್ನಾರ್ ತಮ್ಮ ಪಾತ್ರಕ್ಕೆ ತಕ್ಕಂತೆ ನಟಿಸಿದರು. ವಿಷಕನ್ಯೆಯಾಗಿ ಸಚಿನ್ ಉದ್ಯಾವರ, ಮಾಯಾ ವಿಷಕನ್ಯೆ ಹೆಸರಾಂತ ಯಕ್ಷಗಾನ ಸ್ತ್ರೀಪಾತ್ರದಾರಿ ರವಿ ಅಲೆವೂರಾಯ, ಕುಡುಕನಾಗಿ ನ್ಯಾಯವಾದಿ, ಹವ್ಯಾಸಿ ಯಕ್ಷ ಕಲಾವಿದ ಸಂತೋಷ್ ಐತಾಳ್, ಗುಟ್ಕ ವ್ಯಸನಿಯಾಗಿ ವೈದ್ಯ ಜೆ.ಎನ್. ಭಟ್, ಧೂಮಪಾನಿಯಾಗಿ ಡಾ| ದಿನೇಶ್‌ಚಂದ್ರ, ಧರ್ಮಗುರುಗಳಾಗಿ ಡಾ| ಅಣ್ಣಯ್ಯ ಕುಲಾಲ್, ಕ್ರೈಸ್ತ ಗುರು ಡಾ| ಜೆರೋಮ್ ಪಿಂಟೋ, ಮುಸಲ್ಮಾನ ಗುರು ಡಾ| ಇಮ್ರಾನ್ ಪಾಷಾ, ಸಿಖ್ ಗುರು ಡಾ| ಹರೀಶ್ ಮಡಿವಾಳ್ ವೈದ್ಯರುಗಳು – ಡಾ| ಜನಾರ್ದನ ಐತಾಳ್, ಡಾ| ಜಿ.ಕೆ. ಭಟ್ ಔಷಧ ಕುಮಾರಿ – ಡಾ| ವಿಶ್ರುತ ಐತಾಳ್, ಔಷಧ ಕುಮಾರ್ ಡಾ| ಪಿ. ಶಿವಪ್ರಸಾದ್ ಕಾರಂತ ತಮ್ಮ ಅಭಿನಯದಿಂದ ರಂಗದಲ್ಲಿ ಮಿಂಚಿದರು.
ಯೋಗೀಶ ಕಾಂಚನ್, ಬೈಕಂಪಾಡಿ