Advertisement

ವೈದ್ಯರ ನಿರ್ಲಕ್ಷ್ಯ: ಶಸ್ತ್ರ ಚಿಕಿತ್ಸೆ ವೇಳೆ ರೋಗಿ ಸಾವು

06:18 PM Jun 23, 2022 | Team Udayavani |

ಎಚ್‌.ಡಿ.ಕೋಟೆ: ಶಸ್ತ್ರಚಿಕಿತ್ಸೆ ವೇಳೆ ರೋಗಿಯೊಬ್ಬ ಮೃತಪಟ್ಟಿದ್ದು, ಘಟನೆಗೆ ವೈದ್ಯರ ನಿರ್ಲಕ್ಷ್ಯತನ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಆವರಣದಲ್ಲಿ ಸಂಬಂಧಿಕರು ಮೃತ ದೇಹವಿಟ್ಟು ರಸ್ತೆತಡೆ ನಡೆಸಿ ಆಸ್ಪತ್ರೆಗೆ ಕಲ್ಲುತೂರಿ ಗಾಲು ಪುಡಿಪುಡಿ ಮಾಡಿದ ಘಟನೆ ಪಟ್ಟಣದ ಸೆಂಟ್‌ ಮೇರಿಸ್‌ ಆಸ್ಪತ್ರೆಯಲ್ಲಿ ನಡೆದಿದೆ.

Advertisement

ಎಚ್‌.ಡಿ.ಕೋಟೆ ಪಟ್ಟಣದ ನಿವಾಸಿ ಹೀಮಾನ್‌ ವೆಲ್‌ (21) ಮೃತಪಟ್ಟ ಯುವಕ. ಹೀಮಾನ್‌ ಹಲವು ದಿನಗಳಿಂದ ಅನಾರೋಗದಿಂದ ಬಳಲುತ್ತಿದ್ದು, ತಪಾಸಣೆ ನಡೆಸಿದ ವೈದ್ಯರು ಯುವಕನಿಗೆ ಕರುಳಿನಲ್ಲಿ ಗುಳ್ಳೆ(ಅಪೆಂಡಿಕ್ಸ್‌) ಗಳಾಗಿವೆ. ಶಸ್ತ್ರಚಿಕಿತ್ಸೆ ನೆರವೇರಿಸಿ ಗುಣಪಡಿಸಬೇಕೆಂದು ಪಟ್ಟಣದ ಸೆಂಟ್‌ ಮೇರಿಸ್‌ ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಅದರಂತೆಯೇ ಮಂಗಳವಾರ ಯುವಕನಿಗೆ ಆಸ್ಪತ್ರೆಯಲ್ಲಿ ಸುಮಾರು 3 ತಾಸಿಗೂ ಅಧಿಕ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದರು. ಅಂತಿಮ ಕ್ಷಣದಲ್ಲಿ ರಕ್ತದೊತ್ತಡ ತೀರ ಇಳಿಕೆಯಾಗುತ್ತಿದ್ದು ಕೂಡಲೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ತರಾತುರಿಯಲ್ಲಿ ಸಲಹೆ ನೀಡಿದರು. ಆಸ್ಪತ್ರೆಗೆ ಸಾಗಿಸುವಾಗ ಯುವಕ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ.ಘಟನೆಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿ ಮೃತನ ಪೋಷಕರ ಜೊತೆಗೂಡಿ ನೂರಾರು ಮಂದಿ ಬುಧವಾರ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆಗೆ ಮುಂದಾದರು.

ಏಕಾಏಕಿ ಆಸ್ಪತ್ರೆ ಮುಂದಿನ ಹುಣಸೂರು- ಬೇಗೂರು ರಸ್ತೆ ತಡೆ ನಡೆಸಿ ರಸ್ತೆ ಮಧ್ಯದಲ್ಲಿಯೇ ಕುಳಿತು ಆಸ್ಪತ್ರೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಹಾಕಿದರು. ಈ ಸಂದರ್ಭದಲ್ಲಿ ಶಾಲಾ ಕಾಲೇಜಿಗೆ ತೆರಳಬೇಕಾದ ವಿದ್ಯಾರ್ಥಿಗಳು, ವಯೋವೃದ್ಧರು ಕೆಲಕಾಲ ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.

ಆಸ್ಪತ್ರೆಯತ್ತ ಕಲ್ಲು ತೂರಾಟ: ಸ್ಥಳಕ್ಕೆ ಧಾವಿಸಿದ ಪೊಲೀಸರು ರಸ್ತೆ ತಡೆ ಕಾನೂನು ಬಾಹಿರ ಸಾರ್ವಜನಿಕರಿಗೆ ತೊಂದರೆ ನೀಡದೆ ಆಸ್ಪತ್ರೆಯತ್ತ ತೆರಳುವಂತೆ ಸಲಹೆ ನೀಡಿದಾಗ ಏಕಾಏಕಿ ಆಸ್ಪತ್ರೆ ಬಳಿಗೆ ತೆರಳಿದ ಪ್ರತಿಭಟನಾಕಾರ ಯುವಕರ ಗುಂಪಿನ ಹಲವು ಮಂದಿ ಆಸ್ಪತ್ರೆಯತ್ತ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಅಳವಡಿಸಿದ್ದ ಗಾಜು ಪುಡಿಪುಡಿಯಾಯಿತು.

Advertisement

ಮಧ್ಯ ಪ್ರವೇಶಿಸಿದ ಪೊಲೀಸರು ಮತ್ತು ಪ್ರಜ್ಞಾವಂತ ನಾಗರಿಕರು ಪ್ರತಿಭಟನೆಯ ಮಹತ್ವ ತಿಳಿಸಿ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನಾಕಾರರು ಕೆಲಕಾಲ ಪಟ್ಟು ಹಿಡಿದಾಗ ಆಸ್ಪತ್ರೆ ಬಳಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.

ಅಪೆಂಡಿಕ್ಸ್‌ನಿಂದ ಬಳಲುತ್ತಿದ್ದ ರೋಗಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿ ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ 2 ಬಾಾರಿ ಹೃದಯಾಘಾತ ಸಂಭವಿಸಿ ತೀವ್ರ ನಿತ್ರಾಣಗೊಂಡಾಗ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಇದರಲ್ಲಿ ವೈದ್ಯರ ನಿರ್ಲಕ್ಷ್ಯತನ ಇಲ್ಲ ಎಂದು ಆಸ್ಪತ್ರೆಯ ಶಸ್ತ್ರಚಿಕಿತ್ಸೆ ತಜ್ಞೆ ವೈದ್ಯೆ ಡಾ.ಹೀಲ್ಡಾಲೋಬೋ ಪ್ರತಿಕ್ರಿಯೆ ನೀಡಿದ್ದಾರೆ.

ಬಳಿಕ ಆಸ್ಪತ್ರೆ ಆಡಳಿತ ಮಂಡಳಿಯಿಂದ ಮೃತನ ಕುಟುಂಬಕ್ಕೆ 2.50 ಲಕ್ಷ ರೂ. ಪರಿಹಾರ ನೀಡುವ ಭರವಸೆ ನೀಡಿದಾಗಲೂ ಪ್ರತಿಭಟನಾಕಾರರಲ್ಲೇ ಮಾತಿನ ವಾಗ್ಧಾಳಿ ನಡೆದು ಅಂತಿಮವಾಗಿ ಮೃತದೇಹವನ್ನು ವಾರಸುದಾರರು ಶವಸಂಸ್ಕಾರಕ್ಕೆ ಸ್ಥಳಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next